ಬೆಂಗಳೂರು: ಬಂಗಾರದ ಮನುಷ್ಯ, ಬೂತಯ್ಯನ ಮಗ ಅಯ್ಯು ಸೇರಿದಂತೆ ಕನ್ನಡದ ಅನೇಕ ಹೆಸರಾಂತ ಚಲನಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ, ಮೇರು ಪ್ರತಿಭಾವಂತ ದಿ.ಸಿದ್ದಲಿಂಗಯ್ಯನವರ ಹೆಸರನ್ನು ವಾರ್ಡ್ ನಂ. 108 ರ ಶ್ರೀರಾಮ ಮಂದಿರ ವಾರ್ಡಿನ ರಾಜಾಜಿನಗರ 6 ನೇ ವಿಭಾಗದ ವೃತ್ತದಿಂದ ಭಾಷ್ಯಂ ವೃತ್ತದ ಮೂಲಕ ರಾಜಾಜಿನಗರ ಪೊಲೀಸ್ ಠಾಣೆಯವರೆಗಿನ ರಸ್ತೆಗೆ ನಾಮಕರಣ ಮಾಡಿ ಸರ್ಕಾರ ಈ ಹಿಂದೆಯೇ ಆದೇಶ ಹೊರಡಿಸಿದೆ.
ಸಿದ್ದಲಿಂಗಯ್ಯನವರ 89 ನೇ ಜನ್ಮ ವಾರ್ಷಿಕೋತ್ಸವ ಅಂಗವಾಗಿ ಡಿಸೆಂಬರ್ 25 ರಂದು ಬೆಳಿಗ್ಗೆ 11 ಗಂಟೆಗೆ ರಾಜಾಜಿನಗರದ ಡಾ.ರಾಜಕುಮಾರ್ ರಸ್ತೆಯ ಸಮುದಾಯ ಭವನದ ಬಳಿ ಗೋವಿಂದರಾಜ ನಗರ ಶಾಸಕ ಪ್ರಿಯಕೃಷ್ಣ ಅವರು ಸಿದ್ದಲಿಂಗಯ್ಯ ರಸ್ತೆಯ ನಾಮಕರಣ ಫಲಕ ಅನಾವರಣ ಮಾಡಲಿದ್ದಾರೆ.
ಚಿತ್ರೋದ್ಯಮದ ಗಣ್ಯರು, ಜನಪ್ರತಿನಿಧಿಗಳು ಸೇರಿದಂತೆ ಸಿದ್ದಲಿಂಗಯ್ಯ ಅವರ ಪುತ್ರ ಎಸ್.ಡಿ.ಸುರೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.