6279.80 ಕೋಟಿ ರೂ. ಗಳ ಪೂರಕ ಅಂದಾಜು ಪಟ್ಟಿಗೆ ಅನುಮೋದನೆ

varthajala
0

 ಬೆಳಗಾವಿ / ಬೆಂಗಳೂರು: ಪ್ರಸಕ್ತ ಸಾಲಿನ ಮಾರ್ಚ್ ಅಂತ್ಯದವರೆಗಿನ ಎರಡನೆ ಕಂತಿನ ಬೇಡಿಕೆಗಳ ಮೇಲೆ 6279.80 ಕೋಟಿ ರೂ. ಗಳ ಪೂರಕ ಅಂದಾಜು ಪಟ್ಟಿಗೆ ವಿಧಾನಸಭೆ ಅನುಮೋದನೆ ನೀಡಿತು.  ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯ ವಿತ್ತೀಯ ಕಾರ್ಯಕಲಾಪ ವೇಳೆ ಪೂರಕ ಅಂದಾಜು ಪಟ್ಟಿಗೆ ಅನುಮೋದನೆಗಾಗಿ ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ಸದನದಲ್ಲಿ ಮಂಡಿಸಿದರು.ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಅತಿವೃಷ್ಠಿ ಹಾಗೂ ಪ್ರವಾಹದಿಂದಾಗಿ ಉಂಟಾದ ರೈತರ ಬೆಳೆಹಾನಿಗೆ ಪರಿಹಾರ ಒದಗಿಸಲು ಕೇಂದ್ರ ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿಗಿಂತಲೂ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್ ಗೆ 8,500 ರೂ. ಪರಿಹಾರವನ್ನು ನಾವು ನೀಡಿದ್ದೇವೆ.  ಈ ಹೆಚ್ಚುವರಿ ವೆಚ್ಚ ಭರಿಸಲು 1015.66 ಕೋಟಿ ರೂ. ಗಳನ್ನು ಪೂರಕ ಅಂದಾಜಿನಲ್ಲಿ ಅವಕಾಶ ಮಾಡಿಕೊಳ್ಳಲಾಗಿದೆ.  


ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಇತ್ತೀಚೆಗೆ ಗುಡ್ಡ ಮತ್ತು ಮಣ್ಣು ಕುಸಿತ ಆಗುತ್ತಿದೆ.  ಇದನ್ನು ತಡೆಗಟ್ಟಲು ರಾಜ್ಯ ವಿಪತ್ತು ಉಪಶಮನ ನಿಧಿಗಾಗಿ 372 ಕೋಟಿ ರೂ. ಗಳನ್ನು ಒದಗಿಸಲಾಗುತ್ತಿದೆ.  ಕಬ್ಬು ಬೆಳೆಗಾರರ ಹಿತ ಕಾಯಲು ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಪ್ರತಿ ಟನ್‍ಗೆ 50  ರೂ. ಗಳನ್ನು ನೀಡುತ್ತಿದ್ದು, ಇದಕ್ಕಾಗಿ 300 ಕೋಟಿ ರೂ. ಅಮೃತ್ ಯೋಜನೆಗಾಗಿ, 140 ಕೋಟಿ ರೂ. ದೇವರಾಜ ಅರಸು ಅಭಿವೃದ್ಧಿ ನಿಗಮದಡಿ ಹಿಂದುಳಿದ ವರ್ಗಗಳ ಜನರಿಗೆ ಹಲವು ಯೋಜನೆಗಳಡಿ ಸಹಾಯಧನ ಒದಗಿಸಲು, 150 ಕೋಟಿ ರೂ., ಪ.ಜಾತಿ, ಪ.ಪಂಗಡದ ವಸತಿ ಶಾಲೆಗಳಿಗೆ ಹಾಗೂ ವಿವಿಧ ವಸತಿ ಶಾಲೆಗಳ ನಿರ್ವಹಣೆಗಾಗಿ 200 ಕೋಟಿ ರೂ. ಸೇರಿದಂತೆ ಪೂರಕ ಅಂದಾಜು ಪಟ್ಟಿಯಲ್ಲಿ ಅನುದಾನಕ್ಕೆ ಅವಕಾಶ ಮಾಡಿಕೊಳ್ಳಲಾಗಿದೆ.  ಈ ಅನುದಾನವನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ, ಸಾಲ, ತೆರಿಗೆ ಸಂಗ್ರಹ ಮುಂತಾದ ಮೂಲಗಳಿಂದ ಸಂಗ್ರಹಿಸುವ ಉದ್ದೇಶ ಹೊಂದಲಾಗಿದೆ.  ಈ ಪೂರಕ ಅಂದಾಜು ವೆಚ್ಚದ ಮೊತ್ತವು ಈ ವರ್ಷದ ಆಯವ್ಯಯದ ಶೇ. 1.45 ರಷ್ಟಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಹೇಳಿದರು.
ಸದನದ ಸದಸ್ಯರುಗಳ ಚರ್ಚೆಯ ಬಳಿಕ 2025-26 ನೇ ಸಾಲಿನ ಪೂರಕ ಅಂದಾಜುಗಳ ಕಂತಿನ ಬೇಡಿಕೆಗಳ ಪಟ್ಟಿಗೆ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಯಿತು.

Post a Comment

0Comments

Post a Comment (0)