ಯಾವುದೇ ಕಾರಣಕ್ಕೂ ಬಲವಂತದ ಹಾಗೂ ಅನ್ಯಾಯದ ಕೆಐಎಡಿಬಿ ಭೂ ಸ್ವಾಧೀನಕ್ಕೆ ಮಣಿಯುವುದಿಲ್ಲ ಎಂದು ಸುಮಾರು ಮೂರುವರೆ ವರ್ಷಗಳ ಕಾಲ ಪಟ್ಟು ಬಿಡದೆ ಹೋರಾಟ ನಡೆಸಿದ್ದ ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ಐತಿಹಾಸಿಕ ರೈತರ ಹೋರಾಟವು ಸಚಿವ ಸಂಪುಟ ಒಪ್ಪಿಗೆ ಪಡೆಯುವ ಮೂಲಕ , ಕಾರ್ಪೊರೇಟ್ ರಿಯಲ್ ಎಸ್ಟೇಟ್ ಪ್ರಾಯೋಜಿತ ಭೂ ಸ್ವಾಧೀನದ ವಿರುದ್ಧ ಅಂತಿಮ ವಿಜಯ ದಾಖಲಿಸಿದೆ. ಈ ವಿಜಯವು ಕಾರ್ಪೊರೇಟ್ ವಿರೋಧಿ ರೈತ -ಕಾರ್ಮಿಕರು ಸಖ್ಯತೆಯ ಹೋರಾಟದಿಂದ ಸಾಧಿಸಿರುವ ಬಹಳ ದೊಡ್ಡ ವಿಜಯವಾಗಿದ್ದು ರಾಜ್ಯದಾದ್ಯಂತ ಡಿಸೆಂಬರ್ 9, 2025 ರಂದು ವಿಜಯೋತ್ಸವ ಆಚರಿಸಿ ಸಂಭ್ರಮಿಸಲು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ, ಇಂತಹದ್ದೇ ಬಲವಂತದ ಹಾಗೂ ಅನ್ಯಾಯದ ಭೂ ಸ್ವಾಧೀನದ ವಿರುದ್ಧ ರಾಜ್ಯಾದ್ಯಂತ ಹೋರಾಡುತ್ತಿರುವ ರೈತರಿಗೆ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ (KPRS )ದ ಎಲ್ಲಾ ಗ್ರಾಮ ಘಟಕಗಳಿಗೆ ತಾಲ್ಲೂಕು/ಜಿಲ್ಲಾ ಸಮಿತಿಗಳಿಗೆ ಕರೆ ನೀಡುತ್ತದೆ.
ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನದ ಹೆಸರಿನಲ್ಲಿ ಭೂ ಕಬಳಿಕೆ ನಡೆಸುವ ಕಾರ್ಪೊರೇಟ್ ಪ್ರೇರಿತ ರಿಯಲ್ ಎಸ್ಟೇಟ್ ಆಕ್ರಮ ಕೂಟ ಮತ್ತು ಈ ಕೂಟವು ಹೊಂದಿರುವ ರಾಜಕೀಯ ಪ್ರಭಾವದಿಂದ ದುರ್ಬಳಕೆಯಾಗುವ ಸರ್ಕಾರಿ ಸಂಸ್ಥೆಗಳ, ಅಧಿಕಾರಿಗಳ ಕಾನೂನು ಬಾಹಿರ ಮತ್ತು ಕ್ರಿಮಿನಲ್ ಸಹಕಾರ ಮತ್ತು ಬೆಂಬಲವು ರೈತರ ಪ್ರಜಾಸತ್ತಾತ್ಮಕ ಅಭಿಪ್ರಾಯ, ಅಸಮ್ಮತಿ ಹಾಗೂ ವಿರೋಧ ಯಾವುದನ್ನೂ ಲೆಕ್ಕಿಸದೆ ಯಾವುದೇ ಪ್ರತಿಭಟನೆಗಳು ಬೆಳೆಯದಂತೆ ಎಲ್ಲಾ ರೀತಿಯ ಕುತಂತ್ರ ಹಾಗೂ ಕ್ರಿಮಿನಲ್ ಕಾರ್ಯಚರಣೆ ನಡೆಸುತ್ತವೆ. ಇಂತಹ ಕುತಂತ್ರಗಳನ್ನು ಹಿಮ್ಮೆಟ್ಟಿಸುವಂತಹ ರೀತಿಯಲ್ಲಿ ಹೋರಾಟ ಹಾಗೂ ಪ್ರತಿಭಟನೆ ಮಾದರಿಯನ್ನು ಯೋಜಿಸಿ ರೂಪಿಸಿ ಈ ಭೂ ಸ್ವಾಧೀನ ವಿರೋಧಿ ಹೋರಾಟಕ್ಕೆ ಬಲವಾದ ಅಡಿಪಾಯ ಹಾಕಿ ಕೊಟ್ಟು ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಹಕ್ಕೋತ್ತಾಯಗಳನ್ನು ಸರ್ಕಾರದ ಮಟ್ಟದಲ್ಲಿ ಬಲವಾಗಿ ಪ್ರತಿಪಾದಿಸುತ್ತಿದ್ದ ಕರ್ನಾಟಕ ಪ್ರಾಂತ ರೈತ ಸಂಘ (KPRS) ರಾಜ್ಯಾಧ್ಯಕ್ಷರಾಗಿದ್ದ ಕಾಂ. ಜಿಸಿ ಬಯ್ಯಾರೆಡ್ಡಿರವರ ಪಾತ್ರ ಈ ಹೋರಾಟದ ಒಗ್ಗಟ್ಟು ಬಲವಾಗಿ ಉಳಿಯುವಲ್ಲಿ ಮಹತ್ವದ ಪಾತ್ರ ವಹಿಸಿತ್ತು . ಜಿಸಿ ಬಯ್ಯಾರೆಡ್ಡಿ ರವರ ಅಕಾಲ ನಿಧನದಿಂದ ಉಂಟಾದ ನಾಯಕತ್ವದ ಕೊರತೆಯನ್ನು ಐಕ್ಯ ಹೋರಾಟವಾಗಿ ಮರು ಹುಟ್ಟು ಪಡೆದು ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಸಮಾನ ಮನಸ್ಕ ಸಂಘಟನೆಗಳ ಕ್ರಿಯಾಶೀಲ ಹಾಗೂ ಸಮರಶೀಲ ಬೆಂಬಲದಿಂದಾಗಿ ಭೂ ಸ್ವಾಧೀನವನ್ನು ಸಂಪೂರ್ಣವಾಗಿ ರದ್ದುಪಡಿಸಿಕೊಳ್ಳುವ ಮಹಾನ್ ವಿಜಯ ಪಡೆಯಲು ಸಾಧ್ಯವಾಗಿದೆ. ಅದಕ್ಕಾಗಿ ಈ ಐತಿಹಾಸಿಕ ಹೋರಾಟದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗವಹಿಸಿ ಬೆಂಬಲಿಸಿದ ಎಲ್ಲರನ್ನೂ ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.
ದೇವನಹಳ್ಳಿ ರೈತರ ಈ ಐತಿಹಾಸಿಕ ಗೆಲುವು ಇಡೀ ರಾಜ್ಯ ಹಾಗೂ ದೇಶದ ಕಾರ್ಪೊರೇಟ್ ಭೂ ಕಬಳಿಕೆ ವಿರುದ್ಧ ಹೋರಾಡುತ್ತಿರುವ ಎಲ್ಲಾ ರೈತರಿಗೆ ಬಹಳ ದೊಡ್ಡ ಆತ್ಮವಿಶ್ವಾಸ ಹಾಗೂ ಸ್ಪೂರ್ತಿಯನ್ನು ಉಂಟು ಮಾಡಿದೆ. ರಾಜ್ಯದ ರೈತ ಚಳವಳಿ ಚರಿತ್ರೆಯಲ್ಲಿ ಅಚ್ಚಳಿಯದೇ ಉಳಿಯುವ ಹೋರಾಟವಾಗಿದೆ. 380 ದಿನಗಳ ಕಾಲ ನಡೆದ ಐತಿಹಾಸಿಕ ದೆಹಲಿ ಹೋರಾಟದ ಸ್ಪೂರ್ತಿ ಪಡೆದಿದ್ದ ಈ ಹೋರಾಟವು ನಿರಂತರವಾಗಿ 1198 ದಿನಗಳ ಕಾಲ ನಡೆದು ಜುಲೈ 15, 2025 ರಂದು ಮಾನ್ಯ ಮುಖ್ಯಮಂತ್ರಿ ಗಳು ರದ್ದತಿ ಘೋಷಣೆಯೊಂದಿಗೆ ವಿಜಯ ಪಡೆದಿತ್ತು. ಮುಖ್ಯಮಂತ್ರಿಗಳ ಸಾರ್ವಜನಿಕ ಘೋಷಣೆಗೆ ಮುದ್ರೆ ಒತ್ತುವ ಸಂಪುಟ ಸಭೆ ಒಪ್ಪಿಗೆ ಹಾಗೂ ಗೆಜೆಟ್ ಪ್ರಕಟಣೆಗಳು ಅನಗತ್ಯ ಹಾಗೂ ಅಸಹಜವಾಗಿ ವಿಳಂಬವಾಗುವಂತೆ ತಡೆಯಲ್ಪಟ್ಟಿದ್ದವು. ಆ ನಂತರವೂ ಯಾವುದೇ ರೀತಿಯ ರಿಯಲ್ ಎಸ್ಟೇಟ್ ಕೂಟದ ಕುತಂತ್ರಗಳು ಫಲಿಸದೇ ಅಂತಿಮವಾಗಿ ಸಂಪುಟ ಸಭೆ ಒಪ್ಪಿಗೆ ಪಡೆಯುವಲ್ಲಿ ದೇವನಹಳ್ಳಿ ರೈತರು ಯಶಸ್ಸು ಸಾಧಿಸಿದ್ದಾರೆ. ಇಂತಹದ್ದೇ ಬಲವಂತದ ಹಾಗೂ ಅನ್ಯಾಯದ ಭೂ ಸ್ವಾಧೀನದ ವಿರುದ್ಧ ಹೋರಾಡುತ್ತಿರುವ ಆನೇಕಲ್ ತಾಲ್ಲೂಕಿನ ಹಂದೇನಹಳ್ಳಿ,ಮುತ್ತಾನಲ್ಲೂರು,ಸೊಳ್ ಳೇಪುರ ಮುಂತಾದ ಸುತ್ತಲಿನ ಗ್ರಾಮಗಳ ರೈತರು, ಬಿಡದಿ ಹೋಬಳಿ ಬೈರಮಂಗಲ -ಕಂಚುಗಾರನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರು, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ, ಮಾಗಡಿ , ಶಿಡ್ಲಘಟ್ಟ, ತುಮಕೂರು, ಬಿಎಂಐಸಿ-ನೈಸ್ ಮುಂತಾದವುಗಳು ಸೇರಿದಂತೆ ರಾಜ್ಯದ ಎಲ್ಲಾ ಬಲವಂತದ ಭೂ ಸ್ವಾಧೀನ ವಿರೋಧಿ ಹೋರಾಟದ ಹಕ್ಕೋತ್ತಾಯಗಳನ್ನು ಕೂಡ ಈಡೇರಿಸಬೇಕೆಂದು ,ರಾಜ್ಯದ ಎಲ್ಲಿಯೂ ಬಲವಂತದ ಭೂ ಸ್ವಾಧೀನ ನಡೆಸಬಾರದು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಕರ್ನಾಟಕ ರಾಜ್ಯ ಸಮಿತಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ಆಗ್ರಹಿಸುತ್ತದೆ.