ಬೆಂಗಳೂರು, ನವೆಂಬರ್ 4: ಕಾಡುಮಲ್ಲೇಶ್ವರ ಗೆಳಯರ ಬಳಗದ ವತಿಯಿಂದ 400 ಕಡಲೆಕಾಯಿ ಮಳಿಗೆ ಶ್ರೀ ಭ್ರಮರಾಂಭ ಸಮೇತ ಶ್ರೀ ಕಾಡುಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ಮಲ್ಲೇಶ್ವರದಲ್ಲಿ 9ನೇ ವರ್ಷದ ರೈತ ಸ್ನೇಹಿ ಮಲ್ಲೇಶ್ವರ ಕಡಲೆಕಾಯಿ ಪರಿಷೆ ನವೆಂಬರ್ 8, 9 ಮತ್ತು 10ರಂದು ಮೂರು ದಿನಗಳ 9ನೇ ವರ್ಷದ ರೈತ ಸ್ನೇಹಿ ಮಲ್ಲೇಶ್ವರ ಕಡಲೆಕಾಯಿ ಪರಿಷೆ ವಿಜೃಂಭಣೆಯಿಂದ ನಡೆಯಲಿದೆ.
ನವೆಂಬರ್ 8ರಂದು ಸಂಜೆ 5 ಗಂಟೆಗೆ ಮುಜರಾಯಿ ಮತ್ತು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ವಿಧಾನಪರಿಷತ್ ಸದಸ್ಯರು ಬಿ.ಕೆ. ಹರಿಪ್ರಸಾದ್, ಶ್ರೀಮತಿ ವೆಂಕಟಮ್ಮ ಮಟ್ಟ ಬಾರ್ಲು, ಶ್ರೀಮತಿ ಸರೋಜಮ್ಮ ಬನ್ನಪ್ಪ ರವರು ವಿಶೇಷ ಅತಿಥಿಗಳಾಗಿರುತ್ತಾರೆ.
ಕಾರ್ಯಕ್ರಮದ ಅಂಗವಾಗಿ ಸಂಜೆ 6.30ಕ್ಕೆ ಹುಣ್ಣಿಮೆ ಹಾಡು–222 ಕಾರ್ಯಕ್ರಮವು ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಸ್ಮರಣಾರ್ಥವಾಗಿ “ನೆನಪುಗಳ ಕಡಲಲ್ಲಿ” ಎಂಬ ಶೀರ್ಷಿಕೆಯಲ್ಲಿ ಶ್ರೀಮತಿ ಸವಿತಾ ಗಣೇಶ್ ಪ್ರಸಾದ್ ನೇತೃತ್ವದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ವಿಜಯಾನಂದ ಎಸ್. ಕಾಶಪ್ಪನವರ್ ಹಾಗೂ ವೀರಲೋಕ ಬುಕ್ಸ್ ಸಂಸ್ಥಾಪಕರಾದ ವೀರಕಪುತ್ರ ಎಂ. ಶ್ರೀನಿವಾಸ್ ರವರು ಭಾಗವಹಿಸಲಿದ್ದಾರೆ.
ನವೆಂಬರ್ 9ರಂದು ಸಂಜೆ ಹುಣ್ಣಿಮೆ ಹಾಡು–223 ಕಾರ್ಯಕ್ರಮದಲ್ಲಿ ಶ್ರೀಮತಿ ಮಧು ಮನೋಹರನ್ ಮತ್ತು ಕಾರ್ತಿಕ್ ಪಾಂಡವಪುರ ತಂಡದವರಿಂದ ಭಾವಸಂಗೀತ ಸಂಗಮ ನಡೆಯಲಿದೆ. ಇದೇ ದಿನ ಸಂಜೆ 5 ಗಂಟೆಗೆ ಹುಣ್ಣಿಮೆ ಹಾಡು ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದ್ದು, ಈ ವರ್ಷದ ಗೌರವ ಡಾ. ರಾಜ್ ಕುಮಾರ್ ಮಾಧುರ್ಯದ ನೆನಪು ಪ್ರಶಸ್ತಿ ಖ್ಯಾತ ಸುಗಮ ಸಂಗೀತಗಾರ ಗರ್ತಿಕೆರೆ ರಾಘಣ್ಣ ರವರಿಗೆ ಪ್ರಧಾನವಾಗಲಿದೆ. ಪ್ರಶಸ್ತಿಯು ₹10,000 ನಗದು ಪುರಸ್ಕಾರವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರಧಾನವನ್ನು ನಟಿ ಸುಧಾರಾಣಿ ಮತ್ತು ನಟ ವಿಜಯರಾಘವೇಂದ್ರ ರವರು ನೆರವೇರಿಸಲಿದ್ದಾರೆ.
ನವೆಂಬರ್ 10ರಂದು ಸಂಜೆ 5 ಗಂಟೆಗೆ ಸಂಪನ್ನ ಸಮಾರಂಭ ನಡೆಯಲಿದೆ. ಸಂಜೆ 6.30ಕ್ಕೆ ಹುಣ್ಣಿಮೆ ಹಾಡು–225 ಕಾರ್ಯಕ್ರಮದಲ್ಲಿ ಕಾರ್ತಿಕ್ ಮಣಿ ಮತ್ತು ಜರ್ಮನಿ ಮೂಲದ ಮ್ಯಾಗ್ನಸ್ ಡವ್‌ನರ್ ತಂಡದಿಂದ ಕರ್ನಾಟಕ–ಜರ್ಮನಿ ಸಂಯುಕ್ತ ಸಂಗೀತ ತಾಳವಾದ್ಯ ಕಾರ್ಯಕ್ರಮವು ನಡೆಯಲಿದೆ.
ಅಧ್ಯಕ್ಷರಾದ ಬಿ.ಕೆ. ಶಿವರಾಂ ರವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, “ಕಾಡುಮಲ್ಲೇಶ್ವರ ಗೆಳಯರ ಬಳಗ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸಲು ಶ್ರಮಿಸುತ್ತಿದೆ. ಈ ಪರಿಷೆಯಲ್ಲಿ ರೈತರ ಹಿತದೃಷ್ಟಿಯಿಂದ ಯಾವುದೇ ಶುಲ್ಕ ವಿಧಿಸದೆ ಬೀದಿ ವ್ಯಾಪಾರಿಗಳು ಹಾಗೂ ರೈತರಿಗೆ ನೇರ ಮಾರಾಟದ ಅವಕಾಶ ನೀಡಲಾಗಿದೆ. ಪ್ಲಾಸ್ಟಿಕ್ ಮುಕ್ತ ಪರಿಷೆಯ ಭಾಗವಾಗಿ 1 ಲಕ್ಷಕ್ಕೂ ಹೆಚ್ಚು ಪೇಪರ್ ಬ್ಯಾಗ್ ಹಾಗೂ ಬಟ್ಚೆ ವಿತರಿಸಲಾಗುತ್ತದೆ. ಸ್ವಚ್ಛತಾ ಅಭಿಯಾನಕ್ಕೂ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ,” ಎಂದು ತಿಳಿಸಿದರು.
ಕಾಡುಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷರಾದ ಬಿ.ಕೆ.ಶಿವರಾಂರವರು, ಉಪಾಧ್ಯಕ್ಷೆ ಲೀಲಾ ಸಂಪಿಗೆರವರು, ಸಂಘದ ಅನೂಪ್ ಅಯ್ಯಂಗಾರ್, ಶ್ರೀವಲ್ಲಭ, ಚಂದ್ರಶೇಖರ್ ನಾಯ್ಡು, ಸೋಮಶೇಖರ್, ನರಸಿಂಹಪ್ರಭು, ಸುಧಾಕರ್, ರಾಜಶಶಿಧರ್, ಸಾಮಾಜಿಕ ಸೇವಾ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು ಮಾಧ್ಯಮಗೋಷ್ಟಿಯಲ್ಲಿ ಭಾಗವಹಿಸಿದ್ದರು.