NMC ಮಾನದಂಡಗಳ ಪ್ರಕಾರ ಪದವಿಪೂರ್ವ ವೈದ್ಯಕೀಯ ಶಿಕ್ಷಣದ ಪಠ್ಯಕ್ರಮದಲ್ಲಿ ಉಪಶಾಮಕ ಆರೈಕೆಯನ್ನು
ಪರಿಣಾಮಕಾರಿಗೊಳಿಸಲು RGUHS ನಿರ್ಧಾರ
ವಿಶ್ವ ವಿಶ್ರಾಂತಿ, ಪ್ರಶಾಮಕ ಆರೈಕೆ ದಿನದ ಅಂಗವಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತೊಂದು ಮಹತ್ವದ ನಿರ್ಣಯ ಕೈಗೊಂಡಿದೆ.
ಕರ್ನಾಟಕದ ಎಲ್ಲಾ ಪದವಿಪೂರ್ವ ವೈದ್ಯಕೀಯ ಶಿಕ್ಷಣದ ಪಠ್ಯಕ್ರಮದಲ್ಲಿ ಉಪಶಾಮಕ ಆರೈಕೆಯನ್ನು ಪರಿಣಾಮಕಾರಿಯಾಗಿ ಮತ್ತು ಅರ್ಥಪೂರ್ಣವಾಗಿ ಜಾರಿಗೆ ತರಲು ತನ್ನ ಎಲ್ಲಾ ಕಾಲೇಜುಗಳಿಗೆ ಸೂಚನೆ ನೀಡಿದೆ.
ಪ್ಯಾಲಿಯಂ ಇಂಡಿಯಾದ ಸಹಭಾಗಿತ್ವದಲ್ಲಿ CBME ಮತ್ತು AETCOM ಮಾಡ್ಯೂಲ್ಗಳನ್ನು ಒಳಗೊಂಡಂತೆ ರಚನಾತ್ಮಕ ಪ್ಯಾಲಿಯೇಟಿವ್ ಕೇರ್ ತರಬೇತಿಯನ್ನು ವೈದ್ಯಕೀಯ ಪಠ್ಯಕ್ರಮದಲ್ಲಿ ಅಳವಡಿಸಿದ ದೇಶದ ಮೊದಲ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಈ ವಿಶ್ವವಿದ್ಯಾಲಯ ಪಾತ್ರವಾಗಿದೆ.
ಕಾರ್ಯಕ್ರಮವು ನೋವು ನಿರ್ವಹಣೆ, ಜೀವನದ ಕೊನೇಕಾಲದ ಆರೈಕೆ, ಮಾನಸಿಕ ಹಾಗೂ ಸಾಮಾಜಿಕ ಬೆಂಬಲ ಮತ್ತು ರೋಗಿ-ಕೇಂದ್ರಿತ ಸಂವಹನದಲ್ಲಿ ಗಮನಾರ್ಹ ಬದಲಾವಣೆ ತರಲು ಉದ್ದೇಶಿಸಲಾಗಿದೆ. ಪ್ರಸ್ತುತ ಈ ಆರೈಕೆಯ ತುರ್ತು ಅಗತ್ಯವನ್ನು ಮನಗಂಡು, ನಾಳಿನ ವೈದ್ಯರಿಗೆ ಅದರ ಮಹತ್ವವನ್ನು ತಿಳಿಸುವ ಜೊತೆಗೆ ಆರೈಕೆಯ ಭಾಗವಾಗುವ ಮಾನಸಿಕ ಸಿದ್ಧತೆಯನ್ನು ತುಂಬಲು ಮತ್ತು ಪ್ರಶಾಮಕ ಆರೈಕೆಯ ಮಾನದಂಡಗಳನ್ನು ಕಲಿಸಲು ಮತ್ತು ಪ್ರೇರೇಪಿಸಲು ಅನುವು ಮಾಡಿಕೊಡುತ್ತದೆ.
ಸಹಾನುಭೂತಿಯ ಸಮಗ್ರ ಆರೈಕೆಯನ್ನು ಉತ್ತೇಜಿಸುವುದು ಭಾರತದಲ್ಲಿ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿರುವ ಉಪಶಮನ ಆರೈಕೆಯಾಗಿದೆ. ಈಗ ವೈದ್ಯಕೀಯ ಶಿಕ್ಷಣದ ಪ್ರಮುಖ ಭಾಗವಾಗಿ ರೂಪಿಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮುಂದಾಗಿದೆ.
ಈ ಉಪಕ್ರಮವು ಸಹಾನುಭೂತಿಯನ್ನು ಬೆಳೆಸುತ್ತದೆ, ಘನತೆಯನ್ನು ಕಾಪಾಡುತ್ತದೆ ಮತ್ತು ರೋಗಿಯ ಸಮಗ್ರ ಆರೈಕೆಯನ್ನು ಉತ್ತೇಜಿಸುತ್ತದೆ. ವೈದ್ಯಕೀಯ ಶಿಕ್ಷಣದಲ್ಲಿ ಉಪಶಮನ ಆರೈಕೆಯನ್ನು ಸಂಯೋಜಿಸುವ ಮೂಲಕ, ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಇತರ ರಾಜ್ಯಗಳು ಮತ್ತು ಸಂಸ್ಥೆಗಳಿಗೆ ಮಾದರಿ ಉಪಕ್ರಮವನ್ನು ಆರಂಭಿಸಿದೆ.
ಈ ಬಗ್ಗೆ ಮಾತನಾಡಿದ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಭಗವಾನ್ ಬಿ.ಸಿ., ಅತಿದೊಡ್ಡ ಮತ್ತು ಅತ್ಯಂತ ಮಹತ್ವದ ಆರೋಗ್ಯ ವಿಶ್ವವಿದ್ಯಾಲಯವಾಗಿರುವ ನಾವು, ರಾಜ್ಯದ ಆರೋಗ್ಯ ವಲಯದಲ್ಲಿ ಮಹತ್ವದ ಬದಲಾವಣೆ ತರುವ ಜವಾಬ್ದಾರಿಯನ್ನು ಹೊಂದಿದ್ದೇವೆ. ಪ್ರತಿಯೊಬ್ಬ ವೈದ್ಯಕೀಯ ಪದವೀಧರರು ರೋಗಕ್ಕೆ ಹೇಗೆ ಚಿಕಿತ್ಸೆ ನೀಡಬೇಕು ಎನ್ನುವುದರ ಜೊತೆಗೆ, ಆ ವ್ಯಕ್ತಿಯನ್ನು ಹೇಗೆ ಕಾಳಜಿ ವಹಿಸಬೇಕು ಎಂಬುದನ್ನು ಕಲಿಯಬೇಕಾದ ಅಗತ್ಯವಿದೆ. ಇದನ್ನು ಅವರಿಗೆ ಅರ್ಥ ಮಾಡಿಸಲು ನಾವು ಈ ಹೆಜ್ಜೆ ಇಡುತ್ತಿದ್ದೇವೆ ಎಂದರು.
ಗುಣಪಡಿಸುವಿಕೆ ಅಸಾಧ್ಯವಾದಾಗ ಮಾತ್ರ ಉಪಶಮನ ಆರೈಕೆ ಎನ್ನುವ ನಂಬಿಕೆಯಿಂದ ನಾವು ಹೊರ ಬರಬೇಕಿದೆ. ಇದು ಆರಂಭದಿಂದಲೇ ಕಾರ್ಯರೂಪಕ್ಕೆ ಬರಬೇಕಾದ ಅಗತ್ಯವಿದೆ. ವ್ಯಕ್ತಿಯ ಕಾಯಿಲೆಯನ್ನು ಗುಣಪಡಿಸುವುದರಿಂದ ಹಿಡಿದು ಜೀವಿತಾವಧಿಯ ಗುಣಮಟ್ಟವನ್ನು ಸುಧಾರಿಸುವವರೆಗೆ ಈ ಚಿಕಿತ್ಸೆಯ ವ್ಯಾಪ್ತಿ ವಿಸ್ತರಿಸಿದೆ ಎಂದರು.
ಗುಣಪಡಿಸುವ ಚಿಕಿತ್ಸೆಗಳ ಜೊತೆಗೆ, ನೋವನ್ನು ನಿವಾರಿಸಲು, ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ರೋಗಿಗಳು ಹಾಗೂ ಕುಟುಂಬಗಳ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಉಪಶಮನ ಆರೈಕೆಯನ್ನು ಬಳಸಬೇಕಿದೆ. ಈ ಹಿನ್ನೆಲೆಯಲ್ಲಿ ಉಪಶಮನ ಆರೈಕೆಯನ್ನು ಪಠ್ಯಕ್ರಮದ ಬಹುಮುಖ್ಯ ಭಾಗವಾಗಿ ಪರಿಗಣಿಸಲು ರಾಜೀವ್ ಗಾಂಧಿ ವಿಶ್ವವಿದ್ಯಾಲಯ ನಿರ್ಧರಿಸಿದೆ.
ಒಂದು ದಶಕದ ಹಿಂದೆ, ವಿಶ್ವ ಆರೋಗ್ಯ ಸಭೆಯು ಆರೋಗ್ಯ ರಕ್ಷಣೆಯ ಅತ್ಯಗತ್ಯ ಅಂಶವಾಗಿ ಉಪಶಮನ ಆರೈಕೆಯನ್ನು ಸಂಯೋಜಿಸಲು ರಾಷ್ಟ್ರಗಳನ್ನು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿತು. ಈ ಜಾಗತಿಕ ನಿರ್ದೇಶನದ ಹೊರತಾಗಿಯೂ, ಭಾರತದಲ್ಲಿ ಉಪಶಮನ ಆರೈಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ.
ಶಿಕ್ಷಣವು ಅತ್ಯಂತ ಪರಿಣಾಮಕಾರಿ ಆರಂಭಿಕ ಹಂತವಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಅವರ ಕ್ಲಿನಿಕಲ್ ಅಭ್ಯಾಸದ ಆರಂಭದಿಂದಲೇ ಉಪಶಮನ ಆರೈಕೆಯಲ್ಲಿ ತರಬೇತಿ ನೀಡುವ ಮೂಲಕ, ಸಹಾನುಭೂತಿಯ ಆರೈಕೆಯು ಭಾರತದ ಆರೋಗ್ಯ ವ್ಯವಸ್ಥೆಯ ಮೂಲಭೂತ ಭಾಗವಾಗುವಂತೆ ಮಾಡುವುದು ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಆದ್ಯತೆಯಾಗಿದೆ.
ಉದ್ದೇಶಗಳು ಈ ಕೆಳಗಿನಂತಿವೆ
1. ವೈದ್ಯಕೀಯ ಕಾಲೇಜು ಅಧ್ಯಾಪಕರಿಗೆ NMC ಯ CBME MBBS ಪಠ್ಯಕ್ರಮದಲ್ಲಿ ಉಲ್ಲೇಖಿಸಲಾದ ತತ್ವಗಳು ಮತ್ತು ಸಂಬಂಧಿತ ಸಾಮರ್ಥ್ಯಗಳನ್ನು ಒಳಗೊಂಡಂತೆ ಸಮಗ್ರ ಉಪಶಾಮಕ ಆರೈಕೆ ಮಾಡ್ಯೂಲ್ಗಳನ್ನು ಕಲಿಸಲು ಅಧಿಕಾರ ನೀಡುವುದು.
2. ಭಾರತದ ವೈದ್ಯಕೀಯ ಸಂಸ್ಥೆಗಳಲ್ಲಿ ಉಪಶಾಮಕ ಆರೈಕೆ ಮಾಡ್ಯೂಲ್ಗಳ ವಿತರಣೆಯನ್ನು ಬೆಂಬಲಿಸಲು ಸಂಪನ್ಮೂಲ ವ್ಯಕ್ತಿಗಳ ಗುಂಪನ್ನು ನಿರ್ಮಿಸುವುದು.
3. MBBS ಪಠ್ಯಕ್ರಮದಲ್ಲಿ ಉಪಶಾಮಕ ಆರೈಕೆಯನ್ನು ಸೇರಿಸಲು ಅನುಕೂಲವಾಗುವ ಕಾರ್ಯತಂತ್ರದ ಚೌಕಟ್ಟುಗಳನ್ನು ರೂಪಿಸುವುದು.
4. CBME ಮಾದರಿ ಮತ್ತು ವರ್ತನೆ, ನೀತಿಶಾಸ್ತ್ರ ಮತ್ತು ಸಂವಹನ (AETCOM) ಚೌಕಟ್ಟಿನೊಂದಿಗೆ ಉಪಶಾಮಕ ಆರೈಕೆ ಮಾಡ್ಯೂಲ್ಗಳ ಜೋಡಣೆಯನ್ನು ಖಚಿತಪಡಿಸಿಕೊಳ್ಳುವುದು.
