ಬೆಂಗಳೂರು, ನವೆಂಬರ್ 05 (ಕರ್ನಾಟಕ ವಾರ್ತೆ): ಜಿಲ್ಲಾ ಮಟ್ಟದ ಅಂಚೆ ಚೀಟಿಗಳ ಸಂಗ್ರಹಣಾ ಪ್ರದರ್ಶನದ - ಬೆಂಗಳೂರು ಪೆಕ್ಸ್-2025 ಕಾರ್ಯಕ್ರಮದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನವು ಅಂಚೆ ಇಲಾಖೆ ಸಹಯೋಗದೊಂದಿಗೆ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿತು.
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ. ಸೂರ್ಯ ಸೇನ್ ಮಾತನಾಡಿ, ಇತ್ತೀಚೆಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಜಪಾನ್ ದೇಶದ ಹಿಮೆಜಿ ಸೆಂಟ್ರಲ್ ಪಾರ್ಕ್ - ಸಫಾರಿ ಪಾರ್ಕ್‍ಗೆ ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ನಾಲ್ಕು ಏಷ್ಯನ್ ಆನೆಗಳಾದ – ಸುರೇಶ್ (8), ಗೌರಿ (9), ಶೃತಿ (7) ಮತ್ತು ತುಳಸಿ (5) ಇವುಗಳನ್ನು ಸ್ಥಳಾಂತರಿಸಲಾಗಿದ್ದು, ಇದು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಪ್ರಾಣಿ ನಿರ್ವಹಣೆಯ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿದ್ದು, ಭಾರತ-ಜಪಾನ್ ನಡುವಿನ ಜಾಗತಿಕ ವನ್ಯಜೀವಿ ಸಂರಕ್ಷಣಾ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸಿದೆ. ಈ ವಿಶೇಷ ಲಕೋಟೆಯನ್ನು ಬೆಂಗಳೂರು ಪೆಕ್ಸ್-2025 ರ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ ಎಂದರು.
ಬೆಂಗಳೂರು ಪಶ್ಚಿಮ ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಶ್ರೀಮತಿ ಸೂರ್ಯ .ಯು, ಬೆಂಗಳೂರು ದಕ್ಷಿಣ ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಗಜೇಂದ್ರ ಕುಮಾರ್ ಮೀನಾ, ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪ್ರಶಾಂತ್ ಪಿ.ಕೆ.ಎಂ ಉಪಸ್ಥಿತರಿದ್ದರು.