ಸಹಕಾರ ಕ್ಷೇತ್ರ ಗಟ್ಟಿಯಾದರೆ ಆರ್ಥಿಕ, ಸಾಮಾಜಿಕ ಚೈತನ್ಯ ಹೆಚ್ಚಾಗುತ್ತದೆ 37 ಲಕ್ಷ ರೈತರಿಗೆ 27 ಸಾವಿರ ಕೋಟಿ ರೂ.ಗಳ ಸಾಲ ನೀಡಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ

varthajala
0

 ಬೆಂಗಳೂರು, ನವಂಬರ್ 14 (ಕರ್ನಾಟಕ ವಾರ್ತೆ): ರಾಜ್ಯ ಸಹಕಾರ ಸಂಘದಿಂದ 37 ಲಕ್ಷ ರೈತರಿಗೆ 27 ಸಾವಿರ ಕೋಟಿ ರೂ.ಗಳ ಸಾಲ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.


ಸಹಕಾರ ಇಲಾಖೆಯ ವತಿಯಿಂದ  ಬೆಂಗಳೂರು ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ “72ನೇ ಅಖಿಲ ಭಾರತ ಸಹಕಾರ ಸಪ್ತಾಹ-2025”  ಕಾರ್ಯಕ್ರಮದಲ್ಲಿ  ಇಂದು ನಿಧನರಾದ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಒಂದು ನಿಮಿಷದ ಮೌನಾಚರಿಸಿ ಸಂತಾಪ ಸೂಚಿಸಿದ ನಂತರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ, ಸಹಕಾರ ಪಿತಾಮಹರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ, ಮಾತನಾಡಿದ ಮುಖ್ಯಮಂತ್ರಿಗಳು, ರೂ. 5.00 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ವಿತರಿಸಲಾಗುವುದು. ರೂ. 10.00 ಲಕ್ಷದ ವರೆಗೆ ಶೇ.3ರ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಇದೆಲ್ಲಾ ಸಾಧ್ಯವಾದದ್ದು ಸಹಕಾರ ಸಂಘದಿಂದ ಎಂದರು.

ಸಹಕಾರ ಕ್ಷೇತ್ರ ಗಟ್ಟಿಯಾದರೆ ಆರ್ಥಿಕ, ಸಾಮಾಜಿಕ ಚೈತನ್ಯ ಹೆಚ್ಚಾಗುತ್ತದೆ.  ಗ್ರಾಮೀಣ ಭಾರತದ ಪ್ರಗತಿಗಾಗಿ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂ ಅವರು ಸಹಕಾರ ಕ್ಷೇತ್ರಕ್ಕೆ  ಚೈತನ್ಯ ನೀಡಿದರು. ಯಾವುದೇ ಗ್ರಾಮ ಅಭಿವೃದ್ಧಿಯಾಗಬೇಕಾದರೆ ಆ ಗ್ರಾಮದಲ್ಲಿ ಒಂದು ಶಾಲೆ, ಒಂದು ಸಹಕಾರಿ ಸಂಘ, ಒಂದು ಆಸ್ಪತ್ರೆ ಇರÀಬೇಕು. ಆ ಮೂಲಕ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ನೆಹರು ಅವರು ನಂಬಿದ್ದರು.  ಮಹಾತ್ಮಗಾಂಧಿಯವರ ಅಭಿಪ್ರಾಯವು ಸಹ ಇದೇ ಆಗಿತ್ತು ಎಂದರು.
 
ಏಷ್ಯಾದಲ್ಲೇ ಮೊದಲ ಬಾರಿಗೆ ಸಹಕಾರಿ ಬ್ಯಾಂಕ್ ಸ್ಥಾಪನೆಯಾಗಿದ್ದು ನಮ್ಮ ರಾಜ್ಯದಲ್ಲಿ. ಹೀಗಾಗಿ ಕರ್ನಾಟಕವನ್ನು ಭಾರತದ ಸಹಕಾರ ಕ್ಷೇತ್ರದ ರಾಜಧಾನಿ ಎಂದು ಕರೆಯುತ್ತಾರೆ. ರಾಜ್ಯದಲ್ಲಿ ಪ್ರತಿ ದಿನ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು,  ಇದು ಸಹಕಾರಿ ಚಳವಳಿ ಮೂಲಕ ಬೆಳೆದ ಹಾಲು ಮಹಾ ಮಂಡಳಗಳ ಮಹತ್ವದ ಸಾಧನೆ. ಹಾಲು ಉತ್ಪಾದಕರ ಸಂಘಗಳು ಚಳುವಳಿ ಸ್ವರೂಪದಲ್ಲಿ ನಡೆದು ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರು ಹಾಲನ್ನು ನೇರವಾಗಿ ಉತ್ಪಾದಕರ ಸಂಘಗಳಿಗೆ ಸರಬರಾಜು ಮಾಡುವಂತಾಗಿದೆ. ಸಹಕಾರ ಕ್ಷೇತ್ರದಿಂದಾಗಿ ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ದೊಡ್ಡ ಚೈತನ್ಯ ಸಿಕ್ಕಿದೆ. ಲಕ್ಷಾಂತರ ಕುಟುಂಬಗಳ  ಆರ್ಥಿಕ ಅಭಿವೃದ್ಧಿಗೆ ದಾರಿಯಾಗಿದೆ ಎಂದರು.
 
ನಾನು ಮೊದಲಿಗೆ ಮುಖ್ಯಮಂತ್ರಿಯಾಗಿ ಹಾಲಿನ ಪೆÇ್ರೀತ್ಸಾಹ ಮೊತ್ತವನ್ನು ಲೀಟರಿಗೆ 3 ರೂಪಾಯಿ ಮಾಡಿದ್ದೆ. ಈಗ ಪ್ರೋತ್ಸಾಹ ಧನವನ್ನು ಲೀಟರಿಗೆ 5 ರೂಪಾಯಿಗೆ ಹೆಚ್ಚಿಸಿ ಪ್ರತಿ ದಿನ ಸರ್ಕಾರದಿಂದ 5 ಕೋಟಿ ರೂಪಾಯಿ ಸಹಾಯಧನವನ್ನು ಹಾಲು ಉತ್ಪಾದಕರಿಗೆ ನೀಡಲಾಗುತ್ತಿದೆ. 40 ಲಕ್ಷ ರೈತರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಆಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ  ಪುರಸ್ಕøತರಿಗೆ ‘ಸಹಕಾರ ರತ್ನ' ಪ್ರಶಸ್ತಿಯನ್ನು ಪ್ರದಾನ ಮಾಡಿದರು ಹಾಗೂ ಸಹಕಾರ ವಾರಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಜಿ.ಟಿ.ದೇವೇಗೌಡ  ಅವರು, ಪ್ರತಿ ವರ್ಷದಂತೆ ಈ ವರ್ಷವು ಭಾರತ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ. ಇಂದು ರಾಜ್ಯ ಸಹಕಾರ ಮಂಡಳದ ಆವರಣದಲ್ಲಿ ರಾಜ್ಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಸಹಕಾರ ಮುಖಂಡರಾಗಿದ್ದ ಬಿ.ಎಸ್.ವಿಶ್ವನಾಥ್ ರವರ ಪುತ್ಥಳಿ ಅನಾವರಣ ಗೊಳಿಸಲಾಗಿದೆ ಎಂದರು.

ರಾಜ್ಯಾದ್ಯಂತ ನವೆಂಬರ್ 14 ರಿಂದ 20ರ ವರೆಗೆ 72ನೇ ಸಹಕಾರ ಸಪ್ತಾಹ ಆಚರಿಸಲಾಗುವುದು. ಇಂದು ಬೆಂಗಳೂರಿನಲ್ಲಿ ಉದ್ಘಾಟನೆಯಾಗಿದೆ. ನವೆಂಬರ್ 20 ರಂದು ಚಾಮರಾಜನಗರದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ವಸತಿ ಸಹಕಾರ ಮಹಾಮಂಡಳ ನಿಯಮಿತದ ಅಧ್ಯಕ್ಷರಾದ ಎಸ್.ಟಿ.ಸೋಮಶೇಖರ್, ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿಯಮಿತದ ಅಧ್ಯಕ್ಷರಾದ ಕೆ.ಷಡಕ್ಷರಿ, ಸಹಕಾರ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎಸ್.ಬಿ.ಶೆಟ್ಟಣ್ಣನವರ್, ಸಹಕಾರ ಸಂಘಗಳ ನಿಬಂಧಕರಾದ ಟಿ.ಹೆಚ್.ಎಂ. ಕುಮಾರ್, ಸಹಕಾರ ರತ್ನ ಪ್ರಶಸ್ತಿ ಪುರಸ್ಕøತರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Post a Comment

0Comments

Post a Comment (0)