ಬೆಂಗಳೂರು, ಸೆಪ್ಟೆಂಬರ್ 12 (ಕರ್ನಾಟಕ ವಾರ್ತೆ): ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿ ದೆಸೆಯಿಂದಲೆ ಸ್ಪರ್ಧೆ ಎದುರಿಸಲು ಉತ್ತಮ ಜ್ಞಾನಾರ್ಜನೆ ಮಾಡಬೇಕು ಎಂದು ಇಸ್ಟ್ರಾಕ್ ನ ವಿಜ್ಞಾನಿ ಎಸ್‍ಜಿ ಶ್ರೀನಾಥ್ ರತ್ನಕುಮಾರ್ ಅವರು ತಿಳಿಸಿದರು.
ಇಂದು ಜವಾಹರಲಾಲ್ ನೆಹರು ತಾರಾಲಯ, ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್ ವತಿಯಿಂದ ಜವಾಹರಲಾಲ್ ನೆಹರು ತಾರಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಜ್ಞಾನ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವಿಜ್ಞಾನ ವಿಷಯ ಕಲಿಯುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಜೊತೆಗೆ ಆರ್ಥಿಕ ಅಭಿವೃದ್ಧಿಗೆ ಉತ್ತೇಜನಕ್ಕೆ ಒತ್ತು ನೀಡಬೇಕು. ವಿಜ್ಞಾನದ ಜೊತೆಗೆ ತಂತ್ರಜ್ಞಾನದ ಬೆಳವಣಿಗೆಯಾದಾಗ ದೇಶ ಅಭಿವೃದ್ಧಿ ಪಥದಲ್ಲಿ ಸಾಗಿ ಆರ್ಥಿಕ ಸಬಲೀಕರಣ ಉಂಟಾಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಒಂದೇ ವಿಷಯದಲ್ಲಿ ಪರಿಣತಿ ಪಡೆಯದೆ ಬಹುಮುಖವಾಗಿ ಜ್ಞಾನಾರ್ಜನೆ ಪಡೆಯಬೇಕು. ಆಗ ಭವಿಷ್ಯದ ಸವಾಲನ್ನು ಎದುರಿಸುವ ಶಕ್ತಿ ಬರುತ್ತದೆ. ಕಾಲೇಜಿನಲ್ಲಿ ಕಲಿಯಲು ಸಾಧ್ಯವಾಗದೆ ಇದ್ದರೆ ಆನ್‍ಲೈನ್ ಕೋರ್ಸ್ ಮೂಲಕ ಜ್ಞಾನಾರ್ಜನೆ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಕಲಿಯುವ ಪ್ರೇರಣೆ ಜೊತೆಗೆ ಪ್ರಯತ್ನ ಸಹ ಇರಬೇಕು. ಪ್ರಯತ್ನದಿಂದ ಯಶಸ್ಸು ಸಾಧ್ಯ. ಇಸ್ರೋ ವಿಜ್ಞಾನಿಗಳ ಸಾಧನೆಯಿಂದ ಮನುಕುಲಕ್ಕೆ ಪ್ರಯೋಜನವಾಗಿದೆ. ವಿಜ್ಞಾನ ಕ್ಷೇತ್ರಕ್ಕೆ ಸಾಕಷ್ಟು ಕನ್ನಡಿಗರು ತಮ್ಮ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಜವಾಹರಲಾಲ್ ನೆಹರು ತಾರಾಲಯದ ನಿರ್ದೇಶಕ ಡಾ. ಬಿ.ಆರ್. ಗುರುಪ್ರಸಾದ್ ಮಾತನಾಡಿ,. ಸುನಾಮಿ, ಚಂಡಮಾರುತಕ್ಕೆ ಸಾವಿರಾರು ಜನ ತುತ್ತಾಗುತ್ತಿದ್ದರು. ಈಗ ಉಪಗ್ರಹಗಳ ಸಹಾಯದಿಂದ ಹವಾಮಾನ ವೈಪರೀತ್ಯದ ಬಗ್ಗೆ ಮುನ್ನೆಚ್ಚರಿಕೆ ನೀಡುವುದರಿಂದ ಅಪಾರ ಸಾವು ನೋವುಗಳು ಕಡಿಮೆಯಾಗಿದೆ ಎಂದರು.
ವೀಕ್ಷಣೆ ಹಾಗೂ ಪ್ರಯೋಗ ಈ ಎರಡು ವಿಧಾನಗಳು ವಿಜ್ಞಾನದ ಮುನ್ನಡೆಗೆ ಮುಖ್ಯ ಮಾರ್ಗಗಳಾಗಿವೆ. ವಿಜ್ಞಾನದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಸಕ್ತಿ ಮೂಡಿಸುವುದಕ್ಕಾಗಿ ವಿಜ್ಞಾನ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಜ್ಞಾನ ಪ್ರದರ್ಶನದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರದ ಕುರಿತು ಸುಮಾರು 80 ಮಕ್ಕಳು 26 ಮಾದರಿಗಳನ್ನು ಪ್ರದರ್ಶಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜವಾಹರಲಾಲ್ ನೆಹರು ತಾರಾಲಯದ ಅಧಿಕಾರಿಗಳು ಸಿಬ್ಬಂದಿ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.