*ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದಿಂದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ 101ನೇ ಜನ್ಮದಿನ ಆಚರಣೆ*

varthajala
0

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ವತಿಯಿಂದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜನ್ಮದಿನವನ್ನು ಭವ್ಯವಾಗಿ ಆಚರಿಸಲಾಯಿತು. ಶಾಸಕ ಅಶ್ವಥ್ ನಾರಾಯಣ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದ ಇಬ್ಬರು ಸಾಧಕರಿಗೆ ವಾಜಪೇಯಿ ಅವರ ಹೆಸರಿನಲ್ಲಿ “ಅಟಲ್ ಪುರಸ್ಕಾರ” ಪ್ರದಾನ ಮಾಡಲಾಯಿತು. ಗೋವಿಂದ ರಂಗರಾಜನ್, ಡಾ. ಚಂದ್ರಶೇಖರ್ ಶೆಟ್ಟಿ ಹಾಗೂ ಡಾ. ನಾಗರಾಜ್ ಅವರಿಗೆ ಈ ಗೌರವ ಲಭಿಸಿತು. ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ ಹಾಗೂ ಶಾಸಕ ಅಶ್ವಥ್ ನಾರಾಯಣ್ ಅವರು ಪ್ರಶಸ್ತಿಗಳನ್ನು ಪ್ರದಾನಿಸಿದರು.


ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಅಟಲ್ ಬಿಹಾರಿ ವಾಜಪೇಯಿ ಅವರು ಸಣ್ಣ ಕುಟುಂಬದಿಂದ ಬಂದ ನಾಯಕರಾಗಿದ್ದು, ರಾಜಕೀಯ ಜೀವನದ ಆರಂಭದಲ್ಲಿ ಅನೇಕ ಹೋರಾಟಗಳನ್ನು ಎದುರಿಸಿದವರು ಎಂದು ಸ್ಮರಿಸಿದರು. ಜನಸಂಘ ಹಾಗೂ ಆರ್‌ಎಸ್‌ಎಸ್ ಜೊತೆ ನಿರಂತರ ಹೋರಾಟ ನಡೆಸಿ, ಮೊದಲಿಗೆ ವಿದೇಶಾಂಗ ಸಚಿವರಾಗಿ, ಬಳಿಕ ವಿಪಕ್ಷ ನಾಯಕರಾಗಿ ದೇಶಕ್ಕೆ ಸೇವೆ ಸಲ್ಲಿಸಿದರು ಎಂದರು. ಅಡ್ವಾಣಿ ಅವರ ಜೊತೆಗೂಡಿ ಎರಡು ಸ್ಥಾನಗಳಷ್ಟೇ ಹೊಂದಿದ್ದ ಪಕ್ಷವನ್ನು ರಾಷ್ಟ್ರ ಮಟ್ಟದ ಶಕ್ತಿಯಾಗಿಸುವಲ್ಲಿ ವಾಜಪೇಯಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.


ವಾಜಪೇಯಿ ಅವರು ದೇಶದಲ್ಲಿ ಚತುಷ್ಪಥ ರಸ್ತೆ ಯೋಜನೆಗೆ ಮೊದಲ ಆದ್ಯತೆ ನೀಡಿದ್ದು, ಆಹಾರ ಭದ್ರತೆಯಂತಹ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು. ಕರ್ನಾಟಕದಲ್ಲಿ ವಾಜಪೇಯಿ ಅವರ ಜನ್ಮದಿನವನ್ನು ‘ಸುಶಾಸನ ದಿನ’ವಾಗಿ ಆಚರಿಸುವಂತೆ ಕರೆ ನೀಡಿದ್ದು, ಅದನ್ನು ಕೆಂಪೇಗೌಡ ಪ್ರತಿಷ್ಠಾನದ ಮೂಲಕ ಅಶ್ವಥ್ ನಾರಾಯಣ್ ಆರಂಭಿಸಿರುವುದನ್ನು ಶ್ಲಾಘಿಸಿದರು.








ಇದೇ ವೇಳೆ ಅವರು ಇಂದಿನ ಆಡಳಿತ ವ್ಯವಸ್ಥೆಯ ಕುರಿತು ಆತಂಕ ವ್ಯಕ್ತಪಡಿಸಿ, “ವಾಜಪೇಯಿ ಅವರಿಗೆ ನಿಜವಾದ ಗೌರವ ಸಲ್ಲಿಸಬೇಕಾದರೆ ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ಕಾಣಬೇಕು” ಎಂದು ಹೇಳಿದರು. ರೈತರ ಸ್ಥಿತಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳ ಸ್ಥಿತಿ ಕುರಿತು ಪ್ರಶ್ನೆ ಎತ್ತಿದ ಅವರು, ಕರ್ನಾಟಕ ಸುಶಾಸನ ನೀಡಿದ ಮೊದಲ ರಾಜ್ಯವಾಗಿದ್ದು, ಅದನ್ನು ಮುಂದುವರೆಸಬೇಕಾದ ಅಗತ್ಯವಿದೆ ಎಂದರು.

ಮಾನವೀಯತೆ ಮತ್ತು ಮನುಷ್ಯತ್ವ ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಕುಮಾರಸ್ವಾಮಿ, ಸುಶಾಸನ ದಿನವು ಸಮಾಜಕ್ಕೆ ನೆಮ್ಮದಿಯ ಬದುಕು ನೀಡುವ ದಿನವಾಗಬೇಕು ಎಂದು ಆಶಿಸಿದರು.

Post a Comment

0Comments

Post a Comment (0)