ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾತನಾಡಿ, ಮಕ್ಕಳು ಈ ದೇಶದ ಭವಿಷ್ಯ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟರೆ ಅದು ದೇವರ ಪ್ರಸಾದದ ರೀತಿಯಲ್ಲಿ ಹೊರಬರುತ್ತದೆ. ದೇಶ ಅಭಿವೃದ್ಧಿಯಾಗಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ದೇಶಕ್ಕೆ ಹೆಗ್ಗಳಿಕೆ ತರುವ ಕೆಲಸ ಮಾಡಬೇಕು ಎಂದರು.
ಮಕ್ಕಳಲ್ಲಿ ಉತ್ತಮ ಆಲೋಚನೆ, ಚಿಂತನೆ, ಉತ್ತಮ ಭವಿಷ್ಯವನ್ನು ರೂಪಿಸುವಂತಹ ಕೆಲಸವನ್ನು ಶಾಲಾ ಶಿಕ್ಷಣ ಇಲಾಖೆ ಮಾಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಅತ್ಯುತ್ತಮ ನುರಿತ ಶಿಕ್ಷಕರಿದ್ದಾರೆ. ಇಡೀ ರಾಜ್ಯದಲ್ಲಿ ಇಂದಿನಿಂದ ದಾಖಲಾತಿ ಆಂದೋಲನ ಆರಂಭ ಮಾಡುತ್ತಿದ್ದು, ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ಮೂಲಕ ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ರೂಪಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ 51000 ಅತಿಥಿ ಶಿಕ್ಷಕರನ್ನು ಒಂದೇ ಬಾರಿಗೆ ನೇಮಕ ಮಾಡಲಾಗಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ 18000 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಒಟ್ಟಾರೆ ಶಾಲಾ ಮತ್ತು ಶಿಕ್ಷಣ ಇಲಾಖೆ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.
ರಾಜ್ಯದಲ್ಲಿ 900 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಪ್ರತಿಯೊಂದು ಶಾಲೆಯಲ್ಲಿ 1200 ಮಕ್ಕಳು ಕಲಿಯಲು ಅನುಕೂಲ ಮಾಡಿಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಒಂದರಂತೆ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಕರ್ನಾಟಕ ಪಬ್ಲಿಕ್ ಶಾಲೆ ತೆರೆಯಲು ಕ್ರಮವಹಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲಾಗುವುದು. ನಮ್ಮ ರಾಜ್ಯವು ದೇಶದಲ್ಲಿಯೇ ಮೊದಲು 25000 ಮಕ್ಕಳಿಗೆ ಉಚಿತವಾಗಿ ಎನ್‍ಇಇಟಿ ಮತ್ತು ಸಿಇಟಿ ಕೋಚಿಂಗ್ ನೀಡುತ್ತಿದೆ. ಇದರಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಕಲಿತ ಮಕ್ಕಳು ಐಐಟಿಯಂತಹ ಅತ್ಯುನ್ನತ ಕಾಲೇಜುಗಳಲ್ಲಿ ಸೀಟುಗಳನ್ನು ಪಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ಒಂದರಿಂದ ಹತ್ತನೇ ತರಗತಿಯ ಮೌಲ್ಯ ಶಿಕ್ಷಣದ ಚಟುವಟಿಕೆ ಪುಸ್ತಕದ ಡಿಜಿಟಲ್ ಅವತರಣಿಕೆಯನ್ನು ಬಿಡುಗಡೆ ಮಾಡಿದರು ಹಾಗೂ 2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿ ಹಾಗೂ ಪದವಿ ಪೂರ್ವ ಶಿಕ್ಷಣದಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕಾರವನ್ನು ಸಹ ವಿತರಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ಸದಸ್ಯರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹಮ್ಮದ್, ಗ್ಯಾರಂಟೆ ಯೋಜನೆಗಳ ಅನುಷ್ಠಾನ ಪ್ರಾದಿಕಾರದ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್, ವಿಧಾನ ಪರಿಷತ್ತಿನ ಸದಸ್ಯರಾದ ಬಲ್ಕಿಸ್ ಬಾನು, ವಿಧಾನ ಸಭೆಯ ಸದಸ್ಯರಾದ ವಿಜಯಾನಂದ ಕಾಶಪ್ಪನವರ್, ಬಿ.ಬಿ. ಚಿಮ್ಮನಕಟ್ಟಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ವಿ. ರಶ್ಮಿ ಮಹೇಶ್, ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ಪ್ರಾಧ್ಯಾಪಕರು, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಮತ್ತು ಗಣ್ಯರು ಉಪಸ್ಥಿತರಿದ್ದರು.