ಫಿಲಿಪೈನ್ಸ್ ಕೃಷಿ ವಿ.ವಿಗಳಿಗೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಭೇಟಿ

varthajala
0

ಮನಿಲಾ / ಬೆಂಗಳೂರು, ಅಕ್ಟೋಬರ್ 16, (ಕರ್ನಾಟಕ ವಾರ್ತೆ): ಕೃಷಿ ಸಂಶೋಧನೆಗಳ ಅಧ್ಯಯನಕ್ಕಾಗಿ ಅಧಿಕೃತ ಫಿಲಿಪೈನ್ಸ್ ಪ್ರವಾಸಕ್ಕೆ ತೆರಳಿರುವ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು ಅಲ್ಲಿನ ವಿವಿಧ ಕೃಷಿ ವಿವಿಗಳಿಗೂ ಭೇಟಿ ನೀಡಿ  ಪರಿಶೀಲನೆ ನಡೆಸುತ್ತಿದ್ದಾರೆ.

ಅಕ್ಟೋಬರ್ 15ರಂದು ಅಂತರಾಷ್ಟ್ರೀಯ ಭತ್ತ ಸಂಶೋಧನೆ ಕೇಂದ್ರಕ್ಕೆ ಭೇಟಿ ನೀಡಿದ್ದ ಸಚಿವರು ಇಂದು ರಾಜಧಾನಿ ಮನಿಲಾದ ಡಿ.ಎಲ್.ಎಸ್ .ಎ ಖಾಸಗಿ ಸಮಗ್ರ ಕೃಷಿ ವಿ.ವಿಗೆ ಭೇಟಿ ನೀಡಿ ಮಾಹಿತಿ ಪಡೆದರು.

ಅಲ್ಲಿನ ಕೃಷಿ ಯಾಂತ್ರೀಕರಣ, ರೈತರು ಹಾಗೂ ಕೃಷಿ ಆರ್ಥಿಕತೆ ಅಭಿವೃದ್ಧಿ ಮುನ್ನೋಟಗಳು, ಪಶು ಪಸಂಗೋಪನೆಯನ್ನೂ ಒಳಗೊಂಡಂತೆ ಕೃಷಿ,ಆಹಾರ ವಿಜ್ಞಾನ  ಅಧ್ಯಯನ ಭೋದನಾ ಕ್ರಮಗಳು, ಸಂಶೋಧನೆ, ಕ್ಷೇತ್ರ ಪ್ರಯೋಗಗಳ ಸ್ವರೂಪಗಳ ಬಗ್ಗೆ ಸಚಿವ ಎನ್ ಚಲುವರಾಯಸ್ವಾಮಿ  ಇಲ್ಲಿಯ ತಜ್ಜರು, ಅಧಿಕಾರಿಗಳಿಂದ ಮಾಹಿತಿ ಪಡೆದು ವಿಚಾರ ವಿನಿಮಯ ಮಾಡಿಕೊಂಡರು.



ಇದೇ ವೇಳೆ ರಾಜ್ಯದಲ್ಲಿ ಕೃಷಿ, ತೋಟಗಾರಿಕೆ ಹಾಗೂ ಪಶುಪಾಲನೆ ಕ್ಷೇತ್ರಗಳ ಸಂಶೋಧನೆಗೆ ಹೆಚ್ಚು ಆಧ್ಯತೆ ನೀಡುವ ಸಲುವಾಗಿ ಪ್ರತ್ಯೇಕ ಕೃಷಿ ವಿಶ್ವವಿದ್ಯಾಲಯಗಳ  ಸ್ಥಾಪನೆ ಮಾಡಿದ್ದು ಅದರಿಂದಾಗಿರುವ ಪರಿಣಾಮಗಳು, ಯೋಜಿತ ಸುಧಾರಣಾ ಚಿಂತನೆಗಳ ಬಗ್ಗೆ ಸಚಿವರು ಫಿಲಿಪೈನ್ಸ್ ನ ವಿಶ್ವವಿದ್ಯಾಲಯದ ತಜ್ಞರೊಂದಿಗೆ ಅಭಿಪ್ರಾಯ ಹಂಚಿಕೊಂಡರು.

ಇದೇ ವೇಳೆ ಕೃಷಿ ಕ್ಷೇತ್ರದ  ಸುಧಾರಣೆ, ಸಂಶೋಧನೆ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ವಿನಿಮಯಕ್ಕೆ ಉಬಯ ರಾಷ್ಟ್ರಗಳ ಪ್ರತಿನಿಧಿಗಳು ಒಮ್ಮತ ವ್ಯಕ್ತಪಡಿಸಿದರು.

ಡಿ.ಎಲ್.ಎಸ್.ಎ ವಿಶ್ವವಿದ್ಯಾಲಯದ  ಕುಲಪತಿ ಡಾ.ಮ್ಯಾರಿ ಅಲಿಷನ್, ಉಪ ಕುಲಪತಿ ಡಾ ಜನ್ನಿಫರ್ ರೇಯಸ್, ಉಪಾಧ್ಯಕ್ಷರಾದ ಕ್ರಿಸ್ಟೋಪರ್ ಪೆಲೊಂಕೋ, ಕಾರ್ಯಕ್ರಮ ಮುಖ್ಯಸ್ಥರಾದ ಎಲ್ಮರ್ ಮೊಂಟೆಬಾನ್, ಸಮನ್ವಯ ಮುಖ್ಯಸ್ಥರಾದ  ಮರಿಯಾ ರೊವೆನಾ ಟೆಸ್ಸರಿಯಾ ಅವರು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಅಲ್ಲಿನ ಕೃಷಿ ವಿ.ವಿಯ ಯೋಜನೆ, ಸಾಧನೆ, ಸ್ವರೂಪಗಳ ಪರಿಚಯ ಮಾಡಿಕೊಟ್ಟರು.


ಮಂಡ್ಯ ಕೃಷಿ ವಿ.ವಿ ವಿಶೇಷಧಿಕಾರಿ ಡಾ. ಕೆ.ಎಂ ಹರಿಣಿ ಕುಮಾರ್, ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ ಎ.ಬಿ.ಪಾಟೀಲ್ ರಾಜ್ಯದ ಕೃಷಿ ವಿ.ವಿಗಳ ಸ್ವರೂಪ ಕರ್ನಾಟಕ ರಾಜ್ಯದ ಕೃಷಿ ನೀತಿಗಳ ಬಗ್ಗೆ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟರು. ರಾಜ್ಯದ ಅಧ್ಯಯನ ತಂಡದೊಂದಿಗೆ ತೆರಳಿರುವ  ಡಾ.ವೇಣು ಪ್ರಸಾದ್, ಡಾ ಮಲ್ಲಿಕಾರ್ಜುನ ಸ್ವಾಮಿ, ವಿ.ಸಿ ಫಾರಂ ನ ಭತ್ತದ ತಳಿ ವಿಜ್ಞಾನಿ ಡಾ ದೀಪಕ್, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನಿ ಡಾ ಸುಜಯ್  ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನೇರ ವಿಮಾನ ಯಾನ ಪ್ರಯತ್ನ:
ಮನಿಲಾದಿಂದ ನೇರ ಬೆಂಗಳೂರಿಗೆ  ನೇರ ವಿಮಾನ ಸಂಪರ್ಕ ವ್ಯವಸ್ಥೆಯಿಂದ ಕೃಷಿ ಉತ್ಪನ್ನಗಳ ಆಮದು ರಫ್ತು ಸುಗಮವಾಗಲಿದ್ದು  ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳಿಗೆ ಕೋರಿ ಕೇಂದ್ರ ಸರ್ಕಾರ ವಿಮಾನಯಾನ  ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿ ತಮಗೂ ಪ್ರತಿ ಕಳಿಸಿಕೊಟ್ಟಲಿ ತಾವೂ ಕೇಂದ್ರಕ್ಕೆ ಮನವಿ ಸಲ್ಲಿಸುವುದಾಗಿ ಸಚಿವ ಎನ್.ಚಲುವರಾಯಸ್ವಾಮಿ  ಫಿಲಿಪೈನ್ಸ್ ನ ಭಾರತೀಯ ರಾಯಭಾರಿ ಕಚೇರಿ ಪ್ರತಿನಿಧಿ ಜೀವನ್ ಅವರಿಗೆ ತಿಳಿಸಿದರು.

Post a Comment

0Comments

Post a Comment (0)