ಬೆಂಗಳೂರು: ಕೃಷಿ ಪ್ರಧಾನವಾದ ನಮ್ಮ ದೇಶದ ಶೇಕಡ 70 ರಷ್ಟು ಕೃಷಿಕರು ನೆಮ್ಮದಿಯಿಂದ ಜೀವನ ನಡೆಸಬೇಕಾದರೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಇತರೆ ಕ್ಷೇತ್ರಗಳಿಗಿಂತ ಕೃಷಿಗೆ ಇನ್ನೂ ಹೆಚ್ಚಿನ ಒತ್ತು ನೀಡಬೇಕಾದ ಅನಿವಾರ್ಯ ಇದೆ ಎಂದು ಕೃಷಿ ಸಚಿವರಾದ ಎನ್. ಚೆಲುವರಾಯಸ್ವಾಮಿ ಅವರು ಅಭಿಪ್ರಾಯಪಟ್ಟರು. ಇಂದು ಕೃಷಿ ತಂತ್ರಜ್ಞರ ಸಂಸ್ಥೆಯು ಅರೆಕೆರೆ ಆಡಿಟೋರಿಯಂನಲ್ಲಿ ಸಮನ್ವಯ ಟ್ರಸ್ಟ್, ಫುಡ್ ಚೈನ್ ಕ್ಯಾಂಪೇನ್, ಐಸಿಎಆರ್-ಕೆವಿಕೆ ದಕ್ಷಿಣ ಕನ್ನಡ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಸನ್ಮಾನಿಸಿ ಮಾತನಾಡುತ್ತಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ರೈತರ ಜೀವನ ಅತ್ಯಂತ ಕಠಿಣ ಜೀವನ. ಈ ಕಠಿಣ ಜೀವನವನ್ನು ಅಪ್ಪಿಕೊಂಡು ಶ್ರದ್ಧೆಯಿಂದ ಯಾರು ಕೆಲಸ ಮಾಡುವರೋ ಅವರಿಗೆ ಭೂಮಿ ತಾಯಿ ಎಂದಿಗೂ ಮೋಸ ಮಾಡಿಲ್ಲ. ಹವಾಮಾನ ವೈಪರೀತ್ಯ, ಬೆಲೆ ಕುಸಿತ, ಇವೇ ಮುಂತಾದ ಸಮಸ್ಯೆಗಳ ನಡುವೆಯೂ ಲಕ್ಷಾಂತರ ರೈತರು ಕೃಷಿಯಲ್ಲಿ ನೆಮ್ಮದಿ ಜೀವನ ಮಾಡುತ್ತಿದ್ದಾರೆ. ರೈತ ದಿನಾಚರಣೆಯಂದು ಕೃಷಿ ತಂತ್ರಜ್ಞ ಸಂಸ್ಥೆಯು ಕೃಷಿಯಲ್ಲಿ ಸಾಧನೆ ಮಾಡಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದವರನ್ನು ಸನ್ಮಾನಿಸಿರುವುದು ಅತ್ಯಂತ ಹೆಮ್ಮೆಯ ವಿಚಾರ. ಕೃಷಿ ಸಾಧಕರಿಗೆ ಅಭಿನಂದಿಸಿರುವುದು ರಾಜ್ಯದ ಎಲ್ಲಾ ರೈತರಿಗೆ ಅಭಿನಂದನೆ ಮಾಡಿದಂತೆ. ಕೃಷಿ ಇಲಾಖೆ ವತಿಯಿಂದ ಜಿ.ಕೆ.ವಿ.ಕೆ ಯಲ್ಲಿ ಇದೇ 27 ರಂದು ರೈತ ದಿನಾಚರಣೆಯನ್ನು ಮುಖ್ಯಮಂತ್ರಿಯವರೊಂದಿಗೆ ಆಚರಿಸಲು ಉದ್ದೇಶಿಸಲಾಗಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಕೃಷಿಗೆ ಇನ್ನೂ ಹೆಚ್ಚಿನ ಒತ್ತು ನೀಡಬೇಕು.
December 23, 2025
0
ಎರಡುವರೆ ವರ್ಷದಲ್ಲಿ ನಮ್ಮ ಸರ್ಕಾರ ಕೃಷಿ ಕ್ಷೇತ್ರದಲ್ಲಿ ಅನೇಕ ಬದಲಾವಣೆಯನ್ನು ತರಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೌಲ್ಯವರ್ಧನೆ ಮಾಡುವಲ್ಲಿ, ಕೃಷಿ ಮಾರುಕಟ್ಟೆ, ಸಮಗ್ರ ಕೃಷಿ, ಸಾವಯವ ಕೃಷಿ ಮತ್ತು ಸುಸ್ಥಿರತೆ ಕೃಷಿಗಳಲ್ಲಿ ಅನೇಕ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದೇವೆ. ರೈತರಿಗೆ 5 ಸಾವಿರ ಕೋಟಿಗೂ ಹೆಚ್ಚು ಇನ್ಸೂರೆನ್ಸ್ ಕೊಡಿಸಲಾಗಿದೆ. ಅಲ್ಲದೆ ರೈತರಿಗೆ ಪ್ರೋತ್ಸಾಹ ನೀಡಲು ಸಹಾಯಧನ ಯೋಜನೆಯಡಿ ಏನೆಲ್ಲಾ ಯಂತ್ರಗಳನ್ನು ಕೊಡಲು ಸಾಧ್ಯ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸವನ್ನು ಮಾಡಲಾಗುತ್ತಿದೆ. ಇಲ್ಲಿಯವರೆಗೆ ಯಂತ್ರೋಪಕರಣ ಖರೀದಿಗಾಗಿ ರೈತರಿಗೆ 1500 ಕೋಟಿಗೂ ಹೆಚ್ಚು ಸಹಾಯಧನವನ್ನು ನೀಡಲಾಗಿದೆ. ವಿಶ್ವವಿದ್ಯಾಲಯಗಳಿಂದ ಸಂಶೋಧನೆ ನಡೆಸಿ ಅವರಿಗೆ ಅಧಿಕ ಇಳುವರಿ ನೀಡುವ ತಳಿಗಳನ್ನು ನೀಡುವ ಜೊತೆಗೆ, ಅವರಿಗೆ ಕೃಷಿಯಲ್ಲಿ ಮಾರ್ಗದರ್ಶನವನ್ನು ನೀಡಲಾಗುತ್ತಿದೆ. ಹಾಗೆಯೇ ರೈತರಿಗೆ ಕಂಡುಬರುವ ಸಮಸ್ಯೆಗಳನ್ನು ಸರ್ಕಾರದ ವತಿಯಿಂದ ಬಗೆಹರಿಸಲಾಗುತ್ತಿದೆ. ಮುಂದೆ ಕೂಡ ನಮ್ಮ ಸರ್ಕಾರ ರೈತರಿಗೆ ಪ್ರೋತ್ಸಾಹ ನೀಡುವಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಅಭಿನಂದನೆಗಳನ್ನು ಸಲ್ಲಿಸಿದ ಸಚಿವರು, ನಾಡಿನ ರೈತ ಬಾಂಧವರಿಗೆ ರೈತ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಎಫ್.ಕೆ.ಸಿ.ಸಿ.ಐ ನ ಹಿರಿಯ ಉಪಾಧ್ಯಕ್ಷರಾದ ಟಿ. ಸಾಯಿ ರಾಮ ಪ್ರಸಾದ್ ಅವರು ಮಾತನಾಡಿ, ಸರ್ ಎಂ. ವಿಶ್ವೇಶ್ವರಯ್ಯ ಅವರು ಪ್ರಾರಂಭಿಸಿದ ಈ ಸಂಸ್ಥೆಯು ಕೈಗಾರಿಕೆ, ವ್ಯಾಪಾರ, ಸೇವೆಗಳಲ್ಲಿ ಸರ್ಕಾರದ ಪಾಲಿಸಿಗಳಿಂದ ತೊಂದರೆಗಳಾದ ಸಂದರ್ಭದಲ್ಲಿ ಸರ್ಕಾರ ಮತ್ತು ಅವರ ನಡುವೆ ಸೇತುವೆಯಾಗಿ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು. ಕೃಷಿ ಮತ್ತು ಕೈಗಾರಿಕೆ ಒಟ್ಟಾಗಿ ಬೆಳೆಯಬೇಕು. ರೈತರು ರೈತರಾಗೇ ಉಳಿಯಬಾರದು, ಅವರು ಕೂಡ ಉದ್ಯಮಿಯಾಗಿ ಬೆಳೆಯಬೇಕು. ತಂತ್ರಜ್ಞಾನ ಮತ್ತು ಮಾರುಕಟ್ಟೆ ರೈತರಿಗೆ ತಲುಪಬೇಕು. ಈ ನಿಟ್ಟಿನಲ್ಲಿ ಎಫ್.ಕೆ.ಸಿ.ಸಿ.ಐ ಸಂಸ್ಥೆಯು ಕೆಲಸ ಮಾಡುತ್ತಿದೆ ಎಂದರು.
ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರಾದ ಡಾ.ಎ.ಬಿ.ಪಾಟೀಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿಕರು ಬೆಳೆಯಬೇಕಾದರೆ, ಕೃಷಿ ಉದ್ದಿಮೆಯಾಗಿ ಬೆಳೆಯಬೇಕು. ಅಧಿಕಾರಿಗಳು ಎದ್ದು ನಿಂತು ರೈತರನ್ನು ಗೌರವಿಸುವಂತಾಗಬೇಕು. ಎಂಜಿನಿಯರನ್ನು ಮನೆ ಕಟ್ಟುವ ಸಂದರ್ಭದಲ್ಲಿ, ಅನಾರೋಗ್ಯ ಸಂದರ್ಭದಲ್ಲಿ ವೈದ್ಯರನ್ನು, ವ್ಯಾಜ್ಯ ಸಂದರ್ಭದಲ್ಲಿ ವಕೀಲರನ್ನು ನೆನೆಯುತ್ತೇವೆ. ಆದರೆ ಪ್ರತಿದಿನ ಮೂರು ಹೊತ್ತು ಊಟ ಮಾಡುವಾಗ ರೈತನನ್ನು ನೆನೆಯಲೇ ಬೇಕು. ನಮ್ಮ ದೇಶದ 5ನೇ ಪ್ರಧಾನಮಂತ್ರಿಯಾಗಿದ್ದ ಚೌದ್ರಿ ಚರಣ್ ಸಿಂಗ್ ಅವರು ಕೃಷಿ ಕ್ಷೇತ್ರಕ್ಕೆ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಅವರ ಜನ್ಮದಿನವನ್ನು ರಾಷ್ಟ್ರೀಯ ರೈತ ದಿನವಾಗಿ ಆಚರಣೆ ಮಾಡಲಾಗುತ್ತಿದೆ. ಹಾಗಾಗಿ ಈ ದಿನದಂದು ಕೃಷಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ಸಮನ್ವಯ ಟ್ರಸ್ಟ್ನ ಸಂಸ್ಥಾಪಕರಾದ ಸುಮಂಗಳ ಕೆ.ಹೆಚ್ ಅವರು ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿದರು.
ಕೃಷಿಕರ ವಂದನಾ ಸಂಭ್ರಮದಲ್ಲಿ ಕೃಷಿ, ಶಿಕ್ಷಣ ಮತ್ತು ಕೃಷಿ ಯಂತ್ರೋಪಕರಣ ತಯಾರಿಕೆಯಲ್ಲಿ ಸಾಧನೆ ಮಾಡಿ ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಸತ್ಯನಾರಾಯಣ ಬೆಳೆರಿ, ಅಮೈ ಮಹಾಲಿಂಗ ನಾಯ್ಕ್, ಹರೇಕಳ ಹಾಜಬ್ಬ ಮತ್ತು ಅಬ್ದುಲ್ ಖಾದರ್ ನದಕಟ್ಟಿನ್ ಹಾಗೂ ಹೈನುಗಾರಿಕೆಯಲ್ಲಿ ಸಾಧನೆ ಮಾಡಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಎಂ.ಸಿ.ರಂಗಸ್ವಾಮಿ ಮತ್ತು ನಡೆದಾಡುವ ಕೃಷಿಕರ ಮಾರ್ಗದರ್ಶಕರೆಂದು ಹೆಸರುವಾಸಿಯಾಗಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಎಸ್.ವಿ. ಹಿತ್ತಲಮನಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ರೈತರಿಂದ ನೇರವಾಗಿ ಗ್ರಾಹಕರಿಗೆ ಕೃಷಿ ವಸ್ತುಗಳನ್ನು ತಲುಪಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ವೆಬ್ ಸೈಟ್ ಗೆ ಸಚಿವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೆ.ಎ.ಪಿ.ಪಿ.ಇ.ಸಿ ಯ ವ್ಯವಸ್ಥಾಪಕ ನಿರ್ದೇಶಕರಾದ ಸಿ.ಎನ್.ಶಿವಪ್ರಕಾಶ್, ಎಫ್.ಕೆ.ಸಿ.ಸಿ.ಐ ನ ಅಧ್ಯಕ್ಷರಾದ ರೂಪ ರಾಣಿ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಮಹಿಳಾ ಕೃಷಿ ಉದ್ಯಮಿಗಳು ತಾವು ತಯಾರಿಸಿದ ಆಹಾರ ಪದಾರ್ಥಗಳು ಮತ್ತು ಬೀಜಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಿದ್ದರು.