ಕನ್ನಡ ಸಾಹಿತ್ಯ ಲೋಕಕ್ಕೆ 'ಕಥಾ ಮಂಥನ'ದ ಅಡಿಗಲ್ಲು: ಡಿಜಿಟಲ್ ವೇದಿಕೆಯಲ್ಲಿ ಸಣ್ಣಕಥೆಗಳ ಹೊಸ ಯುಗಾರಂಭ

varthajala
0

 ಬೆಂಗಳೂರು ಅ. 17: ಸ್ವದೇಶಿ ತಂತ್ರಜ್ಞಾನದಲ್ಲಿ ಭಾರತೀಯ ಸಾಮಾಜಿಕ ಜಾಲತಾಣವನ್ನು ನಿರ್ಮಿಸಿರುವ Knobly Cream ಸಂಸ್ಥೆಯು ಕನ್ನಡ ಸಾಹಿತ್ಯಾಭಿಮಾನಿಗಳಿಗೆ ವಿನೂತನ ವೇದಿಕೆಯನ್ನು ಸಿದ್ಧಪಡಿಸಿದೆ. ಸಣ್ಣಕಥೆಗಳ ಓದುವಿಕೆ ಮತ್ತು ವಿಮರ್ಶೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 'ಕಥಾ ಮಂಥನ' ಎಂಬ ನೂತನ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, ಇದರ ಅಧಿಕೃತ ಲಾಂಛನವನ್ನು (ಲೋಗೋ) ಇಂದು ಲೋಕಾರ್ಪಣೆ ಮಾಡಲಾಯಿತು.


'ಕಥಾ ಮಂಥನ'ದ ಲೋಗೋವನ್ನು ನೋಬ್ಲಿ (Knobly) ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ  ಪ್ರಶಾಂತ್ ಹೆಬ್ಬಾರ್ ಅವರು ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿದ ಅವರು,
"ನಮ್ಮ ಸಂಸ್ಥೆ ನಮ್ಮದೇ ಸ್ವದೇಸೀ ತಂತ್ರಜ್ಞಾನದಲ್ಲಿ ಭಾರತೀಯ ಸಾಮಾಜಿಕ ಜಾಲತಾಣವನ್ನು ಸಿದ್ಧಪಡಿಸಿದೆ. ಆ ಮೂಲಕ ನಮ್ಮ ಸಾಹಿತ್ಯ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಪ್ರಚುರಪಡಿಸುವುದರ ಜೊತೆಗೆ ಸ್ವದೇಶಿಯ ಕಲ್ಪನೆಯನ್ನು ಗಟ್ಟಿಗೊಳಿಸುವ ಪ್ರಯತ್ನ ನಮ್ಮದಾಗಿದೆ. ಕನ್ನಡದ ಕಥಾ ಪರಂಪರೆಯನ್ನು ಡಿಜಿಟಲ್ ಯುಗದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಜನತೆಗೆ ತಲುಪಿಸುವ ಕನಸಿನೊಂದಿಗೆ ನಾವು 'ಕಥಾ ಮಂಥನ'ಕ್ಕೆ ಜೀವ ನೀಡುವುದರೊಂದಿಗೆ, Knobly ಸಂಸ್ಥೆ ಸ್ವದೇಶಿ ತಂತ್ರಜ್ಞಾನದಲ್ಲಿ ಜಾಗತೀಕ ಮಟ್ಟದ ಸಾಧನೆ ಮಾಡುವ ದೂರದೃಷ್ಟಿತ್ವವನ್ನು ಇಟ್ಟುಕೊಂಡಿದೆ. ಅದಕ್ಕೆ ಎಲ್ಲರೂ ಸ್ವದೇಶಿ ತಂತ್ರಜ್ಞಾನವನ್ನು ಬಳಸಿಕೊಂಡು ತಮ್ಮ ನಿತ್ಯದ ಕೆಲಸಗಳನ್ನು ಇನ್ನಷ್ಟು ಸರಳೀಕೃತ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಎಲ್ಲರೂ ಕಥಾ ಮಂಥನದಲ್ಲಿ ಭಾಗವಹಿಸಿ, ಕಥೆಗಳನ್ನು ಬರೆದು ಲೇಖಕರಾಗಿ, ಚರ್ಚೆಗಳಲ್ಲಿ ಭಾಗವಹಿಸಿ ಉತ್ತಮ ಓದುಗರಾಗಿ. ನಿಮ್ಮೆಲ್ಲರ ಪ್ರೋತ್ಸಾಹ ನಮ್ಮ ಮೇಲಿರಲಿ," ಎಂದು ಅವರು ಆಶಿಸಿದರು.
 ಕಥಾ ಮಂಥನ ಅಭಿಯಾನದ ಸಂಯೋಜಕರಾದ ಶ್ರೀನಾಥ್‌ ಜೋಶಿ ಅವರು ಮಾತನಾಡಿ,  "ನಮ್ಮ ಕಥಾ ಮಂಥನ ವೇದಿಕೆಯು ಕೇವಲ ಪ್ರಕಟಣೆಗೆ ಸೀಮಿತವಾಗಿಲ್ಲ. ಬದಲಾಗಿ, ಪ್ರತಿ ಓದುಗರಿಗೂ ಈ ಅಭಿಯಾನದಲ್ಲಿ ಭಾಗವಹಿಸಲು ಅವಕಾಶವಿದೆ. Knobly Cream ವೇದಿಕೆಯಲ್ಲಿ ಪ್ರಕಟವಾಗುವ ಕಥೆಗಳ ವಿಷಯ, ಭಾವಗಳು ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ರಾಗ-ದ್ವೇಷಗಳಿಲ್ಲದೆ ಸಮರ್ಥ ಚರ್ಚೆಗೆ ಅವಕಾಶವಿದೆ. ಇದಕ್ಕಾಗಿ ಕಾಮೆಂಟ್ ಬಾಕ್ಸ್ ನೀಡಲಾಗಿದ್ದು, ಅಲ್ಲಿ ನಿಮ್ಮ ಅಭಿಪ್ರಾಯಗಳನ್ನು ಹಾಕುವುದಕ್ಕೆ ಅವಕಾಶವಿದೆ. ಈ ಅಭಿಯಾನದಲ್ಲಿ ಎಲ್ಲ ಅಭಿಮಾನಿ ಓದುಗರು ಸಕ್ರಿಯವಾಗಿ ಭಾಗವಹಿಸಬೇಕೆಂದು ಗೌರವಪೂರ್ವಕವಾಗಿ ಮನವಿ ಮಾಡಲಾಗುತ್ತಿದೆ. ಉತ್ತಮ, ಅರ್ಥಗರ್ಭಿತ ಮತ್ತು ಹೊಸ ಚಿಂತನೆಗೆ ಅನುವು ಮಾಡುವ ಅಭಿಪ್ರಾಯಗಳನ್ನು ಅವರ ಸ್ವ-ವಿವರಗಳೊಂದಿಗೆ ಪ್ರಕಟಿಸಲಾಗುವುದು. ಕಥೆಗಳನ್ನು Knobly Cream ಚಾನಲ್‌ನ ಮೂಲಕ ಎಲ್ಲಾ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುವುದು." ಎಂದು ಅವರು ಸ್ಪಷ್ಟಪಡಿಸಿದರು.
 ಲೋಗೋ ಲೋಕಾರ್ಪಣೆ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಭಾವನಾ ಎನ್‌, ವ್ಯವಸ್ಥಾಪಕಾರಾದ ಪ್ರಶಾಂತ್‌ ರಾವ್‌, ತಂತ್ರಜ್ಞರಾದ ರಮಾದೇವಿ, ಶ್ರೇಯಸ್‌, ದರ್ಶನ್‌ ಹಾಗೂ ಇತರ ಸಿಬ್ಬಂದಿಗಳು ಹಾಜರಿದ್ದರು.

ಯೋಜನೆಯ ವೈಶಿಷ್ಟ್ಯಗಳು ಮತ್ತು ಸಾಹಿತ್ಯಕ ದೃಷ್ಟಿಕೋನ

'ಕಥಾ ಮಂಥನ'ವು ಕನ್ನಡ ಕಥಾ ಪರಂಪರೆಯನ್ನು ಡಿಜಿಟಲ್ ಯುಗದಲ್ಲಿ ಪರಿಣಾಮಕಾರಿಯಾಗಿ ಯುವಜನತೆಗೆ ತಲುಪಿಸುವ ಮತ್ತು ಹೊಸ ಲೇಖಕರನ್ನು ಸೃಷ್ಟಿಸುವ ಮುಖ್ಯ ಉದ್ದೇಶವನ್ನು ಹೊಂದಿದೆ. ಈ ಅಭಿಯಾನವು ಕನ್ನಡ ಸಾರಸ್ವತ ಲೋಕಕ್ಕೆ ಹೊಸತನ ತರುವ ನಿರೀಕ್ಷೆಯಿದೆ.

ವಿಷಯ ವ್ಯಾಪ್ತಿ: ಆರಂಭಿಕ ಹಂತದಲ್ಲಿ ಕನ್ನಡದ ಪೌರಾಣಿಕ ಕಥೆಗಳಿಗೆ ಆದ್ಯತೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಐತಿಹಾಸಿಕ, ಜನಪದ ಹಾಗೂ ಪ್ರಮುಖ ಕನ್ನಡ ಸಾಹಿತಿಗಳ ಕಥೆಗಳನ್ನು ಪ್ರಸಾರ ಮಾಡಲಾಗುತ್ತದೆ.
ನಿರೂಪಣಾ ಶೈಲಿ: ಕಥೆಗಳು ಚಿಕ್ಕದಾಗಿ, ಅಚ್ಚುಕಟ್ಟಾಗಿ ಮತ್ತು ವಾಸ್ತವಿಕತೆಗೆ ಧಕ್ಕೆಯಾಗದಂತೆ ನಿರೂಪಿಸಲಾಗುವುದು.
ಪ್ರಕಟಣಾ ವೇಳಾಪಟ್ಟಿ: ಯೋಜನೆಯಡಿ ಸೋಮವಾರದಿಂದ ಆರಂಭಿಸಿ, ವಾರಕ್ಕೆ ಎರಡು ಕಥೆಗಳನ್ನು Knobly Creamನ ಪ್ರತ್ಯೇಕ ಚಾನಲ್‌ನ 'ಕಥಾ ಮಂಥನ'ದಲ್ಲಿ ಪ್ರಕಟಿಸಲಾಗುವುದು.
ತೆರೆದ ಅವಕಾಶ: ಓದುಗರಿಗೆ ಚರ್ಚೆ ಮತ್ತು ಅಭಿಪ್ರಾಯ ಹಂಚಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸುವುದರ ಜೊತೆಗೆ ಕಥೆಗಳನ್ನು ರಚಿಸುವುದಕ್ಕೆ ವೇದಿಕೆ ಅವಕಾಶ ನೀಡುತ್ತಿದೆ.

Post a Comment

0Comments

Post a Comment (0)