" ಶ್ರೀ ಭೃಗು ಮಹರ್ಷಿಗಳ ಅಂಶ ಸಂಭೂತರಾದ ಶ್ರೀ ವಿಜಯದಾಸರ ಮಧ್ಯಾರಾಧನೆ "

varthajala
0

" ಸುಳಾದಿ ದಾಸರೆಂದೇ ಖ್ಯಾತರಾದ  ಶ್ರೀ ವಿಜಯರಾಯರು "

" ಶ್ರೀ ವಿಜಯರಾಯರ ಸಂಕ್ಷಿಪ್ತ ಮಾಹಿತಿ "

ಹೆಸರು : 

ಶ್ರೀ ದಾಸಪ್ಪ

ತಂದೆ : 

ಶ್ರೀ ಶ್ರೀನಿವಾಸಪ್ಪ

ತಾಯಿ : 

ಸಾಧ್ವೀ ಕೂಸಮ್ಮ

ಜನ್ಮಸ್ಥಳ : 

ಚೀಕಲಪರವೀ

ಕಾಲ : 

ಕ್ರಿ. ಶ. 1682 - 1755

ಸ್ವರೂಪೋದ್ಧಾರಕ ಗುರುಗಳು : 

ಶ್ರೀ ನಾರದಾಂಶ ಪುರಂದರದಾಸರು

" ದ್ವಿತೀಯ ಘಟ್ಟದ ಹರಿದಾಸ ಸಾಹಿತ್ಯದ ಮೇಲ್ವಿಚಾರಕರೂ, ಪ್ರೇರಕ ಶಕ್ತಿ ಮತ್ತು ಸ್ಫೂರ್ತಿ "

ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ( ಶ್ರೀ ವಿಜಯದಾಸರು ಶ್ರೀ ರಾಯರ ಮಠದ ಶಿಷ್ಯರು)

ವಿಜಯ ನಗರ ಸಾಮ್ರಾಜ್ಯದ ಕಾಲದಲ್ಲಿ ತನ್ನ ಕೀರ್ತಿಯ ಉತ್ತುಂಗ ಶಿಖರಕ್ಕೆ ಏರಿದ್ದ ಹರಿದಾಸ ಸಾಹಿತ್ಯವು ಆ ಸಾಮ್ರಾಜ್ಯ ಪತನಾನಂತರ ತನ್ನ ಅವನತಿಯತ್ತ ನಡೆಯಿತು. ಆ ಸಂದರ್ಭದಲ್ಲಿ ಶ್ರೀ ಮಹೀಪತಿದಾಸರ ಕೀರ್ತನೆಗಳ ಮೂಲಕ ದಾಸ ಸಾಹಿತ್ಯಕ್ಕೆ ಜ್ಯೋತಿ ನಂದಾದೀಪವಾಗಿ ಮುಂದುವರೆಯಿತೆನ್ನಬಹುದು!

ಇಂತಹಾ ಸಮಯದಲ್ಲಿ ಹರಿದಾಸ ಸಾಹಿತ್ಯಕ್ಕೆ ಮತ್ತೆ ಚಾಲನೆ ದೊರೆತುದು " ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರಿಂದ.

ಶ್ರೀ ರಾಘವೇಂದ್ರತೀರ್ಥರು ಪಂಡಿತರೂ, ಮಠಾಧಿಪತಿಗಳೂ, ಯೋಗಿಗಳೂ ಆಗಿದ್ದ ಇವರ ಪ್ರಭಾವ ದೇಶದೆಲ್ಲೆಡೆ ಹರಡಿತು.

ಶ್ರೀ ವ್ಯಾಸರಾಜರಂತೆಯೇ ಶ್ರೀ ರಾಘವೇಂದ್ರತೀರ್ಥರೂ " ವ್ಯಾಸಕೂಟ - ದಾಸಕೂಟ " ಗಳೆರಡನ್ನೂ ಉಜ್ಜೀವನಗೊಳಿಸಿದರು.

ಶ್ರೀ ರಾಘವೇಂದ್ರತೀರ್ಥರು ದಾಸ ಸಾಹಿತ್ಯದ ಮೊದಲ ಮತ್ತು ಎರಡನೆಯ ಘಟ್ಟಗಳಿಗೆ ಸಂಪರ್ಕ ಸೇತುವೆಯಾದರು.

ಮಂತ್ರಾಲಯದ ಸುತ್ತಮುತ್ತ ಇವರ ಪ್ರಭಾವ ದಟ್ಟವಾಗಿ ಹರಡುತ್ತಿದ್ದಂತೆಯೇ ಹರಿದಾಸರಿಗೆ ಸ್ಫೂರ್ತಿಯೂ ಇದರೊಂದಿಗೆ ಉಕ್ಕಿ ಹರಿಯಿತು.

ಮೊದಲ ಹರಿದಾಸ ಪಂಥದ ಕೇಂದ್ರವು ಹಂಪಿಯಲ್ಲಿದ್ದುದು ( ಇದರ ಮೇಲ್ವಿಚಾರಕರು ಶ್ರೀ ವ್ಯಾಸರಾಜ ಗುರುಸಾರ್ವಭೌಮರು ); ಈ ಮಂತ್ರಾಲಯದಲ್ಲಿ - ಚಿಪ್ಪಗಿರಿ - ಉತ್ತನೂರು - ಮಾನ್ವಿ - ರಾಯಚೂರು - ಲಿಂಗಸೂಗೂರು ಮೊದಲಾದ ಊರುಗಳಲ್ಲಿ ನಿಂತಿತು. ಇದರಿಂದ ಅಲ್ಲಲ್ಲಿ ಹರಿದಾಸರು ಹುಟ್ಟಿದರು.

ಶ್ರೀ ರಾಘವೇಂದ್ರತೀರ್ಥರಿಂದ ಪುನರುಜ್ಜೀವನ ಪಡೆದು ಚಾಲನೆಗೊಂಡ ಈ ಹರಿದಾಸ ಸಾಹಿತ್ಯ ಕ್ಷೇತ್ರವನ್ನು ಅಕ್ಷರಶಃ ಮುಂದುವರೆಸಿದವರು ಶ್ರೀ ವಿಜಯರಾಯರು.

ಅಂಶ :

ಶ್ರೀ ಭೃಗು ಮಹರ್ಷಿಗಳು

ಕಕ್ಷೆ : 15

ಶ್ರೀ ಮೋಹನದಾಸರು...

ಮೊದಲು ಋಷಿಗಳು ಕೂಡಿ ಸತ್ರ ಯಾಗವ ನಾಕ ।

ನದಿಯ ತೀರದಲಿ ರಚಿಸಿಯಿರಲು ।ಪದುಮಸಂಭವನಂಕ ಭವ ಬಂದು ಮುನಿವೃಂದ ।ಹೃದಯ ಸಂಶಯ ಹೊಂದಲು ।। ವಿಧಿ ವಿಷ್ಣು ಶಿವರೊಳಗೆ ಉತ್ತಮರ ತೋರದಲೆ । ಮದಡಭಾವನ ಪೋಹಿಸಲು । ಒದಗಿ ಭೃಗು ಮುನಿಗಳೇ ಸರ್ವೇಶ ವೈಕುಂಠ । ಸದನನೆಂದರುಹಿದವರೋ - ಇವರು ।।


ಶ್ರೀ ವಿಜಯರಾಯರೇ ಸ್ವತಃ ತಮ್ಮ ಅವತಾರ ವಿಶೇಷಗಳನ್ನು ದೃಢೀಕರಿಸುತ್ತಾ ಈ ಕೆಳಗಿನ ಸುಳಾದಿಯಲ್ಲಿ ಖಚಿತ ಪಡಿಸಿದ್ದಾರೆ.

ಸುರಲೀಲನಾಗಿ ನಿಕಂಪನೆಂದೆನಿಸಿ । ದ್ವಾ ।

ಪರದಲ್ಲಿ ಜನಿಸಿದೆ ಕೆಲವು ದಿನ ಬಿಡದೆ ।

ತರುವಾಯ ವರ ಕಲಿಯುಗದಲ್ಲಿ ಈಗ ಜನನ ।

ಮರಣವಾಗುತ್ತ ಬಂದು ಧರೆಯೊಳು ಮೆರೆದು ।। 

ಹರಿ ಕೃಪೆಯಿಂದಲಿ ಇವರ ಸದನದೊಳಗೆ ।

ತುರು ಕರುವು ಆಗಿ ಜನಿಸಿದೆ ಸುಕೃತದಿಂದ ।

ಸಿರಿಪತಿ ವಿಷ್ಣು ನಮ್ಮ ವಿಜಯವಿಠಲನ್ನ । ದಾ ।

ಸರು ಪೇಳಲು ಕವನ ಎರಗಲು ಕರ್ಣಕ್ಕೆ ।।

ಶ್ರವಣ ಫಲದಿಂದ ಅವನಿಯೊಳಗೆ ಎರಡು ।

ಅವನಿ ಸುರರ ಜನ್ಮವ ನೀಗ ಧರಿಸಿದೆ ।

ಕವನ ಪೇಳಿದೆ ಸಂಸಾರದಲ್ಲಿದ್ದು ।

ಅವಸರನಾಗಿ ಅವಧಿಯಿಲ್ಲದೆ ಮತ್ತೆ ।।

ಅವನಿಯೊಳಗೆ ಬಂದೆ ಭವ ದೂರನಾಗಿ ।

ಕವಿ ನಾಮ ವಿಜಯವಿಠಲನ್ನ ದಿವ್ಯ । ನಾ ।

ಮವನು ಕೊಂಡಾಡುವ ಅಧಿಕಾರಿ ನಾನಾದೆ ।।

ಮೇಲ್ಕಂಡ ಪದ್ಯಕ್ಕನುಗುಣವಾಗಿ...

1. ಕೃತ ಯುಗದಲ್ಲಿ ತಮ್ಮ ಮೂಲ ರೂಪ ( ಶ್ರೀ ಭೃಗು ಮಹರ್ಷಿಗಳ ) ದಿಂದ ತಮ್ಮ ಸ್ವರೂಪೋದ್ಧಾರಕ ಗುರುಗಳಾದ  ನಾರದ ಮಹರ್ಷಿಗಳನ್ನೂ, ಶ್ರೀ ವಾಯುದೇವರನ್ನೂ ಮತ್ತೂ ಶ್ರೀ ಲಕ್ಷ್ಮೀ ಪತಿಯಾದ ಶ್ರೀ ಹರಿಯನ್ನು ಸೇವಿಸಿದರು.

2. ತ್ರೇತಾ ಯುಗದಲ್ಲಿ " ಸುರಲೀಲಾ " ಎಂಬ ಕಪಿಯಾಗಿ ಅವತರಿಸಿ ಶ್ರೀ ಆಂಜನೇಯನನ್ನೂ ಮತ್ತೂ ಶ್ರೀ ಸೀತಾಪತೀ ಶ್ರೀಮನ್ಮೂಲರಾಮದೇವರ ಪಾದ ಸೇವೆ ಮಾಡಿದರು.

3. ದ್ವಾಪರ ಯುಗದಲ್ಲಿ " ನಿಕಂಪನ " ನಾಗಿ ಯಾದವ ಕುಲದಲ್ಲಿ ಜನಿಸಿ ಶ್ರೀ ಭೀಮಸೇನದೇವರ ಮತ್ತು ಶ್ರೀ ರುಕ್ಮಿಣೀ ಸತ್ಯಭಾಮಾ ಸಮೇತ ಶ್ರೀ ಕೃಷ್ಣ ಪರಮಾತ್ಮನ ಸೇವೆ ಮಾಡಿದರು ಹಾಗೂ " ಜರಾ ನಾಮಕ ವ್ಯಾಧ " ನಾಗಿ ಶ್ರೀ ಕೃಷ್ಣ ಪರಮಾತ್ಮನ ಪಾದಕ್ಕೆ ಬಾಣ ಹೊಡೆದು ವಿಪ್ರ ವಾಕ್ಯದಂತೆ ಶ್ರೀ ಕೃಷ್ಣಾವತಾರದ ಉಪಸಂಹಾರಕ್ಕೆ ಕಾರಣರಾಗಿದ್ದಾರೆ.

4. ಈ ಕಲಿಯುಗದಲ್ಲಿ ಶ್ರೀ ಪುರಂದರದಾಸರ ಮನೆಯಲ್ಲಿದ್ದ ಹಸುವಿನ " ಕರು " ವಾಗಿ ಜನಿಸಿ ಅವರ ಕೃತಿಗಳನ್ನು ಶ್ರವಣ ಮಾಡಿದ್ದರ ಫಲವಾಗಿ " ಗುರುಮಧ್ವಪತಿ " ಹೆಸರಿನಿಂದ ಶ್ರೀ ಪುರಂದರದಾಸರ ಮಗನಾಗಿ ಜನಿಸಿ, ಮುಂದೆ ಶ್ರೀ ಶೀನಪ್ಪ - ಸಾಧ್ವೀ ಕುಸಮ್ಮ ದಂಪತಿಗಳಿಗೆ ಪುತ್ರರಾಗಿ " ದಾಸಪ್ಪ " ನೆಂಬ ಅಭಿದಾನ ಹೊಂದಿ ಶ್ರೀ ಹರಿ ವಾಯು ಗುರುಗಳ ಕೃಪೆಯಿಂದ " ಶ್ರೀ ವಿಜಯರಾಯ " ರೆನಿಸಿ ಶ್ರೀಮಧ್ವಾ೦ತರ್ಗತ ಶ್ರೀ ವೇದವ್ಯಾಸದೇವರನ್ನು ಸೇವಿಸಿದರು.

ಮೂಲದಲ್ಲಿ ಇವರ ಉತ್ಪತ್ತಿ; ಜ್ಞಾನ ಭಕ್ತ್ಯಾದಿಗಳ ಸ್ವರೂಪವೇನೆಂಬುದರ ವಿಚಾರ ಅತ್ಯಾವಶ್ಯವಾದುದು. ಈ ಶ್ರೀ ಭೃಗು ಮಹರ್ಷಿಗಳು ತಾರತಮ್ಯದಲ್ಲಿ ೧೪ನೇ ಕಕ್ಷೆಯಲ್ಲಿ ಬರುವ ಶ್ರೀ ನಾರದ ಮಹರ್ಷಿಗಳ ತರುವಾಯ ೧೫ನೇ ಕಕ್ಷೆಯಲ್ಲಿ ಬರುವರು.

ಶ್ರೀ ಅಗ್ನಿದೇವರು, ಶ್ರೀ ದಕ್ಷ ಪ್ರಜಾಪತಿ ಪತ್ನಿಯಾದ ಪ್ರಸೂತಿದೇವಿ ಸಮಾನರು. ಈ ಶ್ರೀ ಭೃಗು ಮಹರ್ಷಿಗಳು ತತ್ತ್ವಾಭಿಮಾನಿ ದೇವತೆಗಳಲ್ಲಿರುವರು. ಇದೇ ಕಕ್ಷೆಯಲ್ಲಿ ಶ್ರೀ ಪ್ರಹ್ಲಾದರಾಜರೂ ಇದ್ದಾರೆ ( ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ).

ಮೂಲತಃ ಅಸ್ರುಜ್ಯಾವಸ್ಥೆಯಲ್ಲಿ ಸಹಾ ಸಾಮಾನ್ಯಾಪರೋಕ್ಷಿಗಳು ಅಂದರೆ ತಮ್ಮ ಬಿಂಬ ರೂಪಿ ಹರಿಯನ್ನು ಸಾಮಾನ್ಯವಾಗಿ ಸದಾ ಕಂಡವರೇ ಆದರೂ ಸಾಧನದಿಂದ ವಿಶೇಷವಾಗಿ ತಮ್ಮ ಸ್ವರೂಪಾಭಿ ವ್ಯಕ್ತಿಯಂತೆ ಹರಿಯ ಸಂದರ್ಶನಾನಂದ ಹೊಂದುವರು. ಇವರಿಗೆ ೧೮ ಬ್ರಹ್ಮ ಕಲ್ಪ ಸಾಧನೆ.

" ಭೃಗು ಋಷಿಗಳು ಸೂಕ್ಷ್ಮ ಸೃಷ್ಟಿಯಾದ ಬಹಿರ್ಬ್ರಹ್ಮಾಂಡದಲ್ಲಿ ಇವರ ಉತ್ಪತ್ತಿ ತೈಜಸ ರುದ್ರದೇವರು ಉಮೇ ದ್ವಾರಾ; ಇಂದ್ರ ದಕ್ಷ ಪ್ರಜೇಶ್ವರನ ದ್ವಾರಾ; ಸೋಮ ವರುಣನ ದ್ವಾರಾ ಶರೀರ ಉಳ್ಳಂಥಾ ಭೃಗು ಮುನೇಶ್ವರರು ಅಗ್ನಿ, ಪ್ರಸೂತಿಗೆ ಸಮರು ".

ಅಂಕಿತ " ವಿಜಯವಿಠ್ಠಲ "

ಶ್ರೀ ವಿಜಯರಾಯರು ಶ್ರೀ ಪುರಂದರದಾಸರಿಂದ ಸ್ವಪ್ನಾಂಕಿತರಾಗಿ " ವಿಜಯ ವಿಠಲ " ನೆಂಬ ಅಂಕಿತದಲ್ಲಿ ಕೃತಿಗಳನ್ನು ರಚಿಸಿದರು.

ಶ್ರೀ ಭಾವಿಸಮೀರ ವಾದಿರಾಜರ ಮೂಲಕ ಶಾಸ್ತ್ರ ಜ್ಞಾನ ವೈಭವವನ್ನು ಪಡೆದು, ಶಾಸ್ತ್ರೀಯವಾಗಿ - ಸೈದ್ಧಾಂತಿಕವಾಗಿ ಮಹತ್ವದ ತಿರುವು ಪಡೆದಿದ್ದ ಹರಿದಾಸ ಸಾಹಿತ್ಯವು ಶ್ರೀ ವಿಜಯದಾಸರಿಂದ ಮತ್ತಷ್ಟು ವೈಭವಯುತವಾಯಿತು!

ಅಂದು ಭಾವನಾ ಪ್ರಧಾನವಾಗಿ ಹರಿದು ಬಂದ ಹರಿದಾಸ ಸಾಹಿತ್ಯವು ಇಂದು ಬುದ್ಧಿ ಪ್ರಧಾನವಾಗಿ ಪಾಂಡಿತ್ಯದ ಪರಿಣಿತಿಯಲ್ಲಿ ಜನಮನದ ಅನಿಸಿಕೆಯಲ್ಲಿ ತನ್ನ ಪ್ರಚಾರ ಕಾರ್ಯದ ಕೃತಕೃತ್ಯೆಯನ್ನು ಪಡೆಯಿತು!

ತತ್ತ್ವ ನಿಬಿಡ ಸುಳಾದಿಗಳನ್ನೇ ಹೆಚ್ಚಾಗಿ ರಚಿಸಿ " ಸುಳಾದಿ ದಾಸ " ರೆಂದೇ ಜಗತ್ಪ್ರಸಿದ್ಧರಾದವರು ಶ್ರೀ ವಿಜಯರಾಯರು.

ದ್ವೈತ ಸಿದ್ಧಾಂತದ ಮತ್ತೂ ಕೆಲವು ವಿಶ್ಲೇಷಣಾತ್ಮಕ ತತ್ತ್ವ ಸೂಕ್ಷ್ಮಗಳ ಹರಿದಾಸ ಸಾಹಿತ್ಯವು ಹೊರ ಬರಲು ಶ್ರೀ ವಿಜಯರಾಯರು ಕಾರಣರಾದರು.

ಶ್ರೀ ವಿಜಯರಾಯರ ಸಮಕಾಲೀನರಾದ ಶ್ರೀ ಪ್ರಸನ್ನ ವೇಂಕಟದಾಸರು ಹರಿದಾಸ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯೂ ಗಮನಾರ್ಹವಾಗಿದೆ.

ಶ್ರೀ ವಿಜಯರಾಯರ ಶಿಷ್ಯ ಪ್ರಶಿಷ್ಯರಲ್ಲಿ..

1. ಶ್ರೀ ಹಯವದನವಿಠ್ಠಲರು 

( ಶ್ರೀ ವಿಜಯರಾಯರ ತಮ್ಮ )

ಶ್ರೀ ವಿಜಯರಾಯರ ಪ್ರೀತಿಯ ಶಿಷ್ಯರಾದ ಶ್ರೀ ಗೋಪಾಲದಾಸರು ತಮ್ಮ ಕೃತಿಗಳಿಂದ ಹರಿದಾಸ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾವನ್ನು ಪಡೆದಿದ್ದಾರೆ.

2. ಶ್ರೀ ಗೋಪಾಲದಾಸರು ಸಾಹಿತ್ಯದಂತೆಯೇ ಸಂಗೀತ, ನರ್ತನ ಮತ್ತು ಚಿತ್ರ ಕಲೆಗಳನ್ನೂ ಬಳಸಿಕೊಂಡಿದ್ದು ವಿಶೇಷ ಸಂಗತಿ!

ಶ್ರೀ ಗೋಪಾಲದಾಸರು ತಮ್ಮ ಜೊತೆಗೆ ಈ ಕೆಳಕಂಡವರನ್ನೂ ದಾಸ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿದರು.

3.  ಶ್ರೀ ಮೋಹನದಾಸರು - ಮೋಹನವಿಠ್ಠಲ

4. ಶ್ರೀ ಪಂಗನಾಮದ ತಿಮ್ಮಣ್ಣದಾಸರು - ವೇಣುಗೋಪಾಲವಿಠ್ಠಲ

5. ಶ್ರೀ ಐಜಿ ವೆಂಕಟರಾಮಾಚಾರ್ಯರು - ವಾಸುದೇವವಿಠ್ಠಲ ( ಶ್ರೀ ವ್ಯಾಸತತ್ತ್ವಜ್ಞತೀರ್ಥರು )

6. ಶ್ರೀ ಶ್ರೀನಿವಾಸಾಚಾಯರು - ಜಗನ್ನಾಥವಿಠ್ಠಲ

" ಶ್ರೀ ಗೋಪಾಲದಾಸ ತಮ್ಮಂದಿರಾದ.. "

7. ಶ್ರೀ ಸೀನಪ್ಪದಾಸರು - ವರದ ಗೋಪಾಲವಿಠ್ಠಲ

8. ಶ್ರೀ ದಾಸಪ್ಪ ದಾಸರು - ಗುರು ಗೋಪಾಲವಿಠ್ಠಲ

9. ಶ್ರೀ ರಂಗಪ್ಪ ದಾಸರು - ತಂದೆ ಗೋಪಾಲವಿಠ್ಠಲ

" ಶ್ರೀ ಪಂಗನಾಮದ ತಿಮ್ಮಣ್ಣದಾಸರು - ವೇಣುಗೋಪಾಲವಿಠ್ಠಲರ ಶಿಷ್ಯರು "....

10. ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯರು - ವ್ಯಾಸವಿಠ್ಠಲ ( ಶ್ರೀ ವಿಜಯಕವಚ ರಚಿಸಿದವರು )

ಹರಿದಾಸರ ಪರಂಪರೆಯಲ್ಲಿ ಶ್ರೀ ಮಧ್ವರು ಮತ್ತು ಶ್ರೀ ನರಹರಿತೀರ್ಥರ ನಂತರ ಆದ್ಯರು 60 ಜನ, ಮುಂದೆ ಶ್ರೀ ಶ್ರೀಪಾದರಾಜರು - ಶ್ರೀ ವ್ಯಾರಾಯರು - ಶ್ರೀ ವಿಜಯೀ೦ದ್ರತೀರ್ಥರು - ಶ್ರೀ ಪುರಂದರದಾಸರು ಮತ್ತು ಅವರ ಸಮಕಾಲೀನ ಹರಿದಾಸರು ಸಂಕ್ಷಿಪ್ತವಾಗಿ ಸುಳಾದಿಗಳನ್ನು ರಚಿಸಿದ್ದಾರೆ. 

ಆಚಾರ್ಯ ನಾಗರಾಜು ಹಾವೇರಿ

ಗುರು ವಿಜಯ ಪ್ರತಿಷ್ಠಾನ

Post a Comment

0Comments

Post a Comment (0)