ವಿಕಲಚೇತನ ಮಕ್ಕಳಿಗೆ ಸ್ಥಳೀಯವಾಗಿ ಫಿಜಿಯೋ ಥೆರಪಿ ಸೇವೆ ಲಭ್ಯವಾಗಲಿ ಕಳ್ಳಂಬೆಳ್ಳದಲ್ಲಿ ಫಿಜಿಯೋ ಥೆರಪಿ ಕೇಂದ್ರದ ಉದ್ಘಾಟನೆ

varthajala
0

 ಪ್ರತಿಯೊಂದು ಮಗುವೂ ಬೆಳೆಯಲು, ಕಲಿಯಲು ಮತ್ತು ಘನತೆಯಿಂದ ಬದುಕಲು ಅವಕಾಶವನ್ನು ಪಡೆಯಬೇಕು. ವಿಕಲಚೇತನ ಮಕ್ಕಳಿಗೆ, ಚಲನೆ ಮತ್ತು ಸ್ವಾತಂತ್ರ‍್ಯವು ಒಂದು ಸವಾಲಾಗಿರಬಹುದು. ಇದನ್ನು ನಿಭಾಯಿಸುವಲ್ಲಿ  ಫಿಜಿಯೋ  ಥೆರಪಿಯು ಪ್ರಮುಖ ಪಾತ್ರ ವಹಿಸುತ್ತದೆ ಹಾಗೂ ಮಕ್ಕಳ ಚಲನಶೀಲತೆ, ಸಮತೋಲನ ಸಾಧಿಸಲು ಸಹಾಯ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಪ್ರಾಥಮಿಕ ಆರೋಗ್ಯ ಕೆಂದ್ರದ ಹಂತದಲ್ಲಿ  ಫಿಜಿಯೋ  ಥೆರಪಿ ಸೇವೆ ಒದಗಿಸಲು ಸೂಕ್ತಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ ಹೇಳಿದರು.

ಅವರು ಮೊಬಿಲಿಟಿ ಇಂಡಿಯಾ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಿರಾ ಇವರ ಸಂಯುಕ್ತಾಶ್ರದಲ್ಲಿ ಸಿರಾ ತಾಲ್ಲೂಕು ಕಳ್ಳಂಬೆಳ್ಳದ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ವಿಶ್ವ  ಫಿಜಿಯೋ ಥೆರಪಿ ದಿನಾಚರಣೆ ಹಾಗೂ  ಫಿಜಿಯೋ ಥೆರಪಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಮೊಬಿಲಿಟಿ ಇಂಡಿಯಾ ಸಂಸ್ಥೆಯು ಕಳ್ಳಂಬೆಳ್ಳದಲ್ಲಿ ಉಚಿತ  ಫಿಜಿಯೋ ಥೆರಪಿ ಕೇಂದ್ರವನ್ನು ಆರಂಭಿಸಿದ್ದು ಸದರಿ ಚಿಕಿತ್ಸೆಯು ನೋವನ್ನು ಕಡಿಮೆ ಮಾಡುತ್ತದೆ, ಸಂಭವನೀಯ ತೊಡಕುಗಳನ್ನು ತಡೆಯುತ್ತದೆ ಹಾಗೂ ಮಕ್ಕಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಿಯಮಿತ ಚಿಕಿತ್ಸೆಯೊಂದಿಗೆ, ಅನೇಕ ಮಕ್ಕಳು ದೈನಂದಿನ ಚಟುವಟಿಕೆಗಳನ್ನು ಹೆಚ್ಚು ಸುಲಭವಾಗಿ ನಿರ್ವಹಿಸಬಹುದು, ಶಾಲೆಯಲ್ಲಿ ಭಾಗವಹಿಸಬಹುದು ಮತ್ತು ತಮ್ಮ ಗೆಳೆಯರೊಂದಿಗೆ ಬೆರೆಯಲು ಸಾಧ್ಯವಾಗಲಿದ್ದು ಪೋಷಕರು ಇದರ ಸದುಪಯೋಗ ಪಡೆಯಬೇಕು, ಇಂತಹ ಸೇವೆಯನ್ನು ಉಚಿತವಾಗಿ ನೀಡುತ್ತಿರುವ ಮೊಬಿಲಿಟಿ ಇಂಡಿಯಾ ಸಂಸ್ಥೆ ಶ್ಲಾಘನೀಯವೆಂದರು.
ಕಾರ್ಯಕ್ರಮದಲ್ಲಿ ವಿಶ್ವ  ಫಿಜಿಯೋ ಥೆರಪಿ ದಿನಾಚರಣೆಯ ಪ್ರಯುಕ್ತ  ಫಿಜಿಯೋ  ಥೆರಪಿಸ್ಟ್ ಗಳಿಗೆ ಸನ್ಮಾನ ಮಾಡಲಾಯಿತು ಹಾಗೂ ವಿಕಲಚೇತನ ಮಕ್ಕಳ ಪೋಷಕರಿಗೆ ಪರಿಕರಗಳು ಹಾಗೂ ನಿರಾಮಯ ಕಾರ್ಡ್ ಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಸಿರಾ ತಾಲ್ಲೂಕಿನ ಕ್ಷೇತ್ರಶಿಕ್ಷಣಾಧಿಕಾರಿ ಶ್ರೀ ಕೃಷ್ಣಪ್ಪನವರು ಮಾತನಾಡಿ ವಿಕಲಚೇತನ ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ ಕಲಿಕೆಯನ್ನು ಮುಂದುವರೆಸಲು ಸೂಕ್ತ ಚಿಕಿತ್ಸೆ ಹಾಗೂ ಪರಿಕರಗಳು ಅಗತ್ಯವಿದೆ. ಅದನ್ನು ವ್ಯವಸ್ಥೆಮಾಡುವಲ್ಲಿ ಮೊಬಿಲಿಟಿ ಇಂಡಿಯಾ ಸಂಸ್ಥೆ ಸಿರಾ ತಾಲ್ಲೂಕಿನಲ್ಲಿ ಸಾಕಷ್ಟು ಉತ್ತಮ ಕೆಲಸಮಾಡುತ್ತಿರುವುದು ಅಭಿನಂದನೀಯ ಎಂದರು.
ಮೊಬಿಲಿಟಿ ಇಂಡಿಯಾ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಆನಂದ್ ಮಾತನಾಡಿ  ಫಿಜಿಯೋ ಥೆರಪಿಸ್ಟ್ ಗಳು ಮನೆಯಲ್ಲಿ ಅಭ್ಯಾಸ ಮಾಡಬಹುದಾದ ವ್ಯಾಯಾಮಗಳನ್ನು ಕಲಿಸುವ ಮೂಲಕ ವಿಕಲಚೇತನರ ಕುಟುಂಬಗಳನ್ನು ಬೆಂಬಲಿಸುತ್ತಾರೆ, ಮಕ್ಕಳ ಪ್ರಗತಿಯನ್ನು ಖಚಿತಪಡಿಸಿಕೊಳ್ಳುತ್ತಾರೆ. ಪುನರ್ವಸತಿ ಎಂದರೆ ದೇಹಕ್ಕೆ ಚಿಕಿತ್ಸೆ ನೀಡುವುದು ಮಾತ್ರವಲ್ಲ ಇದು ಮಕ್ಕಳಿಗೆ ತಮ್ಮ ಪೂರ್ಣ ಸಾಮರ್ಥ್ಯವನ್ನು ಸಾಧಿಸಲು ಮತ್ತು ತೃಪ್ತಿಕರ ಜೀವನವನ್ನು ನಡೆಸಲು ಅವಕಾಶವನ್ನು ನೀಡುವುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಳ್ಳಂಬೆಳ್ಳ ಹೋಬಳಿಯ ವಿವಿಧ ಗ್ರಾಮಗಳ ವಿಕಲಚೇತನ ಮಕ್ಕಳು ಮತ್ತು ಅವರ ಪೋಷಕರು, ಶಾಲಾ ಶಿಕ್ಷಣ ಇಲಾಖೆಯ ಸಮನ್ವಯ ಶಿಕ್ಷಣ ಅಧಿಕಾರಿಗಳು, ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಅನಿಲ್ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು. 

Post a Comment

0Comments

Post a Comment (0)