ಬೆಂಗಳೂರು, ಸೆಪ್ಟೆಂಬರ್ 17 (ಕರ್ನಾಟಕ ವಾರ್ತೆ): ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಂಡ ಹಿನ್ನಲೆಯಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ಆಗಿದ್ದ ವ್ಯತ್ಯಯವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿರ್ದೇಶನದಂತೆ ಒಂದು ದಿನ ಮುಂಚಿತವಾಗಿಯೇ ಸರಿಪಡಿಸಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆಯನ್ನು ನೀಡಿರುವ ಅವರು, ಬೃಹತ್ ಬೆಂಗಳೂರು ನಗರದ ಜನತೆಗೆ ಯಾವುದೇ ಅಡೆತಡೆಯಿಲ್ಲದೇ ಕುಡಿಯುವ ನೀರನ್ನು ಸರಬರಾಜು ಮಾಡಲು, ಕಾವೇರಿ ನೀರು ಸರಬರಾಜು ಯೋಜನೆಯ ಜಲರೇಚಕ ಯಂತ್ರಗಾರಗಳು ಮತ್ತು ಮುಖ್ಯ ಕೊಳವೆ ಮಾರ್ಗಗಳ ಸುಲಲಿತ ಚಾಲನೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸುಸ್ಥಿತಿಯಲ್ಲಿಡುವ ಉದ್ದೇಶದಿಂದ ಜಲಮಂಡಳಿಯ ವಿವಿಧೆಡೆ ನಿಯಮಿತ ತುರ್ತು ನಿರ್ವಹಣೆಯ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಇದಕ್ಕಾಗಿ ಮೂರು ದಿನಗಳು ಅಂದರೆ, ಸೆ.15, 16 ಮತ್ತು 17 ರಂದು ಕುಡಿಯುವ ನೀರಿನಲ್ಲಿ ವ್ಯತ್ಯಯವಾಗುವ ಬಗ್ಗೆ ಜಲಮಂಡಳಿ ಈಗಾಗಲೇ ಸಾರ್ವಜನಿಕರಿಗೆ ಮಾಹಿತಿ ನೀಡಿತ್ತು.
ಮೂರು ದಿನಗಳ ಕಾಲ ಕಾವೇರಿ ನೀರಿನ ಸರಬರಾಜು ಇಲ್ಲದೇ ಸಾರ್ವಜನಿಕರು ತೊಂದರೆಗೀಡಾಗುವ ಸಾಧ್ಯತೆಯನ್ನು ಮನಗೊಂಡ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದರು. ಈ ಸೂಚನೆಯ ಹಿನ್ನಲೆಯಲ್ಲಿ ಹಗಲು ರಾತ್ರಿ ಪಾಳಿಗಳಲ್ಲಿ ಕಾರ್ಯನಿರ್ವಹಿಸಲು ಯೋಜನೆ ರೂಪಿಸಲಾಯಿತು. ಇದಕ್ಕೆ ಅಗತ್ಯವಿರುವಂತಹ ಕಾರ್ಮಿಕರನ್ನು ಬೇರೆ ರಾಜ್ಯಗಳಿಂದ ಕರೆಸಿಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಲಾಯಿತು. ಈ ಎಲ್ಲಾ ಪ್ರಯತ್ನಗಳ ಫಲವಾಗಿ ಮೂರು ದಿನಗಳ ಕಾಲ ನಿಗದಿಯಾಗಿದ್ದ ಕಾರ್ಯವನ್ನು ಎರಡು ದಿನಗಳಲ್ಲಿ ಮುಗಿಸಿ ಇಂದು ಬೆಳಿಗ್ಗೆಯಿಂದ ನಗರದ ಎಲ್ಲಾ ಭಾಗಗಳಿಗೂ ನೀರು ಸರಬರಾಜು ಪ್ರಕ್ರಿಯೆಯನ್ನು ಪುನರಾರಂಭಿಸಲಾಗಿದೆ. ಈ ಕಾಮಗಾರಿಯನ್ನು ಕೈಗೊಳ್ಳುವಲ್ಲಿ ಸಹಕರಿಸಿದ ಜಲಮಂಡಳಿ ಸಿಬ್ಬಂದಿಗಳು, ಗುತ್ತಿಗೆದಾರರು ಹಾಗೂ ಕಾರ್ಮಿಕರು ಸೇರಿದಂತೆ ಕಾಮಗಾರಿಯನ್ನು ಸಮರ್ಪಕವಾಗಿ ಪೂರ್ಣಗೊಳಿಸಲು ಸಲಹೆ ನೀಡಿದ ಉಪಮುಖ್ಯಮಂತ್ರಿಗಳಿಗೆ ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ಧನ್ಯವಾದಗಳನ್ನು ತಿಳಿಸಿದ್ದಾರೆ.