ಕರ್ನಾಟಕ ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳಲ್ಲಿನ ಕಾರ್ಮಿಕರು 1.1.2024 ರಿಂದ ವೇತನ ಪರಿಷ್ಕರಣೆ, ಇದರ ಹಿಂದಿನ ಅವಧಿಯ 38 ತಿಂಗಳ ಹಿಂಬಾಕಿ ಮತ್ತು ಅಕ್ರಮವಾಗಿ ವಜಾ ಆಗಿರುವ ಕಾರ್ಮಿಕರ ಮರುನೇಮಕ, ಇತ್ಯಾದಿ ಬೇಡಿಕೆಗಳಿಗೆ ಆಗ್ರಹಿಸಿ 2025 ಆಗಸ್ಟ್ 5 ನೇ ತಾರೀಖಿನಿಂದ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅನಿರ್ದಿಷ್ಟಾವದಿ ನಡೆಸಲು ತೀರ್ಮಾನಿಸಿರುವುದು ತಮಗೆ ತಿಳಿದ ವಿಚಾರವಾಗಿದೆ. ಸಾರಿಗೆ ಕಾರ್ಮಿಕರ ನ್ಯಾಯಯುತ ಬೇಡಿಕೆಗಳನ್ನು ತಾವು ಸಕಾರಾತ್ಮಕವಾಗಿ ಪರಿಹರಿಸಲು ತುರ್ತು ಮಧ್ಯಪ್ರವೇಶ ಮಾಡುವುದು ಅಗತ್ಯವಾಗಿದೆ. ತಮ್ಮ ನೇತೃತ್ವದ ರಾಜ್ಯ ಸರ್ಕಾರವು ಸಮಸ್ಯೆಗಳನ್ನು ಪರಿಹರಿಸಲು ವಿಫಲವಾದಲ್ಲಿ, ಕಾರ್ಮಿಕರ ಮುಷ್ಕರವನ್ನು ಸಿಪಿಐ(ಎಂ) ಪಕ್ಷವು ಬೆಂಬಲಿಸಲು ತೀರ್ಮಾನ ಮಾಡಿದೆ. ಆದ್ದರಿಂದ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಮತ್ತು ಸಾರಿಗೆ ಕಾರ್ಮಿಕರ ಬದುಕಿನ ದೃಷ್ಟಿಯಿಂದ ತಾವು ಸಮಸ್ಯೆಗಳನ್ನು ಇತ್ಯರ್ಥ ಮಾಡಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ.
ಹಿಂದಿನ ಬಿಜೆಪಿ ಸರ್ಕಾರ ತನ್ನ ಕೊನೆ ಕಾಲದಲ್ಲಿ ಶೇ.15 ರಷ್ಟು ವೇತನ ಹೆಚ್ಚಳ ಮಾಡಿತು. ಈ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಸರ್ಕಾರ ನೀಡಬೇಕಾಗಿದೆ. ಜೊತೆಗೆ 1.1.2024 ರಿಂದ ವೇತನ ಹೆಚ್ಚಳದ ಮಾತುಕತೆ ಮಾಡಬೇಕಾಗಿದೆ. ಇದಲ್ಲದೆ ಇನ್ನೂ ಹಲವಾರು ಬೇಡಿಕೆಗಳಿವೆ. ಇವೆಲ್ಲವೂ ನ್ಯಾಯಬದ್ಧವಾಗಿ ಸಾರಿಗೆ ಕಾರ್ಮಿಕರಿಗೆ ಸಿಕ್ಕಬೇಕಾದ ಅಂಶಗಳಾಗಿವೆ.
ಹಿಂಬಾಕಿ ನೀಡಲು ಆಗುವುದಿಲ್ಲ ಎಂಬ ತಮ್ಮ ಸರ್ಕಾರದ ಧೋರಣೆಯು ಸಾರಿಗೆ ಕಾರ್ಮಿಕರಲ್ಲಿ ಅಪಾರವಾದ ಅತೃಪ್ತಿಯನ್ನು ಉಂಟು ಮಾಡಿದೆ. ಜೊತೆಗೆ 20 ತಿಂಗಳಾದರೂ ಚಾಲ್ತಿ ವೇತನ ಮಾತುಕತೆ ಮಾಡದಿರುವುದರ ಬಗ್ಗೆಯೂ ಅತೃಪ್ತಿ ಹೆಚ್ಚಾಗಿದೆ. ಸರ್ಕಾರವು ನಿರ್ಲಕ್ಷ್ಯ ಧೋರಣೆ ತಾಳುತ್ತಿದೆ ಎಂಬ ಬಗ್ಗೆ ಅತೃಪ್ತಿ ತೀವ್ರಗೊಳ್ಳುತ್ತಿದೆ. ಈ ಅತೃಪ್ತಿಯು ಕೇವಲ ಸಾರಿಗೆ ಕಾರ್ಮಿಕರಿಗೆ ಮಾತ್ರ ನಿಲ್ಲದೆ ಸಾರ್ವಜನಿಕರ ನಡುವೆಯೂ ಹಬ್ಬಲಿದೆ. ರಾತ್ರಿ ಹಗಲು ಶ್ರಮ ಹಾಕಿ ದುಡಿಯುವ ಸಾರಿಗೆ ಕಾರ್ಮಿಕರಿಗೆ ನ್ಯಾಯಬದ್ಧ ಬೇಡಿಕೆಗಳನ್ನು ಈಡೇರಿಸಿದರೆ ಹಣ ಕೊರತೆಯಾಗುತ್ತದೆ ಎಂದು ವಾದಿಸುವ ಸರ್ಕಾರ, ಒಂದು ವಿದೇಶಿ ಫಾಕ್ಸ್ ಕಾನ್ ಕಂಪನಿಗೆ 6 ಸಾವಿರ ಕೋಟಿ ರೂಪಾಯಿ ಸಬ್ಸಿಡಿ ನೀಡಲು ಹಣದ ಕೊರತೆ ಮಾತೇ ಆಡುವುದಿಲ್ಲ ಎಂಬುದನ್ನು ಸಾರಿಗೆ ಕಾರ್ಮಿಕರು ಗಮನಿಸುತ್ತಿದ್ದಾರೆ.