ಬೆಂಗಳೂರು, ಅಕ್ಟೋಬರ್ 28 (ಕರ್ನಾಟಕ ವಾರ್ತೆ): ಬರೀ ಕ್ಯಾಪ್ ಬದಲಾವಣೆಯಾದರೆ ಸಾಲದು, ಇನ್ನೂ ಹೆಚ್ಚು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಸಿಬ್ಬಂದಿಗಳಿಗೆ ಕರೆ ನೀಡಿದರು.
ಅವರು ಇಂದು ಗೃಹ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಏರ್ಪಡಿಸಿದ್ದ ಪೆÇಲೀಸ್ ಸಿಬ್ಬಂದಿಗಳಿಗೆ ಪೀಕ್-ಕ್ಯಾಪ್ ಪರಿಚಯ ಮತ್ತು ವಿತರಣೆ ಮತ್ತು ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ ಹಾಗೂ ಸನ್ಮಿತ್ರ ಕೈಪಿಡಿಯನ್ನು ಬಿಡುಗಡೆ ಮಾಡಿ ಮಾತನಾಡುತ್ತಾ, ಸುಮಾರು ಎಪ್ಪತ್ತು ವರ್ಷಗಳಿಂದ ಧರಿಸುತ್ತಿದ್ದ ಕ್ಯಾಪ್‍ನಿಂದ ಹಲವಾರು ಸಮಸ್ಯೆಗಳಿರುವುದನ್ನು ಗೃಹ ಸಚಿವರು ತಿಳಿಸಿದ ಪರಿಣಾಮ ನಾನೇ ಈ ಹೊಸ ಪೀಕ್-ಕ್ಯಾಪ್ ಅನ್ನು ಆಯ್ಕೆ ಮಾಡಿದೆ. ಬಣ್ಣ ಬೇರೆ, ಆದರೆ ಹಿರಿಯ ಅಧಿಕಾರಿಗಳು ಧರಿಸುವ ಕ್ಯಾಪ್ ನಂತೆಯೇ ಇರುವ ಈ ಕ್ಯಾಪ್ ಅನ್ನು ಇನ್ನು ಮುಂದೆ ನೀವೆಲ್ಲರೂ ಧರಿಸಲಿದ್ದೀರಿ. ಇದು ನಿಮ್ಮಲ್ಲಿ ಇನ್ನೂ ಆತ್ಮಸ್ಥೈರ್ಯವನ್ನು ಹೆಚ್ಚು ಮಾಡುತ್ತದೆ ಎಂದರು.
ಪೆÇಲೀಸ್ ಕಾನ್ಸ್‍ಟೇಬಲ್‍ಗಳು ಬಳಸುತ್ತಿದ್ದ ಕ್ಯಾಪ್‍ಗೆ ಪರ್ಯಾಯವಾಗಿ ವಿನ್ಯಾಸ ಮಾಡಿರುವ ಈ ನೀಲಿ ಬಣ್ಣದ ನೂತನ ಪೀಕ್-ಕ್ಯಾಪ್ ನಿಂದ ನೀವೆಲ್ಲರೂ ತುಂಬಾ ಸುಂದರವಾಗಿ ಕಾಣುತ್ತಿರುವಿರಿ. ಈ ಬದಲಾವಣೆಯು ನಿಮಗೆ ಆತ್ಮಸ್ಥೈರ್ಯವನ್ನು ಹೆಚ್ಚು ಮಾಡಲಿದೆ. ನೀವುಗಳೆಲ್ಲರೂ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದೀರಿ, ಹಾಗೆಯೇ ಮುಂದೆ ಕೂಡ ಇನ್ನೂ ಹೆಚ್ಚು ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕೆಂದು ಹೇಳಿದರು.
ಇಂಡಿಯಾ ಜಸ್ಟೀಸ್‍ನಲ್ಲಿ ನಮ್ಮ ರಾಜ್ಯ ಗೃಹ ಇಲಾಖೆಯು ದೇಶದಲ್ಲೇ ಒಂದನೇ ಸ್ಥಾನದಲ್ಲಿರುವುದು ಅತ್ಯಂತ ಸಂತೋಷದ ವಿಚಾರ. ಇನ್ನು ನಮ್ಮ ರಾಜ್ಯವನ್ನು ಮಾದಕ ದ್ರವ್ಯ ಮುಕ್ತ ರಾಜ್ಯವನ್ನಾಗಿ ಮಾಡುವುದು ನಿಮ್ಮ ಕೈಯಲ್ಲಿದೆ. ನೀವು ಎಲ್ಲಾ ರೀತಿಯಿಂದಲೂ ಸಮರ್ಥರಿದ್ದೀರಿ, ಹಾಗಾಗಿ ಬೇರೆಯವರು ತನಿಖೆಗೆ ನಮ್ಮ ರಾಜ್ಯಕ್ಕೆ ಬರುವುದನ್ನು ತಡೆಯಬೇಕು. ಯಾವುದೇ ರೀತಿಯ ಅಪರಾಧವನ್ನು ಗ್ರಹಿಸುವ ಶಕ್ತಿ ಇರುವ ನೀವು ಯಾವುದೇ ಕಾರಣಕ್ಕೂ ಅಪರಾಧಗಳಾದಾಗ ಕಂಡು ಕಾಣದಂತೆ ಇರಬಾರದು. ಸಣ್ಣ ಪುಟ್ಟ ತಪ್ಪು ಮಾಡಿದ ಅಪರಾಧಿಗಳಿಗೆ ಶಿಕ್ಷೆಯನ್ನು ಕೊಡಿಸುವುದರಿಂದ ಅವರು ಇನ್ನೂ ದೊಡ್ಡ ಮಟ್ಟದಲ್ಲಿ ಅಪರಾಧಿಗಳಾಗಿ ಬೆಳೆಯುವುದನ್ನು ತಡೆಯಬಹುದು. ಹಾಗೆಯೇ ಅಪರಾಧಿಗಳೊಂದಿಗೆ ಯಾವುದೇ ರೀತಿಯ ಸಂಬಂಧವನ್ನು ಇಟ್ಟುಕೊಳ್ಳಬಾರದು ಎಂದು ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ ಒಂದು ಐತಿಹಾಸಿಕ ತೀರ್ಮಾನ ಮಾಡಿ, ಪೊಲೀಸ್ ಕಾನ್ಸ್‍ಟೇಬಲ್‍ಗಳಿಗೆ ನೂತನ ಕ್ಯಾಪ್ ಅನ್ನು ನೀಡುವ ಮೂಲಕ ಅವರಿಗೆ ದೊಡ್ಡ ಶಕ್ತಿಯನ್ನು ನೀಡಿರುವುದಕ್ಕೆ ಗೃಹ ಇಲಾಖೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಗಡಿಯಲ್ಲಿ ಸೈನಿಕ, ಗಡಿಯೊಳಗೆ ಆರಕ್ಷಕರು ನಮಗೆ ರಕ್ಷಣೆ ನೀಡುತ್ತಿದ್ದಾರೆ. ಮೊಬೈಲ್ ಫೋನ್‍ಗಳಿಂದಾಗಿ ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಇದನ್ನು ತಡೆಗಟ್ಟಲು ಪೊಲೀಸ್ ಇಲಾಖೆಯ ತಳ ಮಟ್ಟದ ಸಿಬ್ಬಂದಿಗಳು ಚುರಕಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಮನೆಗಳಲ್ಲಿ ನಡೆಯುತ್ತಿರುವ ಕಳ್ಳತನಗಳನ್ನು ತಡೆಗಟ್ಟಲು ಪ್ರತಿ ಮನೆಯವರೂ ಇರಿಸಿಕೊಳ್ಳುವ ಮನೆಕೆಲಸದವರು, ವಾಹನ ಚಾಲಕರು, ಅಡುಗೆ ಕೆಲಸದವರು, ವಾಚ್ ಮನ್ ಮುಂತಾದವರ ಮಾಹಿತಿಯನ್ನು ಆಯಾ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸಲ್ಲಿಸುವಂತಹ ವ್ಯವಸ್ಥೆ ಬಗ್ಗೆ ಜಾಗೃತಿ ಮೂಡಿಸಬೇಕು. ಈ ವಿಧಾನವನ್ನು ಈಗಾಗಲೇ ದೆಹಲಿ ಪೆÇಲೀಸರು ಅಳವಡಿಸಿಕೊಂಡಿದ್ದಾರೆ. ಇಲಾಖೆಗೆ ಹೊಸ ರೂಪುರೇಶೆಗಳನ್ನು ನೀಡುತ್ತಿರುವ ಸಚಿವರು ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸುವುದು ಸೂಕ್ತವೆಂದು ತಿಳಿಸಿದರು.
ಕಾರ್ಯಕ್ರಮದ ಮೊದಲಿಗೆ ಇಲಾಖೆಯ ಪ್ರಗತಿಯ ಪರಿಚಯ ಮಾಡಿಕೊಟ್ಟ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ನಾನು ಈ ಹಿಂದೆ 2015 ರಲ್ಲಿ ಗೃಹ ಖಾತೆಯನ್ನು ಹೊಂದಿದ್ದಾಗಲೇ ಕಾನ್ಸ್‍ಟೇಬಲ್‍ಗಳ ಕ್ಯಾಪ್ ಬದಲಾವಣೆ ಮಾಡಬೇಕೆಂಬ ಬೇಡಿಕೆ ಬಂದಿತ್ತು. ಮಳೆ ಸಂದರ್ಭಗಳಲ್ಲಿ ಹೆಚ್ಚು ತೂಕವಾಗುವ ಜೊತೆಗೆ ತಲೆಗೆ ರಕ್ಷಣೆ ದೊರೆಯದ ಹಳೆಯ ಕ್ಯಾಪ್ ಅನ್ನು ಬದಲಿಸುವ ಮೂಲಕ ಆಧುನಿಕ ಕಾಲಕ್ಕೆ ತಕ್ಕಂತೆ ನೂತನ ಕ್ಯಾಪ್ ಒದಗಿಸಲಾಗಿದೆ ಎಂದರು.
ಅಧಿಕಾರಿಗಳ ಮತ್ತು ಪೊಲೀಸ್ ಸಿಬ್ಬಂದಿಗಳ ಕ್ಯಾಪ್ ಒಂದೇ ರೀತಿಯಾಗಿರುವುದರಿಂದ ಸಿಬ್ಬಂದಿಗಳಿಗೆ ಆತ್ಮಸ್ಥೈರ್ಯ ಹೆಚ್ಚಲಿದೆ ಎಂದರು. ಸರ್ಕಾರ ಬಂದು ಎರಡುವರೆ ವರ್ಷಗಳಾಗಿದ್ದು, ಇದುವರೆಗೆ ರಾಜ್ಯದಲ್ಲಿ ಯಾವುದೇ ರೀತಿಯ ಕೋಮು ಗಲಭೆಗಳಾಗಲಿ, ಕಾನೂನು ಸುವ್ಯವಸ್ಥೆ ಹದಗೆಡುವಂತಹ ಅಹಿತಕರ ಘಟನೆಗಳು ನಡೆದಿಲ್ಲ. ಅದಕ್ಕೆ ನಮ್ಮ ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳ ದಕ್ಷ ಆಡಳಿತವೆ ಕಾರಣ ಎಂದರು.
ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಡ್ರಗ್ಸ್ ಸಮಸ್ಯೆಯನ್ನು ಕೊನೆಗಾಣಿಸಲು ಕರ್ನಾಟಕ ರಾಜ್ಯದ ಪ್ರಮುಖ ಅಂಗಸಂಸ್ಥೆಯ ರೂಪದಲ್ಲಿ ರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಲು ರಚಿಸಲಾಗಿರುವ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಯನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದರು. ಹಾಗೆಯೇ ಮಾದಕ ದ್ರವ್ಯ ವ್ಯಸನಿಗಳನ್ನು ಮಾದಕ ದ್ರವ್ಯದಿಂದ ಹೊರತರುವ ಸಲುವಾಗಿ ಅವರ ಮೇಲೆ ನಿಗಾವಹಿಸಲು ಯೋಜಿಸಲಾಗಿರುವ ಸನ್ಮಿತ್ರ ಕಾರ್ಯಕ್ರಮ, ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಸೇವೆಯಲ್ಲಿದ್ದಾಗ ಮರಣ ಹೊಂದಿದಲ್ಲಿ ನೀಡುವ ಪರಿಹಾರ ಹಾಗೂ ಅವರಿಗೆ ಒದಗಿಸಲಾಗಿರುವ ಆರೋಗ್ಯ ಭಾಗ್ಯ ಯೋಜನೆಗಳ ಕೈಪಿಡಿಗಳನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹಮದ್, ಶಾಸಕರಾದ ರಿಜ್ವಾನ್ ಅರ್ಷದ್, ವಿಧಾನಸಭೆ ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ ಸರ್ಕಾರದ ಮುಖ್ಯಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರಾದ ಡಾ. ಎ.ಎಂ. ಸಲೀಂ, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ತುμÁರ್ ಗಿರಿನಾಥ್, ಪೊಲೀಸ್ ಮಹಾ ನಿರ್ದೇಶಕರುಗಳಾದ ರಾಮಚಂದ್ರ ರಾವ್, ಪ್ರಣಬ್ ಮೊಹಂತಿ ಹಾಗೂ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.