ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವನ್ನಪ್ಪುತ್ತಿರುವ ಘಟನೆ ಉತ್ತರ ರಾಜ್ಯಗಳಲ್ಲಿ ವರದಿಯಾಗುತ್ತಿದೆ. ಈ ಕುರಿತು ಪೋಷಕರಿಗೆ ಎಚ್ಚರಿಕೆಯನ್ನು ಬೆಂಗಳೂರಿನ ವಾಸವಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ವರ್ಷಿಣಿ ಪಿ ನೀಡಿದ್ದಾರೆ.
ಮಕ್ಕಳಲ್ಲಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಾಗ ನಿರ್ಲಕ್ಷಿಸದೆ, ಮನೆ ಮದ್ದುಗಳ ಮೊರೆ ಹೋಗದೆ ಅಥವಾ ಯಾವುದೇ ಮಾಹಿತಿ ಇಲ್ಲದೆ ಮೆಡಿಕಲ್ ಶಾಪ್‌ನಲ್ಲಿ ಸಿಗುವ ಕೆಮ್ಮಿನ ಸಿರಪ್ ಅಥವಾ ಯಾವುದೇ ಔಷಧಿಗಳನ್ನು ಖರೀದಿಸಬೇಡಿ. ವೈದ್ಯರ ಸಲಹೆಯಿಲ್ಲದೆ ಯಾವುದೇ ರೀತಿಯ ಔಷಧಿಯನ್ನು ಮಕ್ಕಳಿಗೆ ನೀಡುವುದು ಸೂಕ್ತವಲ್ಲ. ಪ್ರತಿಯೊಂದು ಮಗುವಿನ ವಯಸ್ಸು, ತೂಕ, ಆರೋಗ್ಯ ಸ್ಥಿತಿಯನ್ನು ಆಧರಿಸಿ ಮತ್ತು ಮಕ್ಕಳ ರೋಗಲಕ್ಷಣಗಳನ್ನು ಆಧರಿಸಿ ವೈದ್ಯರು ಚಿಕಿತ್ಸೆಯನ್ನು ನೀಡುತ್ತಿರುತ್ತಾರೆ. ಹೀಗಾಗಿ ವೈದ್ಯರ ಸಲಹೆ ಇಲ್ಲದೆ ತೆಗೆದುಕೊಳ್ಳುವ ಔಷಧಿಗಳು ಮಕ್ಕಳ ಮೇಲೆ ಎಷ್ಟು ಪರಿಣಾಮ ಬೀರಬಹುದು ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಒಂದು ಸಣ್ಣ ತಪ್ಪು ಮಗುವಿನ ಮೇಲೆ ದೊಡ್ಡ ಮಟ್ಟದ ಪರಿಣಾಮವನ್ನು ಬೀರಬಹುದು.
ಎಲ್ಲಾ ರೀತಿಯ ಔಷಧಿಗಳು ಎಲ್ಲಾ ಮಕ್ಕಳಿಗೂ ಸೂಕ್ತವಾಗುವುದಿಲ್ಲ. ಕೆಲವು ಔಷಧಿಗಳ ಸೇವನೆಯಿಂದ ಜಠರಗರುಳಿನ ಸಮಸ್ಯೆ, ದದ್ದು ಅಥವಾ ಉಸಿರಾಟದ ಸಮಸ್ಯೆಯನ್ನು ಉಂಟುಮಾಡಬಹುದು. ಆದ್ದರಿಂದ ಮಕ್ಕಳ ಸ್ಥಿತಿಯನ್ನು ಸಮಾಲೋಚನೆ ನಡೆಸಿ ಪ್ರಿಸ್ಕ್ರಿಪ್ಷನ್ ನೀಡಲಾಗುತ್ತದೆ. ಮೆಡಿಕಲ್ ಶಾಪ್‌ಗಳಿಗೆ ಹೋಗಿ ಆಂಟಿಬಯೋಟಿಕ್ ಔಷಧಿಗಳನ್ನು ತೆಗೆದುಕೊಳ್ಳುವ ಅಭ್ಯಾಸ ಬಹುತೇಕರಿಗಿದೆ. ಆದ್ರೆ ಆಂಟಿಬಯೋಟಿಕ್‌ಗಳ ಅತಿಯಾದ ಬಳಕೆಯಿಂದ ಔಷಧ ನಿರೋಧಕತೆ ಹೆಚ್ಚಾಗುತ್ತದೆ. ಪ್ರಿಸ್ಕ್ರಿಪ್ಷನ್ ಇಲ್ಲದೆ ಆಂಟಿಬಯಾಟಿಕ್‌ಗಳನ್ನು ಬಳಸುವುದು ಮತ್ತು ಕೋರ್ಸ್ ಅನ್ನು ಪೂರ್ಣಗೊಳಿಸದಿರುವುದು ಸೂಕ್ಷ್ಮಾಣುಗಳನ್ನು ನಿರೋಧಕವನ್ನಾಗಿಸಬಹುದು. ನಿಜವಾಗಿಯೂ ಅಗತ್ಯವಿದ್ದಾಗ ಆಂಟಿಬಯಾಟಿಕ್‌ಗಳು ಕೆಲಸ ಮಾಡದಿರಲೂಬಹುದು. ಇದರ ಜೊತೆಗೆ ಮುಖ್ಯವಾಗಿ ನೆನಪಿನಲ್ಲಿಡಬೇಕಾದ ಅಂಶವೆಂದರೆ ವಯಸ್ಕರು ಬಳಸುವ ಆಸ್ಪಿರಿನ್ ಮತ್ತು ಕೆಮ್ಮಿನ ಸಿರಪ್‌ನಂತಹ ಕೆಲವು ಔಷಧಿಗಳು ಮಕ್ಕಳಿಗೆ ವಿಷಕಾರಿಯಾಗಬಹುದು ಮತ್ತು ಜೀವಕ್ಕೆ ಅಪಾಯಕಾರಿ ಕೂಡ. ಹಾಗಾಗಿ ಮೊದಲು ಪೋಷಕರು ಈ ಸಂಗತಿಯನ್ನು ಅರ್ಥಮಾಡಿಕೊಳ್ಳಬೇಕು ನಂತರ ಮಗುವಿನ ಕಾಳಜಿವಹಿಸುವುದು ಉತ್ತಮ ಎನ್ನುತ್ತಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ವರ್ಷಿಣಿ ಪಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 6364466240, 6364409651