ಬೆಂಗಳೂರು, ಸೆಪ್ಟೆಂಬರ್ 17 (ಕರ್ನಾಟಕ ವಾರ್ತೆ): ವಿಕಲಚೇತನರ ಕಲ್ಯಾಣ ಇಲಾಖೆ, ಇತರ ಇಲಾಖೆಗಳು, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಸಂಸ್ಥೆಗಳ ಸಹಯೋಗದಲ್ಲಿ ಇದೇ ಡಿಸೆಂಬರ್‍ನಲ್ಲಿ ‘ಪರ್ಪಲ್ ಫೆಸ್ಟ್’ ಅನ್ನು ಆಯೋಜಿಸಲು ಉದ್ದೇಶಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಾದ ಶಮ್ಲಾ ಇಕ್ಬಾಲ್ ತಿಳಿಸಿದರು.
ಅವರು ಮಂಗಳವಾರ ವಿಕಾಸಸೌಧದಲ್ಲಿ ‘ಪರ್ಪಲ್ ಫೆಸ್ಟ್’ ಆಯೋಜಿಸುವ ಕುರಿತು ಹಮ್ಮಿಕೊಳ್ಳಲಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮ ಮುಖ್ಯವಾಗಿ ವಿಕಲಚೇತನರ ಸಬಲೀಕರಣದ ಉದ್ದೇಶಕ್ಕಾಗಿ ಹಮ್ಮಿಕೊಳ್ಳಲಾಗಿದ್ದು, ಇವರಿಗೆ ಶಿಕ್ಷಣ, ಕೌಶಲ್ಯ ಮತ್ತು ಉದ್ಯೋಗ ಸೃಷ್ಟಿಗೆ ಬೆಂಬಲ ನೀಡಲು ಈ ಫೆಸ್ಟ್ ಮುಖ್ಯ ಪಾತ್ರ ವಹಿಸಲಿದೆ. ದಿವ್ಯಾಂಗರು ಸಮಾಜದ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸಲು, ಇವರಿಗೆ ಉತ್ತಮ ವೇದಿಕೆ ಕಲ್ಪಿಸಲು ಸಹ ಪರ್ಪಲ್ ಫೆಸ್ಟ್ ಸಹಕಾರಿಯಾಗುತ್ತದೆ ಎಂದರು.
ವಿಶೇಷಚೇತನರಲ್ಲಿರುವ ಪ್ರತಿಭೆಯನ್ನು ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಅನಾವರಣ ಮಾಡಲು ಸಹ ಇದು ಒಂದು ಮುಖ್ಯ ವೇದಿಕೆಯಾಗಿದೆ. ಇವರು ಕ್ರೀಡೆ, ಕುಶಲಕಲೆ, ಸಾಹಿತ್ಯ, ಸಂಗೀತ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ತಂದಿದ್ದಾರೆ. ಸರ್ಕಾರ-ಸರ್ಕಾರೇತರ ಸಂಸ್ಥೆಗಳು ಸಹ ಈ ಕಾರ್ಯಕ್ರಮದಲ್ಲಿ ಕೈಜೋಡಿಸಿ ಯಶಸ್ವಿಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಸಭೆಯಲ್ಲಿ ಮಾತನಾಡಿದ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತರಾದ ದಾಸ್ ಸೂರ್ಯವಂಶಿ, ಇದೇ ಡಿಸೆಂಬರ್ 1 ರಿಂದ 3 ರವರೆಗೆ 3 ದಿನಗಳ ಕಾಲ ಪರ್ಪಲ್ ಫೆಸ್ಟ್ ಅನ್ನು ಆಯೋಜಿಸಲಾಗಿದ್ದು. ಇದರಲ್ಲಿ ಒಂದು ಲಕ್ಷ ವಿಕಲಚೇತನರಿಗೆ ಉದ್ಯೋಗಾವಕಾಶವನ್ನು ಸೃಚ್ಟಿಸಲು ಗುರಿ ಹೊಂದಲಾಗಿದೆ. ಇದರ ಅಂಗವಾಗಿ ಶೈಕ್ಷಣಿಕ ಎಕ್ಸ್‍ಪೊ ಸಹ ಹಮ್ಮಿಕೊಳ್ಳಲಾಗುವುದು. ಅಸ್ತಿತ್ವದಲ್ಲಿರುವ ಮತ್ತು ಹೊಸ ನೀತಿಗಳ ಬಗ್ಗೆ ಜಾಗೃತಿ ಮೂಡಿಸಲು ನೀತಿ ಸಂವಾದಕ್ಕೆ ವೇದಿಕೆ ಸೃಷ್ಟಿಸಿ ಅಂತರ್ಗತ ಕಾರ್ಯವಿಧಾನಗಳನ್ನು ಅಳವಡಿಸಲು ನಿಗಮಗಳಿಗೆ ಮಾರ್ಗದರ್ಶನ ನೀಡಲು ಅತ್ಯುತ್ತಮ ಕಾರ್ಯವಿಧಾನಗಳ ಕೈಪಿಡಿ ಬಿಡುಗಡೆ ಮಾಡಲಾಗುವುದು. ವಿಕಲಚೇತರನ್ನು ಒಳಗೊಂಡಿರುವ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (sಸಿಎಸ್‍ಆರ್) ನಿಧಿಗಳಲ್ಲಿ ಶೇ 5 ರಷ್ಟು ಮೀಸಲಿರಿಸುವ ಕುರಿತು ಚರ್ಚಿಸಲು ಸಿಎಸ್‍ಆರ್ ಪೆವಿಲಿಯನ್ ರಚಿಸಲಾಗುವುದು. ವಿಕಲಚೇತರ ಆರೋಗ್ಯ ಸಮಸ್ಯೆ, ಯೋಗಕ್ಷೇಮ, ಭಾವನಾತ್ಮಕ ಸಂಗತಿಗಳ ಬಗ್ಗೆ ಸಹ ಇಲ್ಲಿ ಚರ್ಚಿಸಲಾಗುವುದು. ಇಂತಹ ವ್ಯಕ್ತಿಗಳಿಗೆ ಸಮಾನ ಹಕ್ಕುಗಳನ್ನು ಉತ್ತೇಜಿಸಲು ಮತ್ತು ಸುಸ್ಥಿರ ಅವಕಾಶಗಳನ್ನು ಸೃಷ್ಟಿಸಲು ಒಂದು ಕಾರ್ಯತಂತ್ರದ ಉಪಕ್ರಮ ರೂಪಿಸಲಾಗುವುದು ಎಂದರು
ಇಲ್ಲಿ ವಿಶೇಷಚೇತನರು ತಮ್ಮ ಪ್ರತಿಭೆ ಹಾಗೂ ಕೌಶಲ್ಯವನ್ನು ಪ್ರದರ್ಶಿಸಬಹುದಾಗಿದೆ. ನಮ್ಮ ರಾಜ್ಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ವಿಶೇಷಚೇತನರು ಮುಖ್ಯವಾಹಿನಿಗೆ ಬರುವಂತಹ ಅವಕಾಶಗಳು ಹೆಚ್ಚಾಗಿ ಸಿಗುತ್ತದೆ. ವಿವಿಧ ಇಲಾಖೆಯ ಸ್ವಯಂ ಸೇವಾ ಸಂಸ್ಥೆಗಳು, ಇದರಲ್ಲಿ ಭಾಗವಹಿಸುತ್ತಿರುವುದರಿಂದ ಇಲ್ಲಿ ಹಬ್ಬದ ವಾತಾವರಣ ಏರ್ಪಡುತ್ತದೆ. ಕಾರ್ಯಕ್ರಮದಲ್ಲಿ ಹೆಚ್ಚು ವಿಕಲಚೇತನರು ಭಾಗವಹಿಸಲು ಅವರು ಕರೆ ನೀಡಿದರು.
ಸಭೆಯಲ್ಲಿ 100 ಕ್ಕೂ ಹೆಚ್ಚು ವಿವಿಧ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳ ಭಾಗವಹಿಸಿ ವಿಚಾರ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಬೃಹತ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತರಾದ ವಿಕಾಸ್ ಸೂರಳ್ಕರ್ ಕಿಶೋರ್, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ನಿರ್ದೇಶಕರಾದ ರಾಘವೇಂದ್ರ ಟಿ ಉಪಸ್ಥಿತರಿದ್ದರು.