ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ Infosys Springboard ಸಿ.ಎಸ್.ಆರ್. ಕಾರ್ಯಕ್ರಮದಡಿ ಪತ್ರಕರ್ತರ ತರಬೇತಿಗೆ ಅರ್ಜಿ ಆಹ್ವಾನ

varthajala
0

 ಬೆಂಗಳೂರು, ಸೆಪ್ಟೆಂಬರ್ 17, (ಕರ್ನಾಟಕ ವಾರ್ತೆ): ಕರ್ನಾಟಕ ಮಾಧ್ಯಮ ಅಕಾಡೆಮಿಯು Infosys Springboard  ಸಿ.ಎಸ್.ಆರ್. ಕಾರ್ಯಕ್ರಮದಡಿ ಪತ್ರಕರ್ತರ ತರಬೇತಿಗೆ ಅರ್ಜಿ ಆಹ್ವಾನಿಸಿದೆ.


ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕನಿಷ್ಠ 5 ವರ್ಷ ಸೇವಾನುಭವ ಹೊಂದಿರುವ ಪತ್ರಕರ್ತರು ಅರ್ಜಿ ಸಲ್ಲಿಸಬಹುದು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪರಿಗಣಿಸಿರುವ ರಾಜ್ಯಮಟ್ಟದ ಪತ್ರಿಕೆಗಳು ಹಾಗೂ ಇಲಾಖೆಯಡಿ ನೋಂದಾಯಿತ ಉಪಗ್ರಹ ಸುದ್ದಿ ವಾಹಿನಿಗಳ ಸಂಪಾದಕರು ಶಿಫಾರಸು ಮಾಡುವ ಪತ್ರಕರ್ತರನ್ನು ತರಬೇತಿಗೆ ಪರಿಗಣಿಸಲಾಗುವುದು. ಈ ಕುರಿತು ಸಂಪಾದಕರನ್ನು ನೇರವಾಗಿ ಸಂಪರ್ಕಿಸಲಾಗುವುದು.

ಆಸಕ್ತ ಪತ್ರಕರ್ತರು ಗೂಗಲ್ ಫಾರ್ಮ್ https://forms.gle/q9NUnsQ7M5xrsruj9 ನಲ್ಲಿ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುವ ಮೂಲಕ ತರಬೇತಿಗೆ ನೋಂದಾಯಿಸಬಹುದಾಗಿದೆ.

ಅರ್ಜಿ ನಮೂನೆಯಲ್ಲಿ ಸೂಚಿಸಿರುವಂತೆ ಪತ್ರಕರ್ತರು ಭಾವಚಿತ್ರ, ವಯಸ್ಸಿನ ದಾಖಲೆ, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರ ದೃಢೀಕರಣ, ಸದರಿ ಮಾಧ್ಯಮ ಸಂಸ್ಥೆಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಕುರಿತ ದಾಖಲೆ ಹಾಗೂ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರುವ ಕುರಿತು ಸೇವಾನುಭವ ದಾಖಲೆಗಳನ್ನು ಸಲ್ಲಿಸಬೇಕು.

ಇದು ಮೂರು ದಿನಗಳ ವಸತಿಯುತ ತರಬೇತಿಯಾಗಿದ್ದು, ಪತ್ರಕರ್ತರಿಗೆ ಪ್ರಯಾಣ ಭತ್ಯೆ ನೀಡಲಾಗುವುದು. ಇನ್‍ಫೋಸಿಸ್ ಸಂಸ್ಥೆಯ ನಿಗದಿತ ಕ್ಯಾಂಪಸ್‍ಗಳಲ್ಲಿ ತರಬೇತಿ ನಡೆಯಲಿದೆ.

ಈ ತರಬೇತಿ ಕಾರ್ಯಕ್ರಮದಲ್ಲಿ ಡಿಜಿಟಲ್ ಮಾಧ್ಯಮ, ಎಐ ಬಳಕೆ ಹಾಗೂ ಸಾಫ್ಟ್ ಸ್ಕಿಲ್ ಅಭಿವೃದ್ಧಿ ತರಬೇತಿ ನೀಡಲಾಗುವುದು.

ಪ್ರಸಕ್ತ ಸಾಲಿನಲ್ಲಿ ಒಟ್ಟು ಮೂರು ತಂಡಗಳಲ್ಲಿ ತರಬೇತಿ ನಡೆಯಲಿದ್ದು, ಒಂದು ತಂಡದಲ್ಲಿ ಮಹಿಳಾ ಆಯವ್ಯಯದಡಿ ಪತ್ರಕರ್ತೆಯರಿಗಾಗಿ ತರಬೇತಿ ನಡೆಯಲಿದೆ.

ಎಲ್ಲ ಮೂರು ತಂಡಗಳಿಗೂ ಈ ಒಂದು ಬಾರಿ ಮಾತ್ರ ಅರ್ಜಿ ಆಹ್ವಾನಿಸಲಾಗುತ್ತಿದೆ. ತರಬೇತಿಯ ಸ್ಥಳ ಮತ್ತು ದಿನಾಂಕವನ್ನು ನಂತರ ತಿಳಿಸಲಾಗುವುದು. ತರಬೇತಿಗೆ ಪತ್ರಕರ್ತರ ಆಯ್ಕೆ ಕುರಿತ ಅಂತಿಮ ನಿರ್ಧಾರ ಅಕಾಡೆಮಿಯದ್ದೇ ಆಗಿರುತ್ತದೆ.

ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 26, 2025 ಕೊನೆಯ ದಿನವಾಗಿದೆ.

Post a Comment

0Comments

Post a Comment (0)