ಬೆಂಗಳೂರು: ಭಾರತೀಯ ಸಂಸ್ಕೃತಿಯನ್ನು ಸಂಭ್ರಮಿಸುವ, ಭಾರತೀಯತೆಯ ಬಗ್ಗೆ ಜಾಗೃತಿ ಮೂಡಿಸುವ ಸಾಹಿತ್ಯ ಕೃತಿಗಳು ಕನ್ನಡದಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ರಚನೆಯಾಗಿವೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಶತಾಬ್ದಿ ಸಂಭ್ರಮದ ಹಿನ್ನೆಲೆಯಲ್ಲಿ ಇಂಥ ಮೌಲಿಕ ಕೃತಿಗಳ ಅವಲೋಕನ ಪ್ರಯತ್ನವೊಂದು 'ನೂರು ಹೆಜ್ಜೆ ನೂರಾರು ಮಾತು' ಕಾರ್ಯಕ್ರಮದಲ್ಲಿ ನಡೆಯಲಿದೆ. ಅಕ್ಟೋಬರ್ 26 ರ ಭಾನುವಾರ 'ದಿ ಮಿಥಿಕ್ ಸೊಸೈಟಿ' ಸಹಯೋಗದಲ್ಲಿ 'ಅಖಿಲ ಭಾರತೀಯ ಸಾಹಿತ್ಯ ಪರಿಷದ್' ಈ ಕಾರ್ಯಕ್ರಮವನ್ನು ಆಯೋಜಿಸಿದೆ.
ಕಾರ್ಯಕ್ರಮವನ್ನು ಬೆಳಿಗ್ಗೆ 10 ಗಂಟೆಗೆ ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್ ಉದ್ಘಾಟಿಸಲಿದ್ದಾರೆ. ಮಿಥಿಕ್ ಸೊಸೈಟಿಯ ಅಧ್ಯಕ್ಷ ವಿ.ನಾಗರಾಜ್, ಅಭಾಸಾಪ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ನರೂರ ವೇದಿಕೆಯಲ್ಲಿರುತ್ತಾರೆ.
'ಹಾಡಿನ ಜಾಡು' ಹೆಸರಿನ ಮೊದಲ ಗೋಷ್ಠಿಯಲ್ಲಿ ದೇಶಭಕ್ತಿಗೀತೆಗಳ ಕುರಿತು ಸಂವಾದ ನಡೆಯಲಿದೆ. ಚಿಂತಕ-ಲೇಖಕ ದಿವಾಕರ ಹೆಗಡೆ ಕೆರೆಹೊಂಡ, ವಿಕ್ರಮ ವಾರಪತ್ರಿಕೆಯ ಗೌರವ ಸಂಪಾದಕ ನ.ನಾಗರಾಜ, ಲೇಖಕಿ-ಕವಯತ್ರಿ ತನ್ಮಯೀ ಪ್ರೇಮಕುಮಾರ್ ಗೋಷ್ಠಿಯಲ್ಲಿ ಚರ್ಚಿಸಲಿದ್ದಾರೆ. 'ಒಂದಾಗಿ ಬನ್ನಿ' ಹೆಸರಿನ ಎರಡನೇ ಗೋಷ್ಠಿಯಲ್ಲಿ ಕನ್ನಡದಲ್ಲಿ ರಚನೆಯಾಗಿರುವ ಮಕ್ಕಳ ರಾಷ್ಟ್ರೀಯ ಸಾಹಿತ್ಯ ಕುರಿತು ಚರ್ಚೆ ನಡೆಯಲಿದೆ. ಕವಯತ್ರಿ ಶೀಲಾ ಅರಕಲಗೂಡು ಮತ್ತು ಲೇಖಕ ರೋಹಿತ್ ಚಕ್ರತೀರ್ಥ ಅವರು ಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 1:40 ಕ್ಕೆ ಖ್ಯಾತ ಸುಗಮ ಸಂಗೀತ ಗಾಯಕ ವಿದ್ವಾನ್ ಗಣೇಶ್ ದೇಸಾಯಿ ಮತ್ತು ಸಂಗಡಿಗರು ದೇಶಭಕ್ತಿಗೀತೆಗಳ ಗಾಯನ 'ಗಾನಮಾಲಾ' ನಡೆಸಿಕೊಡಲಿದ್ದಾರೆ. ಕನ್ನಡ ರಾಷ್ಟ್ರೀಯ ಸಾಹಿತ್ಯದ ಮೈಲುಗಲ್ಲುಗಳು ಎನಿಸಿದ ಕಾದಂಬರಿಗಳ ಅವಲೋಕನದ ಪ್ರಯತ್ನ ನಾಲ್ಕನೇ ಗೋಷ್ಠಿಯಲ್ಲಿ ನಡೆಯಲಿದೆ. ಚಾಣಕ್ಯ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ ನವೀನ ಗಂಗೋತ್ರಿ ಅವರು 'ಯುಗಾವತಾರ', ಪತ್ರಕರ್ತ ಡಿ.ಎಂ.ಘನಶ್ಯಾಮ ಅವರು 'ಆತ್ಮಾಹುತಿ' ಮತ್ತು ಕನ್ನಡ-ಸಂಸ್ಕೃತ ವಿದುಷಿ ಶಾಂತಾ ನಾಗಮಂಗಲ ಅವರು 'ಅಜೇಯ' ಕಾದಂಬರಿಗಳನ್ನು ಪರಿಚಯಿಸಲಿದ್ದಾರೆ. ಮೂರೂ ಕಾದಂಬರಿಗಳ ಮಹತ್ವದ ಕುರಿತು ಸಂಸ್ಕೃತಿ ಚಿಂತಕ ಡಾ ಜಿ.ಬಿ.ಹರೀಶ ಮಾತನಾಡಲಿದ್ದಾರೆ.
ಸಂಜೆ 4:45 ಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕವಯತ್ರಿ ಶಾರದಾ ವಿ.ಮೂರ್ತಿ, ಭಾರತ-ಭಾರತಿ ಪುಸ್ತಕ ಸಂಪದದ ಎರಡನೇ ಕಂತಿನ ಸಂಪಾದಕರಾದ ಚಿರಂಜೀವಿ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ದಿ. ಮಿಥಿಕ್ ಸೊಸೈಟಿ ಅಧ್ಯಕ್ಷರಾದ ವಿ. ನಾಗರಾಜ್, ಖ್ಯಾತ ಹಾಸ್ಯ ಬರಹಗಾರರು ಹಾಗೂ ಅಭಾಸಾಪ ಬೆಂಗಳೂರು ಮಹಾನಗರ ಅಧ್ಯಕ್ಷರಾದ ಎಂ.ಎಸ್.ನರಸಿಂಹಮೂರ್ತಿ ಉಪಸ್ಥಿತರಿರುತ್ತಾರೆ.