ಕೆಂಪೇಗೌಡರ ಹೆಸರು ಅಜರಾಮರವಾಗಬೇಕು: ಟಿ. ಕೋನಪ್ಪರೆಡ್ಡಿ

varthajala
0

ಬೆಂಗಳೂರು,ಅ.18: ಮಹಾನಗರಿ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಹೆಸರನ್ನು ʼನಮ್ಮ ಮೆಟ್ರೊʼ ಗೆ "ನಾಡಪ್ರಭು ಕೆಂಪೇಗೌಡರ ಮೆಟ್ರೋ" ಎಂದು ಮರುನಾಮಕರಣ ಮಾಡುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಟಿ. ಕೋನಪ್ಪರೆಡ್ಡಿ ಒತ್ತಾಯಿಸಿದರು. 


ನಗರದ ವಿ.ವಿ ಪುರಂ ವಿಜ್ಞಾನ ಕಾಲೇಜು ಅವರಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕೆಂಪೇಗೌಡರ ಹೆಸರು ಅಜರಾಮರವಾಗಬೇಕು. ಕೆಂಪೇಗೌಡರ ಕನಸಿನ ನಗರದಲ್ಲಿ ನಾವಿಂದು ಬದುಕು ಕಟ್ಟಿಕೊಂಡಿದ್ದೇವೆ ಹೀಗಾಗಿ ಅವರ ಹೆಸರು ಎಲ್ಲೆಡೆ ಪಸರಿಸಬೇಕು. ಈ ನಿಟ್ಟಿನಲ್ಲಿ ʼನಮ್ಮ ಮೆಟ್ರೋʼಗೆ ಕೆಂಪೇಗೌಡರ ಹೆಸರು ಸೂಕ್ತ ಎಂಬುದನ್ನು ಸರ್ಕಾರ ಅರಿತು ಕೂಡಲೇ ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. 

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರಾದ ಪ್ರೊ. ರಾಧಾಕೃಷ್ಣ ಮಾತನಾಡಿ, ಪ್ರತಿ ಹೆಸರಿಗೂ ಇತಿಹಾಸವಿದೆ, ಸಂಬಂಧಗಳಿವೆ. ಯಾರಿಗಾದರೂ ಒಂದು ಹೆಸರಿಟ್ಟರೆ ಅದಕ್ಕೊಂದು ಕಾರಣವಿರುತ್ತದೆ. ಆ ಹೆಸರಿನ ಹಿಂದಿನ ಇತಿಹಾಸ, ಕಾರಣಗಳು ತಿಳಿಯುವುದು ಮುಖ್ಯ. ಬೆಂಗಳೂರು ಕೆರೆಗಳ ಮೂಲವಾಗಿತ್ತು,ಬೆಂಗಳೂರು ನಗರ ನಿರ್ಮಾಣ ಮಾತ್ರವಲ್ಲ, ಬೆಂಗಳೂರು ಸುತ್ತಮುತ್ತಲಿನ ಕೃಷಿ ವಲಯ ನಿರ್ಮಾಣಕ್ಕೆ ಕಾರಣವಾದವರು ಕೆಂಪೇಗೌಡರು. ಇದೇ ವೇಳೆ ಬ್ರಿಟೀಷರ ಹೆಸರುಳ್ಳ ʼವಿಕ್ಟೋರಿಯಾʼ ಆಸ್ಪತ್ರೆ ಬೆಂಗಳೂರಿಗೆ ಏಕಿರಬೇಕು? ಹೆಸರು ಬದಲಾಗಬೇಕು. ನಮ್ಮ ರಾಜ್ಯದ ಮಹಾನ್‌ ವ್ಯಕ್ತಿಗಳ ಹೆಸರಿಡುವಂತಾಗಬೇಕು. ಇಡೀ ರಾಜ್ಯದಲ್ಲಿ ಎಲ್ಲೆಲ್ಲಿ ಬ್ರಿಟೀಷರ ಹೆಸರಿದೆ ಅದನ್ನು ತೆಗೆದು ಮಹಾನ್‌ ವ್ಯಕ್ತಿಗಳ ಹೆಸರಿಡಬೇಕು. ಇದು ಸಮುದಾಯದ ಅಸ್ಮಿತೆಗಾಗಿ, ಸಾಂಸ್ಕೃತಿಕ ಅಸ್ಮಿತೆಗಾಗಿ ಹೋರಾಟ. ಸಮುದಾಯದ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟ ಅಪರಾಧವಲ್ಲ ಎಂದು ಒತ್ತಿ ಹೇಳಿದರು. 

ಬೆಂಗಳೂರು ವಕೀಲ ಸಂಘದ ಅಧ್ಯಕ್ಷರಾದ  ವಿವೇಕ್‌ ಸುಬ್ಬಾರೆಡ್ಡಿ ಮಾತನಾಡಿ, ರಾಜ್ಯದ ಗಡಿ ಪ್ರದೇಶಗಳನ್ನು ಗುರುತಿಸಿ ಒಂದು ಮಹಾನಗರ ಸೃಷ್ಟಿಸಬೇಕು ಎಂಬ ಪರಿಕಲ್ಪನೆ ಹೊಂದಿದ್ದ ವ್ಯಕ್ತಿ ಕೆಂಪೇಗೌಡರು.  ಅವರ ಕನಸಿನಂತೆ ಇಂದು ಒಂದು ದೊಡ್ಡ ಮಹಾನಗರಿ ನಮ್ಮ ಕಣ್ಣ ಮುಂದೆ ಬೆಳೆದು ನಿಂತಿದೆ. ಇಲ್ಲಿ ಎಷ್ಟೋ ಜನ ನೆಲೆ ಕಂಡುಕೊಂಡಿದ್ದಾರೆ ಅಂದ್ರೆ ಅದಕ್ಕೆ ಕಾರಣ ಕೆಂಪೇಗೌಡರು. ಅವರ ಹೆಸರು ಜನಪ್ರಿಯವಾಗಬೇಕು, ಮುಂದಿನ ಪೀಳಿಗೆಗೂ ತಲುಪಬೇಕು. ಇದು ಕೇವಲ ಒಕ್ಕಲಿಗ ಸಮುದಾಯದ ಹೋರಾಟವಲ್ಲ. ಇಡೀ ಜನಾಂಗದ ಹೋರಾಟವಾಗಬೇಕು ಜೊತೆಗೆ ರಾಜ್ಯ ಸರ್ಕಾರಕ್ಕೂ ನಮ್ಮ ಕೂಗು ತಲುಪಬೇಕು ಎಂದು ಹೇಳಿದರು. 

ವಿಶ್ವ ಒಕ್ಕಲಿಗರ ಸಂಘದ ಅಧ್ಯಕ್ಷರಾದ ವೈ.ಡಿ. ರವಿಶಂಕರ್‌ ಮಾತನಾಡಿ, ಸಮಾಜ ಸೇವೆ, ಹೋರಾಟಗಳಲ್ಲಿ ಸದಾ ತೊಡಗಿಕೊಂಡಿರುವ ವಿಶ್ವ ಒಕ್ಕಲಿಗರ ಸಂಘವು ಇಂದು ಮಹದಾದ ಹೋರಾಟವನ್ನು ಮಾಡುತ್ತಿದೆ. ನಗರದಲ್ಲಿ ಈಗಿರುವ ʼನಮ್ಮ ಮೆಟ್ರೋʼ ಗೆ ʼನಮ್ಮ ನಾಡಪ್ರಭು ಕೆಂಪೇಗೌಡ ಮೆಟ್ರೋʼ ಎಂದು ನಾಮಕರಣವಾಗಬೇಕು ಎಂದು ಸುಮಾರು 10 ವರ್ಷಗಳ ಹಿಂದೆ (ಡಿಸೆಂಬರ್‌ 2,2015)  ನಡೆದ ನಮ್ಮ ಮೆಟ್ರೋ ಉದ್ಘಾಟನೆ ವೇಳೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಯಯ್ಯ ಅವರಿಗೆ ಕೇಂದ್ರ ಸಚಿವರಾದ ವೆಂಕಯ್ಯ ನಾಯ್ಡು ಅವರ ಸಮ್ಮುಖದಲ್ಲಿ ವಿಜಯನಗರದ ಶಾಸಕರು ಹಾಗೂ ಮಾಜಿ ವಸತಿ ಸಚಿವರಾದ ಎಂ.ಕೃಷ್ಣಪ್ಪನವರು ಬೇಡಿಕೆಯಿಟ್ಟಿದ್ದರು. ಅದಕ್ಕೆ ಅಂದು ಮುಖ್ಯಮಂತ್ರಿಗಳು ಸಮ್ಮತಿ ನೀಡಿದ್ದರು. ಆದರೆ ಅದಾದ ಬಳಿಕ ಅಕ್ಟೋಬರ್‌ 4,2025ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಮೆಟ್ರೋಗೆ ʼಬಸವ ಮೆಟ್ರೋʼ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಅಕ್ಟೋಬರ್‌ 7,2025ರಂದು ಮಾಧ್ಯಮಗಳಿಗೆ ಹೇಳಿಕೆ ಕೊಡುವ ಸಂದರ್ಭದಲ್ಲಿ ನಮ್ಮ ಮೆಟ್ರೋಗೆ ವಾಲ್ಮೀಕಿ ಮೆಟ್ರೋ ಎಂದು ನಾಮಕರಣ ಮಾಡಬೇಕೆಂದು ಬೇಡಿಕೆಯಿಟ್ಟಿದ್ದಾರೆ ನಾನು ಅದನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ, ಕೇಂದ್ರ ಸರ್ಕಾರದ ಮಧ್ಯಸ್ಥಿತಿಕೆ ಇಲ್ಲದಿದ್ರೆ ನಾನೇ ಮರುನಾಮಕರಣ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಇಂದು ಬೆಂಗಳೂರು ನಿರ್ಮಾತೃ ಕೆಂಪೇಗೌಡರ  ಹೆಸರು ಬೆಂಗಳೂರಿಗೆ ಸಲ್ಲಬೇಕು. ಬೆಂಗಳೂರು ಅಂದ್ರೆ ಕೆಂಪೇಗೌಡರ ನೆನಪಾಗಬೇಕು. ಕೆಂಪೇಗೌಡರು ಇಡೀ ಪ್ರಪಂಚಕ್ಕೆ ಗೊತ್ತಾಗಬೇಕು. ಈ ನಿಟ್ಟಿನಲ್ಲಿ ನಮ್ಮ ಮೆಟ್ರೋ ʼನಾಡಪ್ರಭು ಕೆಂಪೇಗೌಡರ ಮೆಟ್ರೋʼ ಎಂದು ನಾಮಕರಣಗೊಳ್ಳಬೇಕು. ಈ ಕೂಗು ಕೇಂದ್ರ ಸರ್ಕಾರಕ್ಕೆ ತಲುಪಬೇಕು. ಅಲ್ಲದೆ ಮುಂದಿನ ದಿನಗಳಲ್ಲಿ 28 ಶಾಸಕರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸುತ್ತೇವೆ. ಬೆಂಬಲ ಸೂಚಿಸದ ಶಾಸಕರ ವಿರುದ್ಧ ಹೋರಾಟ ನಡೆಸುತ್ತೇವೆ ಎಂದರು.

ವಿಶ್ವ ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಭಾರತಿ ಶಂಕರ್‌ ಮಾತನಾಡಿ, ಮನೆ ಕಟ್ಟಿ ಗೃಹಪ್ರವೇಶ ಮಾಡುವಾಗ ಮನೆಯ ನೀಲನಕ್ಷೆ ಹಾಕಿಕೊಟ್ಟವರನ್ನು ಮರೆಯಬಾರದು. ಪಾರಂಪರಿಕವಾಗಿ ನಮ್ಮ ಸಂಸ್ಕೃತಿ ಮುಂದುವರೆಯಬೇಕು. ರಾಜ್ಯ, ವಿಶ್ವ ಮಟ್ಟದಲ್ಲೂ ಬೆಂಗಳೂರು ಸೃಷ್ಟಿಕರ್ತ ಕೆಂಪೇಗೌಡರ ಹೆಸರು ಕೇಳಿಸಬೇಕು. ಇಲ್ಲಿ ನಾವು ಯಾರ ವಿರೋಧಿಯೂ ಅಲ್ಲ. ನಮ್ಮ ಪರಂಪರೆ, ಸಂಸ್ಕೃತಿ ಉಳಿಯಬೇಕು ಮತ್ತು ಮುಂದಿನ ಪೀಳಿಗೆಗೂ ತೆಗೆದುಕೊಂಡು ಹೋಗಬೇಕು ಎಂಬುದೇ ನಮ್ಮ ಮನವಿ ಎಂದರು. 

ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗರ ಮಹಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಆರ್.‌ ಅಶ್ವತ್ಥನಾರಾಯಣಗೌಡ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

Post a Comment

0Comments

Post a Comment (0)