*ಲಿವರ್ ಗೆ ಮಾರಕ ಮಾಡರ್ನ್ ಲೈಫ್‌ಸ್ಟೈಲ್‌- ತಜ್ಞರ ಎಚ್ಚರಿಕೆ*

varthajala
0

ದೇಹದ ಆರೋಗ್ಯ ಕಾಪಾಡುವಲ್ಲಿ ಯಕೃತ್ತು (Liver) ಪ್ರಮುಖ ಪಾತ್ರ ವಹಿಸುತ್ತದೆ. ಹಲವಾರು ಕಾರಣಗಳಿಂದಾಗಿ ಜನರು ಹೆಪಟೈಟಿಸ್‌ನಂತಹ ಗಂಭೀರ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಹೆಪಟೈಟಿಸ್‌ ಎಂಬುದು ಲಿವರ್‌ಗೆ ಸಂಬಂಧಿಸಿದ ಕಾಯಿಲೆಯಾಗಿದ್ದು,  ಈ ಬಗ್ಗೆ ಜನರಲ್ಲಿ ಹೆಚ್ಚು ಅರಿವು ಮೂಡಿಸುವ ಅಗತ್ಯವಿದೆ. ಈ  ನಿಟ್ಟಿನಲ್ಲಿ ಪ್ರತಿವರ್ಷ ಜುಲೈ 28ರಂದು ವಿಶ್ವ ಹೆಪಟೈಟಿಸ್‌ (World Hepatitis Day) ದಿನವನ್ನು ಆಚರಿಸಲಾಗುತ್ತದೆ. ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಮತ್ತು ಅನುಸರಿಸಬೇಕಾದ ಕ್ರಮಗಳ ಕುರಿತಾಗಿ ಬೆಂಗಳೂರಿನ ವಾಸವಿ ಆಸ್ಪತ್ರೆಯ ಆಹಾರ ತಜ್ಞರಾದ ಡಾ. ಟಿ. ರಮಾಲಕ್ಷ್ಮಿ ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 

ಆಧುನಿಕ ಜೀವನಶೈಲಿಯು ನಮ್ಮ ದೈನಂದಿನ ಬದುಕಿನ ಮೇಲೆ ಮಹತ್ತರವಾದ ಬದಲಾವಣೆ ಮಾಡಿದೆ. ಇದರಿಂದ ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ನಮ್ಮ ಪೂರ್ವಿಕರಿಗೆ ಹೋಲಿಸಿದರೆ, ಇಂದಿನ ಜೀವನಶೈಲಿ ಹೆಚ್ಚಾಗಿ ನಿಷ್ಕ್ರಿಯವಾಗಿದೆ ಮತ್ತು ಪೌಷ್ಟಿಕಾಂಶದ ಅಸಮತೋಲನದಿಂದ ಕೂಡಿದೆ . ಕಳಪೆ ಆಹಾರ, ಬೊಜ್ಜು, ಮದ್ಯಪಾನ ಸೇರಿದಂತೆ ಹಲವಾರು ಕಾರಣಗಳು ಸೇರಿದ್ದು, ಇದರಿಂದ ಯಕೃತ್ತಿನ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ.  ನಾನ್-ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ (NAFLD) ಒಂದು ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಕಾಣಿಸಿಕೊಳ್ಳುತ್ತಿದೆ ಎಂದು ವಾಸವಿ ಆಸ್ಪತ್ರೆಯ ಡಯಟೀಶಿಯನ್ ಡಾ. ಟಿ. ರಮಾಲಕ್ಷ್ಮಿ ಎಚ್ಚರಿಸಿದ್ದಾರೆ.

ದೇಹದಲ್ಲಿನ ಒಂದು ಪ್ರಮುಖ ಅಂಗವಾದ ಯಕೃತ್ತು ಚಯಾಪಚಯ (metabolism), ನಿರ್ವಿಶೀಕರಣ (detoxification) ಮತ್ತು ಪೋಷಕಾಂಶಗಳ ಸಂಗ್ರಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಪರೀತ ಆಹಾರ ಪದ್ಧತಿಗಳು ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳಿಂದ ಯಕೃತ್ತಿನ ಮೇಲೆ ಪರಿಣಾಮ ಬೀರಬಹುದು. ವಿಶೇಷವಾಗಿ ಬಹುಬೇಗನೆ ತೂಕ ಇಳಿಸಿಕೊಳ್ಳಲು ಅನುಸರಿಸುವ ಆಹಾರ ಕ್ರಮ ಜೊತೆಗೆ ಅತಿಯಾದ ಉಪವಾಸ ಅಥವಾ ಕಡಿಮೆ ಕ್ಯಾಲೋರಿಯುಳ್ಳ ಆಹಾರ ಸೇವನೆಯಿಂದ ಕೊಬ್ಬಿನಾಂಶ ಶೇಖರಣೆಯಾಗುತ್ತದೆ. ಇದರಿಂದ ಕೊಬ್ಬಿನಾಮ್ಲಗಳು ಬಿಡುಗಡೆಗೆ ಕಾರಣವಾಗುತ್ತದೆ. ಯಕೃತ್ತಿನಲ್ಲಿ ಸಂಗ್ರಹಗೊಂಡ ಕೊಬ್ಬಿನಾಂಶದಿಂದ ಆರೋಗ್ಯದ ಮೇಲೆ ಇನ್ನಷ್ಟು ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಅತ್ಯಂತ ಹಾನಿಕಾರಕ ಆಹಾರ ಪದ್ಧತಿಗಳಲ್ಲಿ ಸಕ್ಕರೆ ಮತ್ತು ಸಂಸ್ಕರಿಸಿದ (ಪ್ರೊಸೆಸ್ಡ್) ಆಹಾರಗಳ ಅತಿಯಾದ ಸೇವನೆಯು ಒಂದು. ಇವುಗಳು ಆಕ್ಸಿಡೇಟಿವ್ ಒತ್ತಡವನ್ನು ಹೆಚ್ಚಿಸುವುದಲ್ಲದೆ, ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆ ಮತ್ತು ಉರಿಯೂತವನ್ನು ಉಂಟು ಮಾಡುತ್ತದೆ. ಅತಿಯಾದ ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬಿನಾಂಶವುಳ್ಳ ಪದಾರ್ಥಗಳ ಸೇವನೆಯಿಂದ ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗಬಹುದು. ಇದು ಕಾಲಾನಂತರದಲ್ಲಿ ಯಕೃತ್ತಿನ ಜೀವಕೋಶಗಳನ್ನು ಹಾನಿಗೊಳಿಸುತ್ತದೆ ಎಂದು ಡಾ. ರಮಾಲಕ್ಷ್ಮಿ ಎಚ್ಚರಿಸಿದ್ದಾರೆ.


ಯಕೃತ್ತಿನ ಆರೋಗ್ಯದ ವಿಷಯದಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ ಅಡುಗೆ ಎಣ್ಣೆಯನ್ನು ಪದೇ ಪದೇ ಬಳಸುವುದು. ವಿಶೇಷವಾಗಿ ಡೀಪ್-ಫ್ರೈ ಮಾಡಿದ ಎಣ್ಣೆಯನ್ನು ಮತ್ತೆ ಬಳಸುವುದುಮನೆಗಳಲ್ಲಿ ಅಥವಾ ಹೋಟೆಲ್ ಗಳಲಿ ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸುತ್ತಾರೆ. ಇದು ಟ್ರಾನ್ಸ್ ಕೊಬ್ಬು ಮತ್ತು ಯಕೃತ್ತಿಗೆ ವಿಷಕಾರಿಯಾದ ರಾನ್ಸಿಡ್ ಸಂಯುಕ್ತಗಳನ್ನು ಉತ್ಪಾದಿಸುತ್ತದೆ. ಕಪ್ಪಾದ, ಗಾಢವಾದ ಅಥವಾ ಸುಟ್ಟ ವಾಸನೆಯುಳ್ಳ ಎಣ್ಣೆಯು ಅಪಾಯಕಾರಿ, ಹೀಗಾಗಿ ಕೂಡಲೇ ಆ ಎಣ್ಣೆ ಬಳಕೆಯನ್ನು ನಿಲ್ಲಿಸುವುದು ಒಳಿತು ಎಂದು ತಜ್ಞರು ಸಲಹೆ ನೀಡಿದ್ದಾರೆ. 
 
ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರವನ್ನು ಸೇವಿಸಬೇಕು.  ನಮ್ಮ ದೈನಂದಿನ ಆಹಾರವು ಸಾಕಷ್ಟು ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಕಡಿಮೆ ಕೊಬ್ಬಿನ ಪ್ರೋಟೀನ್ ಗಳಿಂದ ಕೂಡಿರಬೇಕು. ಮದ್ಯ, ಸಂಸ್ಕರಿಸಿದ ಆಹಾರಗಳು ಮತ್ತು ಸಕ್ಕರೆ ಪಾನೀಯಗಳನ್ನು ತ್ಯಜಿಸಬೇಕು. ಯಾವಾಗಲೂ ಆರೋಗ್ಯಕರ ಅಡುಗೆ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಉದಾಹರಣೆಗೆ ಹುರಿಯುವ ಬದಲು ಸ್ಟೀಮಿಂಗ್, ಬೇಯಿಸುವುದು, ಗ್ರಿಲ್ಲಿಂಗ್ ಅಥವಾ ಸಾಟಿಂಗ್ ಮಾಡುವುದು ಉತ್ತಮ. ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಯಾವಾಗಲೂ ತಾಜಾ ಎಣ್ಣೆ ಬಳಸುವುದು ಮತ್ತು ಅವುಗಳನ್ನು ನಿಯಮಿತವಾಗಿ ಬದಲಾಯಿಸುವುದು ಒಳಿತು (ಉದಾಹರಣೆಗೆ, ಸಾಸಿವೆ, ನೆಲಗಡಲೆ, ಸೂರ್ಯಕಾಂತಿ ಅಥವಾ ಅಕ್ಕಿ ಹೊಟ್ಟು ಎಣ್ಣೆಗಳು). ಉರಿಯೂತವನ್ನು ಕಡಿಮೆ ಮಾಡಲು ಮತ್ತು ಯಕೃತ್ತಿನ ನಿರ್ವಿಶೀಕರಣಕ್ಕಾಗಿ ಆಂಟಿ ಆಕ್ಸಿಡೆಂಟ್ ಭರಿತ ಆಹಾರಗಳನ್ನು ಯಾವಾಗಲೂ ನಿಮ್ಮ ಆಹಾರದಲ್ಲಿ ಸೇರಿಸುವುದು ಉತ್ತಮ ಎನ್ನುತ್ತಾರೆ ತಜ್ಞರು.


ಪೋಷಣೆ ಎಂದರೆ ಯಕೃತ್ತಿನ ಆರೋಗ್ಯವನ್ನು ಮಾತ್ರ ಕಾಪಾಡಿಕೊಳ್ಳುವುದಲ್ಲ, ಸಮತೋಲಿತ ಪೋಷಣೆಯ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳುವುದು. ದೇಹದಲ್ಲಿ ಶಕ್ತಿ ಉತ್ಪಾದನೆಗಾಗಿ ಅಗತ್ಯವಾದ ಕಾರ್ಬೋಹೈಡ್ರೇಟ್‌ಗಳು, ಅಂಗಾಂಗಳ ಆರೋಗ್ಯಕ್ಕಾಗಿ ಮತ್ತು ಬೆಳವಣಿಗಾಗಿ  ಪ್ರೋಟೀನ್ಗಳು, ಸಮತೋಲಿತವಾದ ಆರೋಗ್ಯಕರ ಕೊಬ್ಬಿನಾಂಶ, ಚಯಾಪಚಯ ಸಮತೋಲನ ಮತ್ತು ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಅಗತ್ಯವಾದ ವಿಟಮಿನ್ಗಳು ಮತ್ತು ಖನಿಜಗಳನ್ನು ಒಳಗೊಂಡಿರುವ ಆರೋಗ್ಯಕರ ಆಹಾರವನ್ನು ಸೇವಿಸುವುದು.  ಸೂಕ್ತ ಪೋಷಣೆಯನ್ನು ಅನುಸರಿಸುವುದು ಯಕೃತ್ತಿನ ಆರೋಗ್ಯ ಮಾತ್ರವಲ್ಲದೆ ರೋಗನಿರೋಧಕ ಶಕ್ತಿ, ಮನಸ್ಸಿನ ಸ್ಥಿರತೆ ಮತ್ತು ಒಟ್ಟಾರೆ ಜೀವನದ ಗುಣಮಟ್ಟವನ್ನು ಬಲಪಡಿಸುತ್ತದೆ ಎಂದು ಡಾ. ರಮಾಲಕ್ಷ್ಮಿ ತಿಳಿಸಿದ್ದಾರೆ. 

ದೀರ್ಘಕಾಲ ಉತ್ತಮ ಆರೋಗ್ಯವನ್ನು ಹೊಂದಲು ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದು, ಮೊದಲನೆಯದಾಗಿ ಊಟವನ್ನು ಎಂದಿಗೂ ಬಿಡಬಾರದು ಮತ್ತು ನಿಯಮಿತವಾಗಿ ಆಹಾರವನ್ನು ಸೇವಿಸುವುದು ಮುಖ್ಯ. ಜೊತೆಗೆ ಸಾಕಷ್ಟು ದ್ರವವನ್ನು ಕುಡಿಯುವ ಮೂಲಕ ದೇಹವನ್ನು ಚೆನ್ನಾಗಿ ಹೈಡ್ರೇಟೆಡ್ ಆಗಿಟ್ಟುಕೊಳ್ಳಬೇಕು.  ಜೀರ್ಣಕ್ರಿಯೆಗೆ ಸಹಾಯ ಮಾಡಲು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಹೆಚ್ಚಿನ ಫೈಬರ್ ಅಂಶವಿರುವ ಆಹಾರಗಳನ್ನು ತೆಗೆದುಕೊಳ್ಳಬೇಕು. ಸಂಸ್ಕರಿಸಿದ, ಡಬ್ಬಿಯಲ್ಲಿರುವ ಅಥವಾ ಸಂರಕ್ಷಿಸಲಾದ ಮಿಶ್ರಿತ ಆಹಾರಗಳನ್ನು ಸೇವಿಸದಿರುವುದು ಉತ್ತಮ. ಆಹಾರವನ್ನು ಸೇವಿಸುವಾಗ ನಿಧಾನವಾಗಿ ಅಗಿಯಿರಿ, ಸಮಾಧಾನವಾಗಿ ಊಟ ಮಾಡಿ. ಅನೇಕರು ಟಿವಿ ಅಥವಾ ಮೊಬೈಲ್ ನೋಡುವಾಗ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ, ಆದರೆ ಅದು ಒಳ್ಳೆಯ ಅಭ್ಯಾಸವಲ್ಲ. ಆಹಾರ ಸೇವಿಸುವಾಗ ಅತಿಯಾಗಿ ನೀರು ಕುಡಿಯಬೇಡಿ ಎಂದು ತಜ್ಞರು ಹೇಳಿದ್ದಾರೆ. 


*ಉತ್ತಮ ಆಹಾರದ ಮೂಲಕ ರೋಗನಿರೋಧಕ ಶಕ್ತಿ:* 

ರೋಗನಿರೋಧಕ ಪೂರಕವಾದ ಆಹಾರವನ್ನು ಸೇವಿಸುವುದು ಯಕೃತ್ತಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಹಾಗಾಗಿ ಈ ಕೆಳಗಿನ ಅಂಶಗಳನ್ನು ಆಹಾರದಲ್ಲಿ ಅಳವಡಿಸಿಕೊಳ್ಳಿ. 

ತಾಜಾ ಹಣ್ಣು ಮತ್ತು ತರಕಾರಿಗಳು

ಒಣ ಹಣ್ಣು ಮತ್ತು ಬೀಜಗಳು

ಮೊಳಕೆ ಕಾಳು ಮತ್ತು ಧಾನ್ಯಗಳು

ಸಿಟ್ರಸ್ ಹಣ್ಣುಗಳು

ಕರುಳಿನ ಆರೋಗ್ಯಕ್ಕಾಗಿ ಪ್ರೀ-ಬಯೋಟಿಕ್ಸ್ ಮತ್ತು ಪ್ರೋ-ಬಯೋಟಿಕ್ಸ್

 
*ಪೋಷಕಾಂಶಗಳನ್ನು ಸಮತೋಲಿತವಾಗಿ ಕಾಪಾಡಿಕೊಳ್ಳಲು ಕೆಳಗಿನ ಕ್ರಮಗಳನ್ನು ಅನುಸರಿಸಿ :*

ಬಾದಾಮಿಗಳನ್ನು ಹೆಚ್ಚು ಸಮಯ ನೆನೆಸುವುದು ಅಥವಾ ಬಿಸಿನೀರಿಗೆ ನಿಂಬೆಹಣ್ಣನ್ನು ಸೇರಿಸಿ ಕುಡಿಯುವುದರಿಂದ ಅದರಲ್ಲಿನ ವಿಟಮಿನ್ ಸಿ ನಂತಹ ಪ್ರಮುಖ ಪೋಷಕಾಂಶಗಳು ನಾಶವಾಗಬಹುದು.

ನಿಯಮಿತ ವ್ಯಾಯಾಮ, ತೂಕ ನಿಯಂತ್ರಣ, ಸಾಕಷ್ಟು ನಿದ್ರೆ, ಒತ್ತಡ ನಿರ್ವಹಣೆ ಮತ್ತು ವಾರ್ಷಿಕ ಆರೋಗ್ಯ ತಪಾಸಣೆಗಳು ಡಯಟ್ನಷ್ಟೇ ಮುಖ್ಯ. ನಿಮ್ಮ ದೇಹಕ್ಕೆ ಏನು ಅಗತ್ಯ ಎಂಬುದನ್ನ ಅರ್ಥಮಾಡಿಕೊಳ್ಳಿ, ಕಣ್ಣುಮುಚ್ಚಿಕೊಂಡು ಆಹಾರದ ಟ್ರೆಂಡ್ ಗಳನ್ನ ಫಾಲೋ ಮಾಡಲು ಹೋಗಬೇಡಿ ಎನ್ನುತ್ತಾರೆ ಡಾ. ಟಿ. ರಮಾಲಕ್ಷ್ಮಿ.

VK DIGITAL NEWS:


Post a Comment

0Comments

Post a Comment (0)