ನವೆಂಬರ್ 04, ಬೆಂಗಳೂರು : ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಉತ್ಸವವಾದ “ಕಲೆಗಳ ಉತ್ಸವ” ಕಾರ್ಯಕ್ರಮವು ಬೆಂಗಳೂರಿನ ವಿಜಯ ಕಾಲೆಜ್ ಆಡಿಟೋರಿಯಂನಲ್ಲಿ ವಿಜೃಂಭಣೆಯಿಂದ ನಡೆಯಿತು. ಹಲವಾರು ಅನುಭವಿ ಹಾಗೂ ಉದಯೋನ್ಮುಖ ಕಲಾವಿದರ ನೃತ್ಯ ಪ್ರದರ್ಶನವು ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕೈಗಾರಿಕೋದ್ಯಮಿ ಹಾಗೂ ಕಲಾ ಪೋಷಕರಾದ ಸಹಕಾರ ರತ್ನ ಡಾ.ಬಿ.ಎಂ.ಉಮೇಶ್ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ “ಭಾರತವು ನೃತ್ಯಗಳ ದೇಶ. ನಮ್ಮ ದೇಶದ ಪ್ರತಿ ಪ್ರಾಂತ್ಯದಲ್ಲೂ ನೃತ್ಯಕ್ಕೆ ತಮ್ಮದೇ ಆದ ಶೈಲಿ, ಸಂಸ್ಕೃತಿ, ಮತ್ತು ತತ್ವಗಳಿವೆ. ಪ್ರತಿ ನೃತ್ಯವೂ ಒಂದು ಕಥೆ ಹೇಳುತ್ತದೆ. ಅದು ದೇವರ ಕುರಿತು ಆಗಿರಬಹುದು, ಮಾನವನ ಭಾವನೆಗಳ ಕುರಿತು ಆಗಿರಬಹುದು ಅಥವಾ ನಿತ್ಯ ಜೀವನದ ಕುರಿತು ಆಗಿರಬಹುದು. ನೃತ್ಯವೆಂದರೆ ಕೇವಲ ಅಂಗಗಳ ಚಲನೆಯಲ್ಲ, ಅದು ಮನಸ್ಸಿನ ಚಲನೆ. ಪ್ರತಿ ತಾಳ, ಪ್ರತಿ ಭಾವ, ಪ್ರತಿ ಹೆಜ್ಜೆಯ ಹಿಂದೆ ಒಂದು ತತ್ವವಿದೆ. ಅದು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ.” ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಹಿರಿಯ ಪತ್ರಕರ್ತ ಮತ್ತು ಕಲಾ ವಿಮರ್ಶಕರಾದ ಲೇಪಾಕ್ಷಿ ಸಂತೋಷ ರಾವ್, ಚಲನಚಿತ್ರ ನಟರಾದ ಶಿವಕುಮಾರ್ ಆರಾಧ್ಯ, ನೃತ್ಯದರ್ಪಣ್ ಸ್ಕೂಲ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ನ ವೀಣಾ ಭಟ್, ಸಾಧನಾ ನೃತ್ಯ ಕೇಂದ್ರದ ಸಂಸ್ಥಾಪಕರಾದ ಭಾವನಾ ಶಂಕರ್, ಕಲೆಗಳ ಉತ್ಸವದ ನಿರ್ದೇಶಕರಾದ ಡಾ.ರಾಘಶ್ರೀ ಎಸ್ ಭಾರದ್ವಾಜ್, ಕಲೆಗಳ ಉತ್ಸವದ ಸ್ಥಾಪಕರಾದ ನಾಗೇಂದ್ರ ಎಸ್ ಗೌಡ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.


