ಬೆಂಗಳೂರು, ಅಕ್ಟೋಬರ್ 28, (ಕರ್ನಾಟಕ ವಾರ್ತೆ): ನೂರು ಕಾನೂನುಗಳಿಗೆ ಕಾನೂನು ಕ್ಷೇತ್ರದ ಹಲವಾರು ತಜ್ಞರು ತಮ್ಮ ಅಭಿಮತವನ್ನು ಮಂಡಿಸಿದ್ದು, ಆ ಎಲ್ಲಾ ಅಭಿಮತಗಳನ್ನು ಒಳಗೊಂಡ ‘ನೂರು ಕಾನೂನು - ನೂರು ಅಭಿಮತಗಳು’ ಮೂರು ಸಂಪುಟಗಳ ಲೋಕಾರ್ಪಣೆ ಮಾಡುವ ಕಾರ್ಯಕ್ರಮವನ್ನು ಅಕ್ಟೋಬರ್ 30 ರಂದು ಸಂಜೆ 4.00 ಗಂಟೆಗೆ ಬೆಂಗಳೂರಿನ ವಿಕಾಸಸೌಧದ ಕೊಠಡಿ ಸಂಖ್ಯೆ 419 ರಲ್ಲಿ ಆಯೋಜಿಸಲಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.
ಇದೇ ಮಾದರಿಯಲ್ಲಿ ಕಾನೂನು ಸಚಿವರ ನಿರ್ದೇಶನದಂತೆ ಕಾನೂನು ಕ್ಷೇತ್ರದ ತಜ್ಞರನ್ನೊಳಗೊಂಡ 10 ಸಂಶೋಧಕರ ತಂಡವನ್ನು ರಚಿಸಿ, ಅವರ ಸಂಶೋಧನೆಯ ಮೂಲಕ ಸೂಕ್ತ ಕಾನೂನಿನ ಕೊರತೆ ಇರುವ ಕ್ಷೇತ್ರಗಳನ್ನು ಗುರುತಿಸಿ, ಆ ಕ್ಷೇತ್ರಗಳಿಗೆ ಅಗತ್ಯವೆನಿಸಿದ 105 ಮಾದರಿ ಕರಡು ಮಸೂದೆಗಳನ್ನು (105 Draft Model Bills) ಸಿದ್ಧಪಡಿಸಲಾಗಿದ್ದು, ಅವುಗಳನ್ನೂ ಸಹ ಇದೇ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು.
ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಕರ್ನಾಟಕ ವಿಧಾನ ಸಭೆಯ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸಚಿವರು, ಶಾಸಕರುಗಳು, ವಿಧಾನಪರಿಷತ್ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.
ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ಕಾನೂನು ಸಚಿವರಾದ ಎಚ್.ಕೆ. ಪಾಟೀಲರವರ ದೂರದರ್ಶಿತ್ವದ ಫಲವಾಗಿ 2005ರಿಂದ ಕಾನೂನು ಮತ್ತು ಸಂಸದೀಯ ಪದ್ಧತಿಗಳ ವಿಷಯದಲ್ಲಿ ಸುಧಾರಣೆ ತರುವ ಸಲುವಾಗಿ ಕರ್ನಾಟಕ ರಾಜ್ಯ ಸರ್ಕಾರದ ನವ ಪ್ರಯೋಗವಾಗಿ ಕಾನೂನು ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಮಾಜದ ಎಲ್ಲಾ ವರ್ಗಗಳ ಅಭ್ಯುದಯಕ್ಕೆ ಅವಶ್ಯಕವಾಗುವ ಹೊಸ ಕಾನೂನುಗಳ ರಚನೆಗೆ ಸಲಹೆ ನೀಡುವುದು ಹಳೆಯ ಅನುಪಯುಕ್ತ ಕಾನೂನುಗಳನ್ನು ನಿರಸನಗೊಳಿಸಲು ಶಿಫಾರಸ್ಸು ಮಾಡುವ ಹಾಗೂ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಕಾನೂನುಗಳನ್ನು ಕಾಲದಿಂದ ಕಾಲಕ್ಕೆ ಪರಾಮರ್ಶೆ ಮಾಡಿ ತಿದ್ದುಪಡಿಗೆ ಸಲಹೆ ಮಾಡುವ ಮೂಲಕ ಕಾನೂನು ಮತ್ತು ಸಂಸದೀಯ ವಿಚಾರಗಳಲ್ಲಿ ಸಕಾಲಿಕ ಸುಧಾರಣೆಗಳನ್ನು ರೂಢಿಸುವ ಉದ್ದೇಶದಿಂದ ರೂಪುಗೊಂಡು ಸ್ಥಾಪಿತವಾದ ಸರ್ಕಾರದ ಒಂದು ಸ್ವಾಯತ್ತ ಸಂಸ್ಥೆಯಾಗಿದೆ.
ಜಾರಿಯಲ್ಲಿರುವ ಕಾನೂನುಗಳ ಬಗ್ಗೆ ಜನ ಸಾಮಾನ್ಯರಿಗೆ ಅರಿವು ಮೂಡಿಸುವುದು. ಸಂಸದೀಯ ನಡವಳಿಕೆಯ ಶಿಕ್ಷಣವನ್ನು ನಾಡಿನ ಕಾನೂನು ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ನೀಡುವ ಹಾಗೂ ಸಂಶೋಧನಾ ಕೃತಿಗಳನ್ನು ಪ್ರಕಟಿಸುವುದು. ಈ ಸಂಸ್ಥೆಯ ಮುಖ್ಯ ಧ್ಯೇಯೋದ್ಧೇಶಗಳಲ್ಲಿ ಪ್ರಮುಖವಾಗಿವೆ.
ಪ್ರಸಕ್ತ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದ (21.05.2023 ರಿಂದ 20.05.2025ರವರೆಗಿನ) 2 ವರ್ಷಗಳ ಅವಧಿಯಲ್ಲಿ 100ಕ್ಕೂ ಹೆಚ್ಚು ಜನ ಸ್ನೇಹಿ ಹಾಗೂ ಸಮಾಜ ಮುಖಿಯಾದ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಹೀಗೆ ಜಾರಿಗೆ ತರಲಾದ 100 ಕಾನೂನುಗಳಿಗೆ ವಿವಿಧ ತಜ್ಞರ ಅಭಿಪ್ರಾಯ ಪಡೆದು ವಿಶ್ಲೇಷಣೆಯೊಂದಿಗೆ ಪ್ರಕಟಿಸುವಂತೆ ಕಾನೂನು, ನ್ಯಾಯ, ಮಾನವ ಹಕ್ಕುಗಳು ಹಾಗೂ ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಗೆ ನಿರ್ದೇಶಿಸಿರುತ್ತಾರೆ ಎಂದು ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.