ಬೆಂಗಳೂರು, ಆಗಸ್ಟ್ 28, (ಕರ್ನಾಟಕ ವಾರ್ತೆ): ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ ರೇವಣ್ಣ ಅವರು ಸೆಪ್ಟೆಂಬರ್ 03 ರಂದು ಚಿಕ್ಕಬಳ್ಳಾಪುರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಕಾರ್ಯಾಗಾರ ಮತ್ತು ಪ್ರಗತಿ ಪರಿಶೀಲನಾ ಸಭೆ ನಡೆಸಲು ಚಿಕ್ಕಾಬಳ್ಳಾಪುರ ಜಿಲ್ಲೆಗೆ ಪ್ರವಾಸ ಕೈಗೊಳ್ಳುವರು ಎಂದು ಅಧ್ಯಕ್ಷರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸಕ್ತ ವರ್ಷದಿಂದ ಅಪ್ರೆಂಟಿಸ್‍ಶಿಪ್ ಎಂಬೆಡೆಡ್ ಪದವಿ ಕಾರ್ಯಕ್ರಮದಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ಅಪ್ರೆಂಟಿಸ್‍ಶಿಪ್ ಶುಲ್ಕವನ್ನು ಪಾವತಿಸಬೇಕಾಗಿರುವುದಿಲ್ಲ - ಸಚಿವ ಡಾ.ಎಂ.ಸಿ. ಸುಧಾಕರ್
ಬೆಂಗಳೂರು, ಆಗಸ್ಟ್ 28(ಕರ್ನಾಟಕ ವಾರ್ತೆ):
ಪ್ರಸಕ್ತ ವರ್ಷದಿಂದ ಅಪ್ರೆಂಟಿಸ್‍ಶಿಪ್ ಎಂಬೆಡೆಡ್ ಪದವಿ ಕಾರ್ಯಕ್ರಮದಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ಅಪ್ರೆಂಟಿಸ್‍ಶಿಪ್ ಶುಲ್ಕವನ್ನು ಪಾವತಿಸಬೇಕಾಗಿರುವುದಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರು ತಿಳಿಸಿದರು
ಇಂದು ವಿಕಾಸಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಬೋರ್ಡ್ ಆಫ್ ಅಪ್ರೆಂಟಿಸ್‍ಶಿಪ್ ಟ್ರೈನಿಂಗ್ ನಡುವೆ ಒಡಂಬಡಿಕೆ ಸಹಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ಕಳೆದ ವರ್ಷ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಪ್ರೆಂಟಿಸ್‍ಶಿಪ್ ಎಂಬೆಡೆಡ್ ಪದವಿ ಕಾರ್ಯಕ್ರಮವನ್ನು ಪರಿಚಯಿಸಲಾಗಿದೆ. 2024-25ನೇ ಸಾಲಿನಲ್ಲಿ 43 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಪ್ರೆಂಟಿಸ್‍ಶಿಪ್ ಎಂಬೆಡೆಡ್ ಪದವಿ ಕಾರ್ಯಕ್ರಮಅನ್ನು ಅನುಷ್ಠಾನಗೊಳಿಸಲಾಯಿತು. ಈ ಪದವಿ ಕಾರ್ಯಕ್ರಮದಲ್ಲಿ ಸ್ಟೈಫಂಡ್ ಸಹಿತ ಅಪ್ರೆಂಟಿಸ್‍ಶಿಪ್‍ಅನ್ನು ಕೌಶಲ್ಯಾಧಾರಿತ ಬಿ.ಕಾಂ(ಬಿಎಫ್‍ಎಸ್‍ಐ), ಬಿ.ಕಾಂ(ಲಾಜಿಸ್ಟಿಕ್ಸ್), ಬಿ.ಕಾಂ(ಇ-ಕಾಮರ್ಸ್ ಆಪರೇಷನ್ಸ್) ಮತ್ತು ಬಿ.ಕಾಂ (ರಿಟೈಲ್) ಕೋರ್ಸ್‍ಗಳ ಜೊತೆಗೆ ಅಂತರ್ಗತಗೊಳಿಸಲಾಯಿತು. ಕಳೆದ ವರ್ಷ ಅಪ್ರೆಂಟಿಸ್‍ಶಿಪ್ ಎಂಬೆಡೆಡ್ ಪದವಿ ಕಾರ್ಯಕ್ರಮಅನ್ನು ಅನುಷ್ಠಾನಗೊಳಿಸಿದ ಕಾಲೇಜುಗಳು ಅಪ್ರೆಂಟಿಸ್‍ಶಿಪ್ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸೆಕ್ಟರ್ ಸ್ಕಿಲ್ ಕೌನ್ಸಿಲ್‍ಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದವು. ಈ ಕೋರ್ಸ್‍ಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು ಇತರ ಎಲ್ಲ ವಿದ್ಯಾರ್ಥಿಗಳಷ್ಟೇ ಶುಲ್ಕವನ್ನು ಕಾಲೇಜಿಗೆ ಪಾವತಿಸುವುದ ಜೊತೆಗೆ ಅಪ್ರೆಂಟಿಸ್ ಶುಲ್ಕವಾಗಿ ರೂ.5000/- ಸಂಬಂಧಪಟ್ಟ ಸೆಕ್ಟರ್ ಸ್ಕಿಲ್ ಕೌನ್ಸಿಲ್‍ಗಳಿಗೆ ಪಾವತಿಸಿದ್ದರು. ಆದರೆ ಈ ವರ್ಷದಿಂದ ಅಪ್ರೆಂಟಿಸ್‍ಶಿಪ್ ಎಂಬೆಡೆಡ್ ಪದವಿ ಕಾರ್ಯಕ್ರಮದಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ಅಪ್ರೆಂಟಿಸ್‍ಶಿಪ್ ಶುಲ್ಕವೆಂದು ಯಾವ ಮೊತ್ತವನ್ನು ಪಾವತಿಸಬೇಕಾಗಿರುವುದಿಲ್ಲ ಎಂದು ತಿಳಿಸಿದರು.
ಈ ವರ್ಷ ಅಪ್ರೆಂಟಿಸ್‍ಶಿಪ್ ಎಂಬೆಡೆಡ್ ಪದವಿ ಕಾರ್ಯಕ್ರಮಕ್ಕೆ ಸುಮಾರು 2700 ವಿದ್ಯಾರ್ಥಿನಿಯರು ಪ್ರವೇಶಾತಿ ಪಡೆದಿದ್ದು, ಪ್ರವೇಶಾತಿ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ. ಈ ಎಲ್ಲಾ ವಿದ್ಯಾರ್ಥಿಗಳು ಒಡಂಬಡಿಕೆಯಿಂದ ಪ್ರಯೋಜನ ಪಡೆಯಲಿದ್ದಾರೆ ಎಂದು ತಿಳಿಸಿದರು.
ಅಪ್ರೆಂಟಿಸ್‍ಶಿಪ್ ಎಂಬೆಡೆಡ್ ಪದವಿ ಕಾರ್ಯಕ್ರಮದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಪದವಿಯ ನಂತರ ಉದ್ಯೋಗ ಕೌಶಲ್ಯ, ಪ್ರಾಯೋಗಿಕ ಅನುಭವ ಪಡೆದಿರುತ್ತಾರೆ. ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ ಎಂದು ತಿಳಿಸಿದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರು ಯುಜಿಸಿಯ ಪರಿಷ್ಕøತ ಮಾರ್ಗಸೂಚಿಗಳನ್ವಯ 68 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಹಾಗೂ ಬೋರ್ಡ್ ಆಫ್ ಅಪ್ರೆನ್‍ಂಟಿಸ್‍ಶಿಪ್ ಟ್ರೈನಿಂಗ್ ನಡುವೆ ಒಡಂಬಡಿಕೆಗೆ ಸಹಿಹಾಕಿದರು.
ಚನ್ನೈ ಬೋರ್ಡ್ ಆಫ್ ಅಪ್ರೆನ್‍ಂಟಿಸ್‍ಶಿಪ್ ಟ್ರೈನಿಂಗ್‍ನ ನಿರ್ದೇಶಕ ವಿಜಯ್ ಶಂಕರ್ ಪಾಂಡೆ ಮಾತನಾಡಿ ಬೋರ್ಡ್ ಆಫ್ ಅಪ್ರೆನ್‍ಂಟಿಸ್‍ಶಿಪ್ ಟ್ರೈನಿಂಗ್ ಹಾಗೂ ಸರ್ಕಾರಿ ಕಾಲೇಜಿನ ಒಡಂಬಡಿಕೆ ಇತರೆ ರಾಜ್ಯಗಳಲ್ಲೂ ಚಾಲ್ತಿಯಲ್ಲಿದ್ದು, ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು ಮೂರನೇ ಸ್ಥಾನದಲ್ಲಿದೆ. ಮೂರರಿಂದ ಒಂದನೇ ಸ್ಥಾನಕ್ಕೆ ಬರಲಿ ಎಂದು ಆಶಯವನ್ನು ವ್ಯಕ್ತಪಡಿಸಿದರು.
ಕ್ರಿಸ್ಫ್‍ನ ಸಹಾಯಕರು ಮಾತನಾಡಿ ವಿದ್ಯಾರ್ಥಿಗಳಿಗೆ ಪದವಿ ಪಡೆದ ನಂತರ ಕೆಲಸ ಸಿಗುವುದು ಕಷ್ಟವಾಗುತ್ತಿದೆ. ಅಪ್ರೆಂಟಿಸ್‍ಶಿಪ್ ಎಂಬೆಡೆಡ್ ಪದವಿ ಕಾರ್ಯಕ್ರಮದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಶೈಕ್ಷಣಿಕ ಜ್ಞಾನ ಮತ್ತು ಪ್ರಾಯೋಗಿಕ ಕೌಶಲ್ಯವನ್ನು ಪಡೆದಿರುತ್ತಾರೆ. ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಅವರು ಸ್ಫರ್ಧಿಸಲು ಸಮರ್ಥರಾಗಿರುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು ಕುಮಾರಿ ಮಂಜುಶ್ರೀ, ಕಾಲೇಜು ಶಿಕ್ಷಣ ಇಲಾಖೆಯ ಪ್ರೊ. ಶೋಭ ಜಿ. ಸೇರಿದಂತೆ ಹಿರಿಯ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.