ಬೆಂಗಳೂರು, ಆಗಸ್ಟ್ 13, (ಕರ್ನಾಟಕ ವಾರ್ತೆ) : ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್‍ನ ಅಧೀನದಲ್ಲಿ ಒಟ್ಟು 06 ಪಶು ವೈದ್ಯಕೀಯ ಮಹಾ ವಿದ್ಯಾಲಯಗಳು ಪ್ರಾರಂಭವಾಗಿವೆ. ಈ ವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬುವ ಸಂಬಂಧ ಕ್ರಮ ವಹಿಸಲಾಗುತ್ತಿದ್ದು, ಒಳ ಮೀಸಲಾತಿ ಆದೇಶ ತೀರ್ಮಾನವಾದ ನಂತರ ಅಗತ್ಯ ಕ್ರಮ ವಹಿಸಲಾಗುವುದು ಎಂದು ಪಶುಸಂಗೋಪನೆ ಮತ್ತು ರೇಷ್ಮೇ ಸಚಿವ ಕೆ. ವೆಂಕಟೇಶ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಎಸ್.ವಿ ಸಂಕನೂರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು ಹೆಬ್ಬಾಳ ಪಶುವೈದ್ಯಕೀಯ ಮಹಾ ವಿದ್ಯಾಲಯದಲ್ಲಿ 91 ಹುದ್ದೆ ಮಂಜೂರಾಗಿದ್ದು, 31 ಹುದ್ದೆಗಳು ಖಾಲಿ ಇದೆ, ಬೀದರ್ ಪಶುವೈದ್ಯಕೀಯ ಮಹಾ ವಿದ್ಯಾಲಯದಲ್ಲಿ 91 ಹುದ್ದೆ ಮಂಜೂರಾಗಿದ್ದು, 40 ಹುದ್ದೆಗಳು ಖಾಲಿ ಇವೆ. ಶಿವಮೊಗ್ಗ ಪಶು ಮಹಾ ವಿದ್ಯಾಲಯದಲ್ಲಿ 91 ಹುದ್ದೆ ಮಂಜೂರಾಗಿದ್ದು, 50 ಹುದ್ದೆಗಳು ಖಾಲಿ ಇವೆ. ಹಾಸನ ಪಶು ಮಹಾ ವಿದ್ಯಾಲಯದಲ್ಲಿ 91 ಹುದ್ದೆಗಳು ಮಂಜೂರಾಗಿದ್ದು, 51 ಹುದ್ದೆ ಖಾಲಿ ಇದೆ. ಗದಗ ಪಶು ಮಹಾ ವಿದ್ಯಾಲಯದಲ್ಲಿ 91 ಹುದ್ದೆ ಮಂಜೂರಾಗಿದ್ದು, 51 ಹುದ್ದೆ ಖಾಲಿ ಇದೆ. ಅದೇ ರೀತಿ ಅಥಣಿ ಪಶು ಮಹಾ ವಿದ್ಯಾಲಯದಲ್ಲಿ 77 ಹುದ್ದೆ ಮಂಜೂರಾಗಿದ್ದು, 65 ಹುದ್ದೆ ಖಾಲಿ ಇವೆ. ಈ ಎಲ್ಲಾ ಖಾಲಿ ಇರುವ ಹುದ್ದೆಗಳನ್ನು ಒಳ ಮೀಸಲಾತಿ ಆದೇಶ ತೀರ್ಮಾನವಾದ ಕೂಡಲೇ ಅಗತ್ಯ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.