ಬೆಂಗಳೂರು, ಸೆಪ್ಟೆಂಬರ್ 02 (ಕರ್ನಾಟಕ ವಾರ್ತೆ): ಬೆಂಗಳೂರು ನಗರ ವಿಶ್ವವಿದ್ಯಾಲಯದ ಜಾಗತಿಕ ಕೇಂದ್ರದ ವತಿಯಿಂದ ವಿಕ್ಟರ್ ಹುಗೋ ಕುರಿತ ವಿಚಾರ ಸಂಕಿರಣ ಮತ್ತು ಸಾಹಿತ್ಯೋತ್ಸವವನ್ನು ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದೊಂದಿಗೆ ಸೆಪ್ಟೆಂಬರ್ 3 ರಂದು ಬೆಳಿಗ್ಗೆ 10:30ಕ್ಕೆ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದೆ.
ಫ್ರಾನ್ಸ್‍ನ ಕೌನ್ಸಲ್ ಜನರಲ್ ಮಾರ್ಕ್ ಲಾಮಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಪ್ರಭಾರ ಕುಲಪತಿ ಕೆ.ಆರ್. ಜಲಜ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಗೌರವ ಅತಿಥಿಗಳಾಗಿ ಅಲಿಯಾನ್ಸ್ ಫ್ರಾನ್ಸಿಸ್ ಡಿ ಬೆಂಗಳೂರು ನಿರ್ದೇಶಕರು ಶ್ರೀಜೀನ್-ಮಾರ್ಕ್ ಡಿಪಿಯರ್, ವಿದೇಶಿ ಇಲಾಖೆಯ ಸಂಸ್ಥಾಪಕಿ ಹಾಗೂ ಲೇಖಕಿ ಡಾ. ಸುಮನ್ ವೆಂಕಟೇಶ್, ಫ್ರೆಂಚ್ ಭಾಷಾ ಸಹಕಾರಕ್ಕಾಗಿ ಥಾಮಸ್ ಛಾಮೋಂಟ್, ಮತ್ತು ವೈಜ್ಞಾನಿಕ ಹಾಗೂ ಶೈಕ್ಷಣಿಕ ಸಹಕಾರಕ್ಕಾಗಿ ಅಂಟೋನಿ ಗಿಲ್‍ಮೆಟ್ ಅವರು ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಫ್ರಾನ್ಸ್ ಸರ್ಕಾರವು ಪ್ರೊ. ಜ್ಯೋತಿ ವೆಂಕಟೇಶ್ ಅವರಿಗೆ ಫ್ರೆಂಚ್ ಸಂಸ್ಕøತಿಯ ಬೆಳವಣಿಗೆ ಮತ್ತು ಪ್ರಚಾರಕ್ಕೆ ನೀಡಿದ ಕೊಡುಗೆಗಾಗಿ 'ಶೆವಲಿಯರ್ ಇನ್ ದಿ ಆರ್ಡರ್ ಆಫ್ ಅಕಾಡೆಮಿಕ್ ಪಾಮ್ಸ್' ಎಂಬ ಬಿರುದನ್ನು ನೀಡುತ್ತಿದೆ.
ಈ ಕಾರ್ಯಕ್ರಮದಲ್ಲಿ ಡಾ. ಸುಮನ್ ವೆಂಕಟೇಶ್ ತಮ್ಮ ಕೃತಿ ವಿಕ್ಟರ್ ಹುಗೋ ಮತ್ತು ಹಿಂದೂ ತತ್ವಶಾಸ್ತ್ರ” ಕುರಿತು ಮಾತನಾಡಲಿದ್ದಾರೆ. ಜೊತೆಗೆ ವಿಕ್ಟರ್ ಹುಗೋ ಅವರ ಕವನಗಳ ಆಧಾರದ ಮೇಲೆ ವೀಡಿಯೊ ಸ್ಪರ್ಧೆಗಳು ನಡೆಯಲಿವೆ ಎಂದು ಜಾಗತಿಕ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.