ಬೆಂಗಳೂರು,ಆ.28; ಜೆಪಿನಗರದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನಿಂದ ಅತ್ಯಂತ ವೈಭವದಿಂದ ಪರಿಸರ ಸ್ನೇಹಿ ಗಣಪತಿ ಹಬ್ಬ ಆಚರಿಸಲಾಯಿತು. ಗಣಪತಿಯನ್ನು ವೀಲ್ಯದೆಲೆ ಮತ್ತು ತೆಂಗಿನ ಗರಿಗಳಿಂದ ಆಕರ್ಷಕವಾಗಿ ಅಲಂಕಾರ ಮಾಡಿದ್ದು, ಕಲಾವಿದರು ನಾಲ್ಕು ದಿನಗಳ ಕಾಲ ಗಣೇಶೋತ್ಸವಕ್ಕೆ ದೇವಾಲಯನ್ನು ಸಜ್ಜುಗೊಳಿಸಿದರು.
ದೇವಸ್ಥಾನವನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತಗೊಳಿಸಿದ್ದು, ಮಂದಿರದ ಆವರಣದಲ್ಲಿ ಶುಚಿತ್ವಕ್ಕೆ ಒತ್ತು ನೀಡಲಾಗಿತ್ತು. ಅಭಿಷೇಕ, ಅಲಂಕಾರ, ಸ್ವರ್ಣಗೌರಿ ವ್ರತ, ವರಸಿದ್ಧಿ ವಿನಾಯಕ ವ್ರತ, ಮಹಾಗಣಪತಿ ಹೋಮ, ಮೊದಲಾದ ವಿಶೇಷ ಪೂಜಾ ಕೈಂಕರ್ಯಗಳು ಸುಗಮವಾಗಿ ನೆರವೇರಿತು.ಬಿಬಿಎಂಪಿ ಮಾಜಿ ಉಪಮೇಯರ್ ಹಾಗೂ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ನ ಟ್ರಸ್ಟಿ ಸಿ.ಆರ್. ರಾಮಮೋಹನ್ ರಾಜು ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ವಿಶೇಷ ಅಲಂಕಾರಕ್ಕೆ ಒತ್ತು ನೀಡಿದ್ದು, ವೀಳ್ಯದೆಲೆ, ತೆಂಗಿನ ಗರಿಗಳನ್ನು ಐದು ದಿನದ ನಂತರ ತೆಗೆದು ಬೆಲ್ಲ, ಸಕ್ಕರೆ, ಬೂಸಾ ಮಿಶ್ರಣ ಮಾಡಿ ಇದನ್ನು ಜಾನುವಾರುಗಳಿಗೆ ನೀಡಲಾಗುವುದು. ಹೂವು, ಹಣ್ಣು ಸೇರಿದಂತೆ ಯಾವುದೇ ವಸ್ತು ವ್ಯರ್ಥ ಮಾಡುವುದಿಲ್ಲ. ಪುನರ್ ಬಳಕೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
