" ನರಕಾಸುರ ವಧೆ ( ದೀಪಾವಳೀ ) "

varthajala
0

ನ ಮಾಧವಸಮೋ ದೇವೋ 

ನ ಚ ಮಧ್ವಸಮೋ ಗುರುಃ!

ನ ತದ್ವಾಕ್ಯಸಮಂ ಶಾಸ್ತ್ರಂ 

ನ ಚ ತಸ್ಯ ಸಮಃ ಪುಮಾನ್!!


" ದಿನಾಂಕ : 20.10.2025 ಸೋಮವಾರ  - ನರಕ ಚತುರ್ದಶೀ " ದೀಪಾವಳೀ "

" ಪ್ರಸ್ತಾವನೆ "

ಶ್ರೀಕೃಷ್ಣಚಾರಿತ್ರ್ಯಮಂಜರಿಯು ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರು ರಚಿಸಿದ ಅಪೂರ್ವವಾದ ಕೃತಿ.

ಶ್ರೀಮದ್ಭಾಗವತ ಮಹಾಪುರಾಣದಲ್ಲಿನ ದಶಮ ಸ್ಕಂದದ ಪೂರ್ವಾರ್ಧ ಹಾಗೂ ಉತ್ತರಾರ್ಧ ಮತ್ತೂ ಏಕಾದಶ ಸ್ಕಂದದಲ್ಲಿ ಬಂದಿರುವ ಸಮಗ್ರ ಶ್ರೀ ಕೃಷ್ಣ ಪರಮಾತ್ಮನ ಕಥೆಯನ್ನು ಸ್ತೋತ್ರ ರೂಪದಲ್ಲಿ ಸಂಗ್ರಹಿಸಿದ್ದಾರೆ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರು!

ಎರಡೂ ಸ್ಕಂದಗಳ ಯಾವುದೇ ಪ್ರಮುಖ ವಿವರವೂ ಬಿಟ್ಟು ಹೋಗದಿರುವುದು ಈ ಸಂಗ್ರಹದ ವೈಶಿಷ್ಟ್ಯ.

ಕಥಾ ಸಾರಾಂಶವನ್ನು ಕೇಳುವೊಮ್ಮೆ ಒಂದೊಂದೇ ಶ್ಲೋಕದಲ್ಲಿ ಸೂಚಿಸುತ್ತಾ ಇಡೀ ಶ್ರೀ ಕೃಷ್ಣ ಪರಮಾತ್ಮನ ಕಥೆಯ ಚಿತ್ರವನ್ನು ಜಿಜ್ಞಾಸುವಿನ ಮುದ್ರಿಸುವ ಇಂಥಹಾ ಕೃತಿಗಳು ಸಂಸ್ಕೃತ ಸಾಹಿತ್ಯದಲ್ಲಿಯೇ ಅತ್ಯಂತ ವಿರಳ.

ಶ್ರೀ ಕೃಷ್ಣ ಪರಮಾತ್ಮನ ಕಥೆಯನ್ನು ಹೀಗೆ ಸಂಗ್ರಹಿಸುವ ಇಂಥಹಾ ಕೃತಿ ಸಮಗ್ರ ವೈಷ್ಣವ ಸಾಹಿತ್ಯದಲ್ಲಿಯೇ ಇನ್ನೊಂದು ಇರಲಾರದು.

ಈ ಕೃತಿಯು ಸಮಗ್ರ ಶ್ರೀ ಕೃಷ್ಣ ಪರಮಾತ್ಮನ ಕಥೆಗೆ ಅನುಕ್ರಮಣಿಕೆಯಾಗಿದೆ.

ಶ್ರೀ ಕೃಷ್ಣ ಪರಮಾತ್ಮನ ಕಥೆಯ ಅಧ್ಯಯನಕ್ಕೆ ಇದು ಒಂದು ಪ್ರವೇಶಿಕೆಯಾಗಿದೆ.

ಸಂಗ್ರಹಣ ಕೌಶಲದಿಂದ ಮಾಡಲೂ, ಸ್ತೋತ್ರ ರೂಪವಾಗಿರುವುದರಿಂದ ನಿತ್ಯ ಪಾರಾಯಣಕ್ಕೂ ಇದು  ಅಪಾರ ನೆರವನ್ನು ನೀಡಬಲ್ಲದು.

ಶ್ರೀಮದ್ಭಾಗವತ ಮಹಾಪುರಾಣದ ಕಥೆಯೊಂದಿಗೆ ಹರಿವಂಶ ಹಾಗೂ ಮಹಾಭಾರತತಾತ್ಪರ್ಯನಿರ್ಣಯದಲ್ಲಿನ ಶ್ರೀ ಕೃಷ್ಣ ಪರಮಾತ್ಮನ ಕಥಾ ವಿವರಗಳನ್ನು ಸಂಗ್ರಹಿಸಿರುವುದು ಈ ಕೃತಿಯ ಮತ್ತೊಂದು ವೈಶಿಷ್ಟ್ಯ.

ಕೆಲವೇ ಶಬ್ದಗಳಿಂದ ಅನೇಕ ಕಥೆಗಳನ್ನು ಸಂಗ್ರಹ ಮಾಡುವುದಲ್ಲದೆ ಆ ಪದಗಳಿಂದ ಕೆಲವು ಅಪೂರ್ವ ಅರ್ಥಗಳನ್ನು ಸೂಚಿಸಿರುವುದು ಈ ಕೃತಿಯ ಇನ್ನೊಂದು ವೈಶಿಷ್ಟ್ಯ.

ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಈ ಅದ್ಭುತ ಸಾಮರ್ಥ್ಯವನ್ನು ಶ್ರೀ ವಾದೀoದ್ರತೀರ್ಥರು ....

" ವಾಚಾ ಸಂಕ್ಷಿಪ್ತಯಾಯದ್ಬಹುಚರಿತಮೂಪಾವರ್ಣ ಯಸ್ತ್ವಂ ಮುರಾರೇ: ಕಿಂಚ ಶ್ರೀರಾಘವೇಂದ್ರವ್ರತಿಪ ರಘುಸತ್ತೇಸ್ತೇನ ನೋ ವಿಸ್ಮಯೇSಯಂ!! ಎಂದು ವರ್ಣಿಸಿರುವರು.

ಆದೌ ದೇವಕೀದೇವಿ ಗರ್ಭ 

ಜನನಂ ಗೋಪೀ ಗೃಹೇ ವರ್ಧನಂ

ಮಾಯಾಪೂತನಿ ಜೀವಿತ ಹರಣಂ ಗೋವರ್ಧನೋದ್ಧಾರನಮ್ ।

ಕಂಸಚ್ಛೇದನ ಕೌರವಾದಿ ಮಥನಂ 

ಕುಂತೀ ಸುತಾಃ ಪಾಲನಂ

ಏತದ್ಭಾಗವತ ಪುರಾಣ ಪುಣ್ಯ 

ಕಥನಂ ಶ್ರೀ ಕೃಷ್ಣ ಲೀಲಾಮೃತಮ್ ।।

" ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ವಿರಚಿತ ಶ್ರೀಕೃಷ್ಣ ಚಾರಿತ್ರ್ಯ ಮಂಜರೀ " ಯಲ್ಲಿ ....

ತ್ರಿ೦ಶತ್ಪ೦ಚಾವಧೀದ್ಯೋ 

ಸಚಿವವರಸುತಾನ್ 

ಭೂಮಿಜೇನಾತಿಘೋರಂ

ಯುದ್ಧ೦ ಕೃತ್ವಾ ಗಜಾದೈರ- 

ರಿಹುತಶಿರಸಂ ತಂ 

ವ್ಯಧಾದ್ಭೂಸ್ತುತೋsಥ ।

ಕೃತ್ವಾ ರಾಜ್ಯೇsಸ್ಯ ಸೂನು೦ 

ವರಯುವತಿಜನಾನ್ 

ಭೂರಿಶಶ್ಚಾರುವೇಷಾನ್

ಪ್ರಾಪಯ್ಯಾ ದ್ವಾರಕಾ೦ 

ಸೋsಕೃತ ಮುದಮದಿತೇ ಕುಂಡಲಾಭ್ಯಾಮವೇನ್ಮಾಮ್ ।। ೧೮ ।।

ಯಃ = ಯಾವ ಶ್ರೀ ಕೃಷ್ಣನು

ತ್ರಿ೦ಶತ್ಪ೦ಚ = ಮೂವತ್ತೈದು ಜನ

ಸಚಿವ = ಮಂತ್ರಿಗಳ

ವರ = ಶ್ರೇಷ್ಠರಾದ

ಸುತಾನ್ = ಪುತ್ರರನ್ನು

ಅವಧೀತ್ = ಸಂಹರಿಸಿದನೋ

ಗಜಾದೈ = ಆನೆ ಕುದುರೆ ಮುಂತಾದವುಗಳಿಂದ ಯುಕ್ತನಾದ

ಭೂಮಿಜೇನ = ಭೂದೇವಿಯ ಮಗನಾದ ನರಕಾಸುರನೊಡನೆ

ಅತಿಘೋರಂ = ಭಯಂಕರವಾದ

ಯುದ್ಧ೦ = ಕದನವನ್ನು

ಕೃತ್ವಾ = ಮಾಡಿ

ತಂ = ನರಕಾಸುರನನ್ನು

ಅರಿ = ಚಕ್ರದಿಂದ

ಹೃತ = ಅಪಹರಿಸಲ್ಪಟ್ಟ

ಶಿರಸಂ = ಶಿರವುಳ್ಳವನನ್ನಾಗಿ

ವೃಧಾತ್ = ಮಾಡಿದನೋ

ಅಥ = ಅನಂತರ

ಭೂಸ್ತುತಃ = ಭೂಮಿಗೆ ಅಭಿಮಾನಿನಿಯಾದ ಧರಾದೇವಿಯಿಂದ ಸ್ತುತ್ಯನಾಗಿ

ಅಸ್ಯ = ನರಕಾಸುರನ

ಸೂನುಮ್ = ಪುತ್ರನಾದ ಭಗದತ್ತನನ್ನು

ರಾಜ್ಯೇ = ಪ್ರಾಗ್ಜ್ಯೋತಿಷ ಪುರ ರಾಜ್ಯಅಧಿಪತ್ಯವನ್ನು

ಕೃತ್ವಾ = ಸ್ಥಾಪಿಸಿ ( ಪಟ್ಟಾಭಿಷೇಕ ಮಾಡಿ )

ಚಾರುವೇಷಾನ್ = ಮನೋಹರ ಅಲಂಕಾರ ಯುಕ್ತರಾದ

ಭೂರಿಶಃ = ಅಧಿಕರಾದ

ವರ = ಶ್ರೇಷ್ಠರಾದ

ಯುವತಿ ಜನಾನ್ = ಯೌವನಸ್ಥರಾದ ಸ್ತ್ರೀಯರನ್ನು

ದ್ವಾರಕಾಂ = ದ್ವಾರಕೆಗೆ

ಪ್ರಾಪಯ್ಯಾ = ಕರೆದೊಯ್ದು

ಅಧಿತೇ: = ಇಂದ್ರನ ತಾಯಿಯಾದ ಅದಿತಿದೇವಿಗೆ

ಕುಂಡಲಾಭ್ಯಾಮ್ = ಕರ್ಣ ಕುಂಡಲ ಪ್ರಧಾನದಿಂದ

ಮುದಂ = ಹರ್ಷವನ್ನು

ಅಕೃತ = ಉಂಟು ಮಾಡಿದನೋ

ಸಃ = ಅಂಥಹ ಶ್ರೀಕೃಷ್ಣ ಪರಮಾತ್ಮನು

ಮಾಂ = ನನ್ನನ್ನು

ಅವೇತ್ = ರಕ್ಷಿಸಲಿ!!

ಶ್ರೀಮದ್ಭಾಗವತ ದಶಮ ಸ್ಕಂದದ ಪೂರ್ವಾರ್ಧದ 63 ಮತ್ತು 64ನೇ ಅಧ್ಯಾಯಗಳನ್ನು ಶ್ರೀ ರಾಯರು ತಮ್ಮಿಂದ ರಚಿತವಾದ ಶ್ರೀ ಕೃಷ್ಣ ಚಾರಿತ್ರ್ಯ ಮಂಜರೀ ಯಲ್ಲಿ ಸೆರೆ ಹಿಡಿದ್ದಾರೆ. 

ಇದು ನಮ್ಮ ನಿಮ್ಮೆಲ್ಲರ ಶ್ರೀ ರಾಯರ ವಿದ್ಯಾ ಕೌಶಲ!!

ಪರೀಕ್ಷಿತ್ : - 

ಶ್ರೀ ಕೃಷ್ಣನು ನರಕಾಸುರನನ್ನು ಕೊಂದ ಕಾರಣವೇನು? ಎಂದು ಶ್ರೀ ಶುಕ ಮಹರ್ಷಿಗಳನ್ನು ಕೇಳಿದಾಗ...

ಶ್ರೀ ಶುಕ ಮಹರ್ಷಿಗಳು...

ನರಕಾಸುರನು ದೇವತೆಗಳನ್ನೆಲ್ಲಾ ಹಿಂಸಿಸುತ್ತಿದ್ದನು. 

ದೇವ ಮಾತೆಯಾದ ಅದಿತಿ ದೇವಿಯನ್ನು ಬಹಳವಾಗಿ ಹಿಂಸಿಸಿ ಅವಳ ಬೆಂಡೋಲೆಗಳನ್ನು ಅಪಹರಿಸಿದ್ದನು. 

ಇಂದ್ರನು ಬಂದು ಶ್ರೀ ಕೃಷ್ಣನಲ್ಲಿ ಇದನ್ನು ಅರಿಕೆ ಮಾಡಿಕೊಂಡನು. 

ಇದನ್ನು ಕೇಳಿ ಶ್ರೀಕೃಷ್ಣ ಪರಮಾತ್ಮನು ಸತ್ಯಭಾಮೆಯೊಡನೆ ಗರುಡನನ್ನೇರಿ ಪ್ರಾಗ್ಜ್ಯೋತಿಷ ಪುರವೆಂಬ ನರಕಾಸುರನ ಪಟ್ಟಣದ ಬಳಿಗೆ ಬಂದನು.

ಆ ನಗರದ ರಕ್ಷಣೆಗಿದ್ದ ಗಿರಿದುರ್ಗ, ಜಲದುರ್ಗ ಅದರೊಳಗಿದ್ದ ಅಗ್ನಿ ವಾಯು ದುರ್ಗಗಳೂ ಇದೆಲ್ಲವನ್ನೂ ಶ್ರೀ ಕೃಷ್ಣನು ನಾಶ ಮಾಡಿದ್ದಲ್ಲದೇ ಮುರನ ಆರು ಸಾವಿರ ಪಾಶಗಳನ್ನೂ ಅನಾಯಾಸವಾಗಿ ಧ್ವಂಸ ಮಾಡಿ -  ಐದು ತಲೆಗಳುಳ್ಳ ಮುರಾಸುರ ಮತ್ತು ಅವನ ಪುತ್ರರಾದ ತಾಮ್ರ ಮುಂತಾದ ಏಳು ಮಂದಿ ದೈತ್ಯರನ್ನೂ ಸಂಹರಿಸಿದನು. ಕೊನೆಗೆ ನರಕಾಸುರನೇ ಯುದ್ಧಕ್ಕೆ ಬಂದ.

ಶತಘ್ನಿಯೆಂಬ ಅಮೋಘವಾದ ಗದೆಯನ್ನು ತಿರುಗಿಸಿ ಶ್ರೀ ಕೃಷ್ಣ ಪರಮಾತ್ಮನನ್ನು ಬಡಿದನು. 

ಶ್ರೀ ಕೃಷ್ಣ ಪರಮಾತ್ಮನು ಶತಘ್ನಿ ನಾಮಕ ಗದೆಯನ್ನು ನುಂಗಿ ಅಸುರ ಜನರಿಗೆ ಬಳಲಿಕೆಯನ್ನು ತೋರಿಸಿ ಬಳಿಕ ನರಕಾಸುರನು ಪ್ರಯೋಗಿಸಿದ ಬಾಣಗಳನ್ನು ಕತ್ತರಿಸಿ ನರಕನ ಸಹಾಯಕ್ಕೆಂದು ಬಂದ ಯಾವತ್ತೂ ಸೈನ್ಯವನ್ನು ಕ್ಷಣ ಮಾತ್ರದಲ್ಲಿ ಸಂಹರಿಸಿದನು!!

ನರಕಾಸುರನು ಶ್ರೀ ಕೃಷ್ಣ ಪರಮಾತ್ಮನ ಕೂಡೆ ಯುದ್ಧವನ್ನು ಮಾಡುತ್ತಾ ಅವನ ವಾಹನವಾದ ಗರುಡದೇವನನ್ನು ಹೊಡೆದನು. 

ಆದರೇನು? 

ಅವನು ಅಲ್ಲಾಡಲಿಲ್ಲ. 

ನರಕನು ಶ್ರೀ ಕೃಷ್ಣ ಪರಮಾತ್ಮನ ಮೇಲೆ ಹಲಾಯುಧವನ್ನು ಪ್ರಯೋಗಿಸಬೇಕೆಂದಿರುವಾಗಲೇ ಶ್ರೀ ಕೃಷ್ಣ ಪರಮಾತ್ಮನು ಚಕ್ರದಿಂದ ನರಕಾಸುರನನ್ನು ಸಂಹರಿಸಿದನು. 

ಆಗ ದೇವತೆಗಳು ಪುಷ್ಪ ವೃಷ್ಟಿಯನ್ನು ಮಾಡಿದರು. 

ಗಂಧರ್ವಾಪ್ಸರೆಯರು ಗಾನ ನರ್ತನಗಳನ್ನು ಮಾಡಿದರು!

ಶ್ರೀ ಕೃಷ್ಣ ಪರಮಾತ್ಮನು ಪಟ್ಟಣದೊಳಗೆ ಬಂದು ನರಕನು ಕಿತ್ತುಕೊಂಡಿದ್ದ ಮಣಿಪರ್ವತವನ್ನು ಇಂದ್ರನಿಗೂ - ಅಮೃತಸ್ರಾವಿಯಾದ ಶ್ವೇತ ಛತ್ರವನ್ನು ವರುಣನಿಗೂ ಕಳುಹಿಸಿ ಅಂತಃಪುರಕ್ಕೆ ಬಂದನು!

ಅಲ್ಲಿದ್ದ ಭೂದೇವಿಯು ಅದಿತಿಯ ಓಲೆಗಳನ್ನು ಶ್ರೀ ಕೃಷ್ಣ ಪರಮಾತ್ಮನಿಗೆ ಅರ್ಪಿಸಿದಳು ಮತ್ತು

ನಮಃ ಪಂಕಜನಾಭಾಯ 

ನಮಃ ಪಂಕಜಮಾಲಿನೇ ।

ನಮಃ ಪಂಕಜನೇತ್ರಾಯ 

ಸಮಸ್ತೆ ಪಂಕಜಾ೦ಘ್ರಯೇ ।।

ಎಂದು ಸ್ತುತಿಸಿದಳು.

ಭೂದೇವಿಯು...

ಸ್ವಾಮಿಯೇ! ರಜೋ ಗುಣದಿಂದ ಸೃಷ್ಠಿಯನ್ನೂ; ಸತ್ವ ಗುಣದಿಂದ ರಕ್ಷಣೆಯನ್ನೂ - ತಮೋ ಗುಣದಿಂದ ಲಯವನ್ನೂ ಮಾಡುವೆ. 

ನಾನೇ ಮೊದಲಾದ ಸರ್ವ ತತ್ತ್ವಾಭಿಮಾನಿ ದೇವತೆಗಳೂ ನಿನ್ನ ಅಧೀನರಾಗಿರುವೆವು. 

ನನ್ನ ಮೊಮ್ಮಗನಾದ ಈ ಭಗದತ್ತನು ನಿನ್ನಲ್ಲಿ ಶರಣಾಗತನಾಗಿರುವನು. ಇವನನ್ನು ರಕ್ಷಿಸು!

ಶ್ರೀ ಕೃಷ್ಣನು ಭಗದತ್ತನಿಗೆ ಅಭಯವನ್ನು ಕೊಟ್ಟು ಆ ರಾಜ್ಯದ ಸಿಂಹಾಸನದಲ್ಲಿ ಪಟ್ಟಾಭಿಷೇಕ ಮಾಡಿ - ನರಕನ ಸೆರೆಯಲ್ಲಿದ್ದ ಕನ್ಯೆಯರನ್ನೆಲ್ಲಾ ಬಿಡಿಸಿದನು. 

ಆ ಕನ್ಯೆಯರಲ್ಲಿ ಯಾರೂ ತಮ್ಮ ತಮ್ಮ ಊರಿಗೆ ಹೊಗಳಿಷ್ಟಪಡದೆ ಅವರೆಲ್ಲರೂ ಶ್ರೀ ಕೃಷ್ಣ ಪರಮಾತ್ಮನನ್ನೇ ಮದುವೆಯಾಗಬೇಕೆಂದು ಪ್ರಾರ್ಥಿಸಿದರು.

ಭಕ್ತವತ್ಸಲನಾದ ಶ್ರೀ ಕೃಷ್ಣ ಪರಮಾತ್ಮನು ಅವರನ್ನೆಲ್ಲಾ ಮದುವೆಯಾಗಲು ಒಪ್ಪಿ ಅವರೆಲ್ಲರನ್ನೂ ದ್ವಾರಕೆಗೆ ಕಳುಹಿಸಿಕೊಟ್ಟನು. 

ಬಳಿಕ ಶ್ರೀ ಕೃಷ್ಣ ಪರಮಾತ್ಮನು ದೇವಲೋಕಕ್ಕೆ ಹೋಗಿ ಇಂದ್ರನಿಂದ ಪೂಜಿತನಾಗಿ ಅದಿತಿದೇವಿಗೆ ಬೆಂಡೋಲೆಯನ್ನು ಕೊಟ್ಟು ಸರ್ವರನ್ನೂ ಸಂತೋಷ ಪಡಿಸಿದನು.

ಅಂಥಹಾ ಶ್ರೀ ಕೃಷ್ಣ ಪರಮಾತ್ಮನು ನನ್ನನ್ನು ರಕ್ಷಿಸಲಿ ಎಂದು ಶ್ರೀ ಗುರುರಾಜ ಗುರುಸಾರ್ವಭೌಮರು ಸ್ತುತಿಸಿದ್ದಾರೆ!!

ರಾಗ : ಕನ್ನಡ ಕಾಂಬೋಧಿ 

ತಾಳ : ಆದಿ

ಹಕ್ಕಿಯ ಹೆಗಲೇರಿ ಬಂದಾವಗೆ । ನೋ ।

ಡಕ್ಕ ಮನಸೋತೆ ನಾನವಗೆ ।। ಪಲ್ಲವಿ ।।

ಸತ್ರಾಜಿತನ ಮಗಳೆತ್ತಿದ । ಉ ।

ನ್ಮತ್ತ ನರಕಾನೊಳು ತಾ ಕಾದಿದ ।

ಮತ್ತೆ ಕೆಡಹಿದ ಅವನಂಗವ ।

ಸತಿಗಿತ್ತನು ತಾ ಆಲಿಂಗನವ ।। ಚರಣ ।।

ಹದಿನಾರು ಸಾವಿರ ನಾರಿಯರ ।

ಸೆರೆ ಮುದದಿಂದ ಬಿಡಿಸಿ ಮನೋಹರ ।

ಅದಿತಿಯ ಕುಂಡಲ ಕಳಿಸಿದ ಹರಿ ।

ವಿಧಿ ಸುರ ನೃಪರನು ಸಲಹಿದ ।। ಚರಣ ।।

ಉತ್ತಮ ಪ್ರಾಗ್ಜ್ಯೋತಿಷ ಪುರವ । ಭಗ ।

ದತ್ತಗೆ ಕೊಟ್ಟ ವರಾಭಯವ ।

ಕರ್ತ ಕೃಷ್ಣಯ್ಯನ ನಂಬಿದೆ । ಶ್ರೀ ।

ಮೂರ್ತಿಯ ಪಾದವ ಹೊಂದಿದೆ ।। ಚರಣ ।।

ನರಕ ಚತುರ್ದಶೀ ಪರ್ವದ ದಿನ ।

ಹರುಷದಿ ಪ್ರಕಟಾದನು ದೇವ ।

ಶರಣಾಗತ ಜನ ವತ್ಸಲಾ ರಂಗ ।

ಪರಮ ಭಾಗವತರ ಪರಿಪಾಲ ।। ಚರಣ ।।

ಹೊಗಳಿ ಕೃಷ್ಣಯ್ಯನ ಮಹಿಮೆಯ ಮುಕ್ತಿ ।

ನಗರದ ಅರಸನ ಕೀರ್ತಿಯಾ ।

ಜಗದೀಶ ಪ್ರಸನ್ವೇ೦ಕಟೇಶನು । ಭಕ್ತ ।

ರಘ ಹಾರಿ ರವಿಕೋಟಿ ಪ್ರಕಾಶನು ।। ಚರಣ ।।

" ದೀಪಯತಿ ಸ್ವಂ ಪರಂ ಚ ಇತಿ ದೀಪಃ " - ಎಂಬ ಶಾಸ್ತ್ರ ವಚನದಂತೆ ತಾನೂ ಬೆಳಗಿ - ಬೇರೆಯವರನ್ನೂ ಬೆಳಗಿಸುವ ಶಕ್ತಿ ದೀಪಕ್ಕಿದೆ ಎಂದು ಹೇಳುತ್ತಾ...

ನಾಡಿನ ಸಮಸ್ತ ಅಧ್ಯಾತ್ಮ ಬಂಧುಗಳಿಗೆ - " ನರಕ ಚತುರ್ದಶೀ ದೀಪಾವಳೀ ಶುಭಾಷಯ " ಗಳೊಂದಿಗೆ....

ಆಚಾರ್ಯ ನಾಗರಾಜು ಹಾವೇರಿ

ಗುರು ವಿಜಯ ಪ್ರತಿಷ್ಠಾನ

Post a Comment

0Comments

Post a Comment (0)