ಮಸ್ಕತ್‌ನಲ್ಲಿ “ಕರ್ನಾಟಕ ರಾಜ್ಯೋತ್ಸವ ವಿಶೇಷಾಂಕ–2025 ” ಲೋಕಾರ್ಪಣೆ

varthajala
0

 ಮಸ್ಕತ್: ಪರದೇಶದಲ್ಲಿದ್ದರೂ ತಾಯ್ನುಡಿ ಕನ್ನಡದ ಮೇಲಿನ ಪ್ರೀತಿ ಮತ್ತು ಸಾಹಿತ್ಯಾಸಕ್ತಿ ಅಚಲವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿ, ಒಮಾನ್‌ನ ಮಸ್ಕತ್ ನಗರದಲ್ಲಿ “ಕರ್ನಾಟಕ ರಾಜ್ಯೋತ್ಸವ ವಿಶೇಷಾಂಕ–2025” ಕೃತಿ ಲೋಕಾರ್ಪಣೆಗೊಂಡಿತು.ಕರ್ನಾಟಕ ಜಾನಪದ ಪರಿಷತ್ (ಒಮಾನ್ ಘಟಕ) ವತಿಯಿಂದ ಆಯೋಜಿಸಲಾದ “ಶಿಶಿರ ಕಾವ್ಯ ಸಂಜೆ” ಕಾರ್ಯಕ್ರಮದ ಅಂಗವಾಗಿ ಈ ವಿಶೇಷಾಂಕವನ್ನು ಸಡಗರದಿಂದ ಅನಾವರಣಗೊಳಿಸಲಾಯಿತು. ಒಮಾನ್ ಕನ್ನಡಿಗರ ಸಾಹಿತ್ಯ ಬಳಗದ ಹೆಮ್ಮೆಯ ಪ್ರಕಟಣೆಯಾಗಿರುವ ಈ ಸಂಚಿಕೆ, ಬಳಗದ ಸಂಚಾಲಕರಾದ ಶ್ರೀ ಪಿ.ಎಸ್. ರಂಗನಾಥ್ ಅವರ ಸಂಪಾದಕತ್ವದಲ್ಲಿ ರೂಪುಗೊಂಡಿದೆ. 


ಈ ವಿಶೇಷಾಂಕದಲ್ಲಿ ಒಮಾನ್‌ನಲ್ಲಿ ನೆಲೆಸಿರುವ ಸುಮಾರು ೩೦ಕ್ಕೂ ಹೆಚ್ಚು ಕನ್ನಡಿಗ ಬರಹಗಾರರು ತಮ್ಮ ಸಾಹಿತ್ಯಿಕ ಅಭಿವ್ಯಕ್ತಿಯನ್ನು ದಾಖಲಿಸಿದ್ದಾರೆ. ಕಥೆಗಳು, ಕವನಗಳು, ವೈಚಾರಿಕ ಲೇಖನಗಳು ಹಾಗೂ ಚುಟುಕುಗಳು ಸಂಚಿಕೆಯ ವಿಶೇಷ ಆಕರ್ಷಣೆಯಾಗಿವೆ.

ಈ ಹಿಂದೆ “ಅರಬ್ಬರ ನಾಡಿನಲ್ಲಿ ಕನ್ನಡಿಗರು” ಹಾಗೂ “ಬಿಯಾಂಡ್ ದ ಹೊರೈಜನ್” ಎಂಬ ಕೃತಿಗಳನ್ನು ಪ್ರಕಟಿಸಿ ಸಾಹಿತ್ಯಾಸಕ್ತರ ಮೆಚ್ಚುಗೆ ಪಡೆದಿದ್ದ ಒಮಾನ್ ಕನ್ನಡಿಗರ ಸಾಹಿತ್ಯ ಬಳಗವು, ಆ ಸಾಹಿತ್ಯ ಯಾನದ ಮುಂದುವರಿದ ಭಾಗವಾಗಿ ಈ ರಾಜ್ಯೋತ್ಸವ ವಿಶೇಷಾಂಕವನ್ನು ಹೊರತಂದಿದೆ.ಹಿರಿಯ ಅನುಭವಿ ಬರಹಗಾರರ ಜೊತೆಗೆ ಯುವ ಪ್ರತಿಭೆಗಳಿಗೂ ಅವಕಾಶ ನೀಡಿರುವುದು ಸಂಚಿಕೆಯ ಮತ್ತೊಂದು ವೈಶಿಷ್ಟ್ಯ. ವಿದೇಶಿ ನೆಲೆಯಲ್ಲೂ ಕನ್ನಡದ ಕಹಳೆಯನ್ನು ಊದುತ್ತಿರುವ ಬರಹಗಾರರ ಶ್ರಮವನ್ನು ಸಾಹಿತ್ಯ ಪ್ರೇಮಿಗಳು ಶ್ಲಾಘಿಸಿದರು.ಒಟ್ಟಾರೆಯಾಗಿ “ಶಿಶಿರ ಕಾವ್ಯ ಸಂಜೆ” ಕಾರ್ಯಕ್ರಮವು ಕಾವ್ಯ ರಸದೊಂದಿಗೆ ಮೌಲ್ಯಯುತ ಸಾಹಿತ್ಯ ಕೃತಿಯ ಲೋಕಾರ್ಪಣೆಯ ಮೂಲಕ ಕನ್ನಡಿಗರಲ್ಲಿ ನಾಡು–ನುಡಿಯ ಅಭಿಮಾನವನ್ನು ಮತ್ತೊಮ್ಮೆ ಮೂಡಿಸಿತು.


Post a Comment

0Comments

Post a Comment (0)