ಬೆಂಗಳೂರು, ಸೆಪ್ಟೆಂಬರ್ 12 (ಕರ್ನಾಟಕ ವಾರ್ತೆ):
ರಾಷ್ಟ್ರದಲ್ಲಿ ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾಲಯ, ವೃತ್ತಿ ಶಿಕ್ಷಣ, ಕಾಲೇಜುಗಳಲ್ಲಿ ಹೆಚ್ಚಾಗುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯಾ ಪ್ರಕರಣಗಳ ಕುರಿತು ಸರ್ವೋಚ್ಛ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಈ ನ್ಯಾಯಾಲಯ ವಿದ್ಯಾರ್ಥಿಗಳ ಆತ್ಮಹತ್ಯೆ ನಿವಾರಣೆಗೆ ರಾಷ್ಟ್ರೀಯ ಕಾರ್ಯಪಡೆ ರೂಪಿಸಲು ಶಿಫಾರಸ್ಸು ಮಾಡಿದ್ದು, ಇದರ ಅಧ್ಯಕ್ಷರಾಗಿ ನಿವೃತ್ತ ನ್ಯಾಯಾಧೀಶರಾದ ಎಸ್ ರವೀಂದ್ರ ಭಟ್ ಅವರನ್ನು ನೇಮಿಸಿದೆ. ಈ ಕಾರ್ಯಪಡೆ ಸಮಗ್ರವಾದ ವರದಿ ಸಿದ್ಧಪಡಿಸುವ ಕೆಲಸ ವಹಿಸಿಕೊಂಡಿದ್ದು ವಿದ್ಯಾರ್ಥಿಗಳು ಅನುಭವಿಸುತ್ತಿರುವ ರ್ಯಾಗಿಂಗ್, ತಾರತಮ್ಯ ಶೈಕ್ಷಣಿಕ ಒತ್ತಡ ಮುಂತಾದವುಗಳ ತಡೆಗಾಗಿ ಸಹ ಪ್ರಾಯೋಗಿಕ ಕ್ರಮಗಳನ್ನು ಶಿಫಾರಸ್ಸು ಮಾಡುತ್ತದೆ.
ವಿಶ್ವ ಆತ್ಮಹತ್ಯಾ ನಿವಾರಣಾ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಕಾರ್ಯಪಡೆ ವಿದ್ಯಾರ್ಥಿಗಳ ಯೋಗಕ್ಷೇಮ ಮತ್ತು ಆತ್ಮಹತ್ಯೆ ನಿವಾರಣೆ ಕುರಿತ ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದೆ. ಈ ಕಾರ್ಯಪಡೆಯು ದೆಹಲಿ, ಹರಿಯಾಣ, ಕರ್ನಾಟಕ ಮತ್ತು ತಮಿಳುನಾಡಿನ 13 ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳು, ಬೋಧಕರು, ಆಡಳಿತ ವರ್ಗ ಹಾಗೂ ಕುಂದು-ಕೊರತೆ ಸಮಿತಿಗಳೊಂದಿಗೆ ಸಂವಾದ ನಡೆಸಿದೆ. ವಿದ್ಯಾರ್ಥಿಗಳ ಯೋಗಕ್ಷೇಮಕ್ಕೆ ಪೂರಕವಾದ ಮೂಲ ಸೌಕರ್ಯ, ಸೇವೆಗಳನ್ನು ನೀಡುವಂತೆ ಸಹ ಸಲಹೆ ನೀಡಿದೆ.
ಕಾರ್ಯಪಡೆಯು ವೈದ್ಯಕೀಯ ವಿದ್ಯಾರ್ಥಿಗಳು, ವಿಕಲಚೇತನ, ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳೊಂದಿಗೆ ಸಹ ಸಮಾಲೋಚನೆ ನಡೆಸಿದೆ. ಅಲ್ಲದೆ ಆನ್‍ಲೈನ್ ಸಮೀಕ್ಷೆಯನ್ನು ಸಹ ಪಾಲುದಾರೊಂದಿಗೆ ನಡೆಸಿದೆ. ಸಮೀಕ್ಷೆಯನ್ನು ಜಾಳತಾಣ https://ntf.education.gov.in ನಲ್ಲಿ ಕೈಗೊಳ್ಳಲಾಗಿದ್ದು ವಿದ್ಯಾರ್ಥಿಗಳು, ಬೋಧಕರು, ಪೋಷಕರು, ಸೇವಾಕರ್ತರು ಹಾಗೂ ಇನ್ನಿತರರು ಈ ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.