ಬೆಂಗಳೂರು: 1980 ರಿಂದ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಜಾನಪದ ಅಕಾಡೆಮಿಯ ಯೋಜನೆಗಳಲ್ಲಿ ಜಾನಪದ ಕಲೆಗಳಿಗೆ ತನ್ನನ್ನು ತಾನು ಅರ್ಪಿಸಿಕೊಂಡಿರುವ ಜಾನಪದ ಕಲಾವಿದರಿಗೆ, ಜಾನಪದ ಕ್ಷೇತ್ರ ತಜ್ಞರಿಗೆ ವಾರ್ಷಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸುವುದು ಬಹು ಮುಖ್ಯ ಭಾಗ. ಈ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯು 1980 ರಿಂದ 2024ನೇ ಸಾಲಿನ ವರೆಗೆ 1104 ಜಾನಪದ ಕಲಾವಿದರು, 115 ವಿದ್ವಾಂಸರು ಸೇರಿದಂತೆ ಅಕಾಡೆಮಿಯು ಒಟ್ಟಾರೆ 1219 ಗೌರವ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದೆ. 2025 ನೇ ಸಾಲಿನಲ್ಲಿ ರಾಜ್ಯದ 31 ಜಿಲ್ಲೆಗಳಿಂದ 30 ಹಿರಿಯ ಜಾನಪದ ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿ, ಇಬ್ಬರು ಜಾನಪದ ವಿದ್ವಾಂಸರಿಗೆ ತಜ್ಞ ಪ್ರಶಸ್ತಿ, 2024 ನೇ ಸಾಲಿನ 02 ಮಂದಿಗೆ ಪುಸ್ತಕ ಬಹುಮಾನವನ್ನು ನೀಡಲಾಗುವುದು. ಕಲಾವಿದರಿಗೆ ನೀಡುವ ವಾರ್ಷಿಕ ಗೌರವ ಪ್ರಶಸ್ತಿಯ ಮೊತ್ತ ರೂ.25,000/- ಇಬ್ಬರು ಕ್ಷೇತ್ರ ತಜ್ಞರಿಗೆ ತಲಾ ರೂ.50,000/-ಗಳು ಹಾಗೂ ಪುಸ್ತಕ ಬಹುಮಾನಿತರಿಗೆ ತಲಾ ರೂ.25,000/- ಗಳ ಪ್ರಶಸ್ತಿ ಮೊತ್ತದ ಜೊತೆಗೆ ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲ ನೀಡಿ ಗೌರವಿಸಲಾಗುವುದು.
2025ನೇ ಸೆಪ್ಟೆಂಬರ್ 18 ರಂದು ಬೆಂಗಳೂರಿನಲ್ಲಿ ನಡೆದ ಸರ್ವಸದಸ್ಯರ ಸಭೆಯ ತೀರ್ಮಾನದಂತೆ ಜಾನಪದ ಕಲಾವಿದರು ಮತ್ತು ತಜ್ಞರನ್ನು 2025 ನೇ ಸಾಲಿನ ವಾರ್ಷಿಕ ಗೌರವ ಮತ್ತು ತಜ್ಞ ಪ್ರಶಸ್ತಿ ಗಳಿಗೆ ಆಯ್ಕೆ ಮಾಡಲಾಗಿದೆ.
ಬೆಂಗಳೂರು ನಗರದ ಸಿದ್ದರಾಜು ತಂದೆ ಮಾದೇಗೌಡ ಅವರನ್ನು ನೀಲಗಾರರ ಪದ ಮತ್ತು ತಂಬೂರಿಪದಗಳು, ಬೆಂಗಳೂರು ಗ್ರಾಮಾಂತರದ ಹಳಿಯೂರು ಗ್ರಾಮದ ಶ್ರೀಮತಿ ಬಚ್ಚಮ್ಮ ಅವರನ್ನು ಸೋಬಾನೆ ಪದ, ತತ್ವಪದ, ಸಂಪ್ರದಾಯದ ಪದ, ಬೆಂಗಳೂರು ದಕ್ಷಿಣ ಜಿಲ್ಲೆಯ (ರಾಮನಗರ) ಚನ್ನಪಟ್ಟಣ ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಹೊನ್ನಿಗನಹಳ್ಳಿ ಗ್ರಾಮದ ಬಿ. ಸಿದ್ದರಾಜಯ್ಯ ಅವರನ್ನು ಜಾನಪದ ಗಾಯನ, ಕೋಲಾರದ ಕೆ.ಜಿ.ಎಫ್ ತಾಲ್ಲೂಕು ದೊಡ್ಡಕಮಲಿ ಅಂಚೆಯ ಭೀಮಗಾನಹಳ್ಳಿಯ ಶ್ರೀಮತಿ ಸೀತಮ್ಮ ಗಂಡ ಜಯರಾಮಪ್ಪ ಅವರನ್ನು ತತ್ವಪದ, ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಗ್ರಾಮದ ಕೆ ಎಂ ನಾರಾಯಣ ಸ್ವಾಮಿ ಅವರನ್ನು ಕೀಲು ಕುದುರೆ, ತುಮಕೂರಿನ ಗೊಲ್ಲರಹಟ್ಟಿ ಸಾಸಲು ರೇವಣ್ಣ ಅವರಿಗೆ ಅಲಗು ಕುಣಿತ, ದಾವಣಗೆರೆಯ ಹರಿಹರ ಕೇಶವ ನಗರದ ಜಿ. ಪರಮೇಶ್ವರಪ್ಪ ಕತ್ತಿಗೆ ತಂದೆ ಗುಂಡಾಭಕ್ತರ ನಂದಿಗಾವಿ ಬಸಪ್ಪ ಅವರನ್ನು ತತ್ವಪದ, ಚಿತ್ರದುರ್ಗದ ಐರಹಳ್ಳಿ ಅಂಚೆಯ ಆಹಿತೋಳಿನ ಜಿ. ಎನ್. ವಿರೂಪಾಕ್ಷಪ್ಪ ಅವರನ್ನು ಜಾನಪದ ಸಂಗೀತ, ಶಿವಮೊಗ್ಗದ ತೀರ್ಥಹಳ್ಳಿ ತಾಲ್ಲೂಕು ಕನಸವಳ್ಳಿಯ ಕೆ ಎಸ್ ಲಿಂಗಪ್ಪ ಅವರನ್ನು ಅಂಟಿಕೆ ಪಿಂಟಿಕೆ, ಮೈಸೂರು ಟಿ. ನರಸೀಪುರ ತಾಲ್ಲೂಕು ಬನ್ನೂರು ಹೋಬಳಿ ಯಾಚೇನಹಳ್ಳಿಯ ಶ್ರೀಮತಿ ಚನ್ನಾಜಮ್ಮ ಗಂಡ ಸಿದ್ದಯ್ಯ ಅವರನ್ನು ಸೋಬಾನೆ ಪದ ಮತ್ತು ಜಾನಪದ ಗಾಯನ, ಮಂಡ್ಯ ಮಳವಳ್ಳಿ ತಾಲ್ಲೂಕು ಕಿರುಗಾವಲು ಹೋಬಳಿ ತಳಳಗವಾದಿಯ ಹೊನ್ನಯ್ಯ ತಂದೆ ಲೇಟ್ ಭೂಮಿಗೌಡ ಅವರನ್ನು ಕೋಲಾಟ, ಹಾಸನ ದುದ್ದ ಗ್ರಾಮದ ಯೋಗೇಂದ್ರ ದುದ್ದು ಅವರನ್ನು ಗೀಗೀ ಪದ, ಲಾವಣಿ, ತತ್ವಪದ ಮತ್ತು ಭಜನೆ, ಚಿಕ್ಕಮಗಳೂರು ಅಜ್ಜಂಪುರ ತಾಲ್ಲೂಕು ಅಂಗತರಘಟ್ಟೆ ಅಂಚೆ ಹೂಲಿಹಳ್ಳಿಯ ರವಿ ಹೆಚ್ ಎಂ ತಂದೆ ಮಹಾಲಿಂಗಪ್ಪ ಅವರನ್ನು ವೀರಗಾಸೆ, ಚಾಮರಾಜನಗರ ಬಿಳಿಗಿರಿರಂಗನಬೆಟ್ಟ ಯರಕನಗದ್ದೆಯ ಬಸವರಾಜು ಅವರನ್ನು ಗೊರುಕನ ನೃತ್ಯ, ದಕ್ಷಿಣ ಕನ್ನಡ ಕಿನ್ನಿಗೋಳಿ ಅಂಚೆ ಮೆನ್ನಬೆಟ್ಟು ಕೊರಗ ಕಾಲೋನಿಯ ಶ್ರೀಮತಿ ಸುಮತಿ ಕೊರಗ ಗಂಡ ಶ್ಯಾಮ ಕೊರಗ ಅವರನ್ನು ಕೊರಗರ ಡೋಲು, ಉಡುಪಿ ಕಾರ್ಕಳ ತಾಲ್ಲೂಕು ಕಬ್ಬಿನಾಲೆ ಗ್ರಾಮದ ಶ್ರೀಮತಿ ಗುಲಾಬಿ ಗೌಡ್ತಿ ಅವರನ್ನು ನಾಟಿ ವೈದ್ಯ, ಕೊಡಗು ವಿರಾಜಪೇಟೆ ತಾಲ್ಲೂಕು ಹೆಗ್ಗಳ ಅಂಚೆ ಕೇದಮುಳ್ಳೂರಿನ ಶ್ರೀಮತಿ ಅಮ್ಮಣಿ ಅವರನ್ನು ಸೂಲಗಿತ್ತಿ ಹಾಗೂ ಕುಡಿಯ ಜನಾಂಗದ ಹಾಡುಗಾರಿಕೆ, ಬೆಳಗಾವಿ ಮೂಡಲಗಿ ತಾಲ್ಲೂಕು ಕಲ್ಲೋಳಿಯ ಭೀಮಪ್ಪ ಸಿದ್ಧಪ್ಪ ಮುತ್ನಾಳ್ ತಂದೆ ಸಿದ್ಧಪ್ಪ ಮುತ್ನಾಳ್ ಅವರನ್ನು ಪುರವಂತಿಕೆ, ಧಾರವಾಡ ಜೈಭೀಮನಗರದ ಪ್ರಕಾಶ ಮಲ್ಲಿಗವಾಡ ಅವರನ್ನು ಜಾನಪದ ನೃತ್ಯ, ವಿಜಯಪುರ ಇಂಡಿ ತಾಲ್ಲೂಕಿನ ಬೆನಕನಹಳ್ಳಿ ಅಂಚೆ ಹರಳಯ್ಯ ಹಟ್ಟಿಯ ಜ್ಯೋತಿರ್ಲಿಂಗ ಹೂನಕಟ್ಟಿ ಅವರನ್ನು ಜಾನಪದ ಗಾಯನ, ಬಾಗಲಕೋಟೆ ಅಮೀನಗಡ ಲಕ್ಷ್ಮೀನಗರದ ಚಂದ್ರಲಿಂಪ್ಪ ನಿಂಗಪ್ಪ ಬಸರಕೋಡ ಅವರನ್ನು ಪುರುವಂತಿಕೆ, ಉತ್ತರಕ್ನಡ ಹೊನ್ನಾವರ ತಾಲ್ಲೂಕು ಶಿರೂರಿನ ಶ್ರೀಮತಿ ಗೌರಿ ನಾಗಪ್ಪ ನಾಯ್ಕ ಅವರನ್ನು ಸುಗ್ಗಿ ಹಾಡುಗಳು, ಜಾನಪದ ಕಥೆ, ಸಂಪ್ರದಾಯದ ಪದಗಳು, ಹಾವೇರಿಯ ರಾಣಿಬೆನ್ನೂರು ತಾಲ್ಲೂಕು ತುಮ್ಮಿಕಟ್ಟೆ ಶಿವಾಜಿನಗರದ ಬಿಕ್ಷಾಪತಿ ಮೋತಿ ಅವರನ್ನು ಹಗಲುವೇಷ, ಗದಗ ನರಗುಂದ ತಾಲ್ಲೂಕು ಕೊಣ್ಣುರಿನ ಕಾಶಿಮಸಾಬ ಹುಸೇನಸಾಬ ಅವರನ್ನು ಹೆಜ್ಜೆ ಮೇಳ, ಕಲಬುರಗಿ ಅಫಜಲಪುರ ತಾಲ್ಲೂಕು ಶಿವೂರು ಗ್ರಾಮದ ಭಾಗಪ್ಪ ತಂದೆ ಶೇಕಪ್ಪ ಸೋಮಜನ ಅವರನ್ನು ತತ್ವಪದ, ಬೀದರ್ ಔರಾದ್ ತಾಲ್ಲೂಕು ಜೋಜನಗ್ರಾಮದ ಶ್ರೀಮತಿ ಇಂದ್ರಮ್ಮ ಅವರನ್ನು ಮೋಹರಂ ಪದ, ರಾಯಚೂರು ಮಾನ್ವಿ ತಾಲ್ಲೂಕು ದಿದ್ದಗಿಯ ಯಶವಂತಗೌಡ ತಂದೆ ಅಮರೇಗೌಡ ಅವರನ್ನು ತತ್ವಪದ, ಕೊಪ್ಪಳ ಕಾರಟಗಿ ತಾಲ್ಲೂಕು ಸಿದ್ದಾಪುರ ಮಲ್ಲಿಕಾರ್ಜುನ ನಗರದ ಕಿಂಡ್ರಿ ಲಕ್ಷ್ಮೀಪತಿ ಅವರನ್ನು ಸುಡುಗಾಡು ಸಿದ್ದರು, ಹಾಗೂ ಯಾದಗಿರಿಯ ಶೋರಾಪುರ ತಾಲ್ಲೂಕು ನರಸಿಂಗಪೇಟ ಕುಂಬಾರಪೇಟದ ಹಣಮಂತ ಅವರನ್ನು ತತ್ವಪದ ಕಲಾ ಪ್ರಕಾರಗಳಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅದೇ ರೀತಿ ತುಮಕೂರಿನ ಶಿರಾದ ಕಾಳಿದಾಸ ನಗರದ ಗಡಿನಾಡು ಜಾನಪದ ಕೇಂದ್ರದ ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಅವರನ್ನು ಡಾ. ಜೀಶಂ.ಪ ತಜ್ಞ ಪ್ರಶಸ್ತಿಗೆ, ಕಲಬುರಗಿಯ ಕಲಬುರಗಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರು ಹಾಗೂ ನಿರ್ದೇಶಕರಾದ ಡಾ. ಎಚ್.ಟಿ.ಪೋತೆ ಅವರನ್ನು ಡಾ. ಬಿ.ಎಸ್. ಗದ್ದಿಗಿಮಠ ತಜ್ಞ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬೆಂಗಳೂರು ಸಹಕಾರ ನಗರ ಅಂಚೆ ಸಂಜೀವಿನಿ ನಗರದ ಕನ್ನಡ ಪ್ರಾಧ್ಯಾಪಕರಾದ ಡಾ. ವೀರಾಸಾಬಿಹಳ್ಳಿ ಶಿವಣ್ಣ ಅವರನ್ನು ಕಡುಗೊಲ್ಲರ ಸಂಸ್ಕøತಿ ಮತ್ತು ಕಾವ್ಯಗಳು ಪುಸ್ತಕದ ವಿಚಾರ ವಿಮರ್ಶೆ ಪ್ರಕಾರದಡಿ ಹಾಗೂ ಕೂಡ್ಲಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕನ್ನಡ ಭಾಷಾ ಉಪನ್ಯಾಸಕರಾದ ಡಾ. ಇಮಾಮ್ ಸಾಹೇಬ್ ಹಡಗಲಿ ಅವರನ್ನು ಕನಕಗಿರಿ ಸೀಮೆಯ ಸ್ಥಳನಾಮಗಳಯ ಪುಸ್ತಕದ ಸಂಶೋಧನೆ ಪ್ರಕಾರದಡಿ 2024ನೇ ಸಾಲಿನ ಪುಸ್ತಕ ಬಹುಮಾನಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.