ದಿನಾಂಕ : 22.12.2025 ಸೋಮವಾರ - ಶ್ರೀ ವಿಶ್ವಾವಸು ನಾಮ ಸಂವತ್ಸರ ಪುಷ್ಯ ಶುದ್ಧ ದ್ವಿತೀಯಾ - ಶ್ರೀ ಸುಯಮೀ೦ದ್ರತೀರ್ಥರ ಆರಾಧನಾ ಮಹೋತ್ಸವ, ಮಂತ್ರಾಲಯ.
33 ವರ್ಷಗಳ ಕಾಲ ಸಾಕ್ಷಾತ್ ಶ್ರೀ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಚಾರ್ಯರ ಮೂಲ ಮಹಾ ಸಂಸ್ಥಾನಾಧೀಶ್ವರರಾದ ಶ್ರೀ ರಾಘವೇಂದ್ರಸ್ವಾಮಿಗಳವರ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ ವಿರಾಜಿಸಿ; ತತ್ತ್ವ, ಧರ್ಮ, ಭಾರತೀಯ ಸಂಸ್ಕೃತಿಗಳ ಪ್ರಸಾರ; ವಿದ್ವತ್ಸಭಾ ನಿರ್ವಹಣೆ; ಪಂಡಿತ ಪೋಷಣೆ; ಸದ್ವಿದ್ಯಾ ಪ್ರಸಾರ; ಶ್ರೀ ಗುರುರಾಜರ ಮಹಿಮಾ ಪ್ರಸಾರ; ಶಿಷ್ಯ ಭಕ್ತೋದ್ಧಾರ; ಲೋಕ ಕಲ್ಯಾಣಗಲನ್ನು ಯಶಸ್ವಿಯಾಗಿ ನೆರವೇರಿಸಿ ಶ್ರೀ ಸುಶೀಲೇಂದ್ರತೀರ್ಥರ ಮತ್ತು ಸ್ವಗುರು ಶ್ರೀ ಸುವ್ರತೀಂದ್ರತೀರ್ಥರ ಅಪ್ಪಣೆಯಂತೆ ಮಹಾ ಸಂಸ್ಥಾನಾಭಿವೃದ್ಧಿ ಹಾಗೂ ಶ್ರೀ ಮಂತ್ರಾಲಯ ಕ್ಷೇತ್ರಾಭಿವೃದ್ಧಿ ಮಾಡಿ .....
" ಶ್ರೀ ರಾಘವೇಂದ್ರರ ಪ್ರತಿಮಾ ಸ್ಥಾನೀಯರೂ - ಗುರುರಾಜರ ಕರುಣೆಯ ಕಂದ - ಮಂತ್ರಾಲಯದ ಮಹಾ ಶಿಲ್ಪಿ "
ಗಳೆಂದು ಜಗತ್ತಿನ ಸಜ್ಜನರೂ - ಶಿಷ್ಯ ಭಕ್ತ ಜನರಿಂದ ವಿಶೇಷಾಕಾರವಾಗಿ ಗೇಗೀಯಮಾನರಾಗಿ ಸತ್ಕೀರ್ತಿ ಗಳಿಸಿದವರು ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಯಮೀಂದ್ರತೀರ್ಥರು.
ಸಕಲ ವಿದ್ಯೆಗಳಿಗೆ ತವರೂರಾದ ಷಾಷ್ಟಿಕ ವಂಶ ವಿಭೂಷಿತರಾದ - ಶ್ರೀ ಮಧ್ವ ವಿದ್ಯಾ ಸಾಮ್ರಾಜ್ಯದ ರಾಜರಾದ ಮತ್ತು ದ್ವೈತ ಸಿದ್ಧಾಂತ ಸಾರ್ವಭೌಮರಾದ ಶ್ರೀ ರಾಘವೇಂದ್ರತೀರ್ಥರ ಪೀಠಕ್ಕೆ ಆಭರಣರಾದ - ಶ್ರೇಷ್ಠವಾದ ದ್ವೈತ ಸಿದ್ಧಾಂತ ತತ್ತ್ವಗಳೂ - ಸನಾತನ ಧರ್ಮ ( ಸಂಪ್ರದಾಯ ) - ಮುಖ್ಯವಾಗಿ ಉದ್ಧಾರಕ್ಕೆ ಅತಿ ಮುಖ್ಯವಾದ ಶ್ರೀ ಹರಿ ವಾಯು ಗುರುರಾಜರು ಮತ್ತು ಸ್ವಗುರುಗಳ ಕುರಿತು ವಿಶೇಷ ರೀತಿಯಿಂದ ಸುಜನ ವೃಂದಕ್ಕೆ ಬೋಧಿಸಿ ಎಲ್ಲರನ್ನೂ ಸನ್ಮಾರ್ಗಕ್ಕೆ ತಂದು ವಿಖ್ಯಾತರಾದವರೂ - ಪೂಜ್ಯರೂ, ಸಂಪತ್ಕಾಂತಿಯುಕ್ತರೂ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಸುಯಮೀಂದ್ರತೀರ್ಥರು.
" ಶ್ರೀ ಸುಯಮೀಂದ್ರ ತೀರ್ಥರ ಸಂಕ್ಷಿಪ್ತ ಮಾಹಿತಿ "
ಹೆಸರು :
ವಿದ್ವಾನ್ ಶ್ರೀ ಶ್ರೀನಿವಾಸಮೂರ್ತ್ಯಾಚಾರ್ಯರು
ತಂದೆ :
ವಿದ್ವಾನ್ ಶ್ರೀ ವೇಣುಗೋಪಲಾಚಾರ್ಯರು ( ಶ್ರೀ ಸುಕೃತೀಂದ್ರತೀರ್ಥರು )
ತಾಯಿ : ಸಾಧ್ವೀ ಗಂಗಾಬಾಯಿ
ಗೋತ್ರ : ಗೌತಮ
ಶಾಖೆ : ಯಜುಶ್ಯಾಖೆ
ವಂಶ : ಷಾಷ್ಟಿಕ
ಜನ್ಮ ಸ್ಥಳ :
ನಂಜನಗೂಡು
ನಕ್ಷತ್ರ : ಆರಿದ್ರಾ
ರಾಶಿ : ಮಿಥುನ
ಜನ್ಮ ದಿನ : ರವಿವಾರ
" ಶ್ರೀ ಲಕುಮೀಶ " ರ ಕಣ್ಣಲ್ಲಿ ....
ಸುಯಮೀಂದ್ರ ಯತಿ ಚಕ್ರವರ್ತಿ ಸದಾ ।
ನಿಯಮದಿ ಭಜಿಪರಿಗೊಲಿವ
ಕರುಣಾ ಮೂರ್ತಿ ।। ಪಲ್ಲವಿ ।।
ಭಯದ ಭವಾಂಬುಧಿಯ ದಾಟಿಸಿ ।
ಪ್ರಿಯದಿ ಯೆನ್ನ ಹೃದಯ-
ದೊಳು ನಿನ್ನೆಡೆಯ ।
ಮಧ್ವರ ಧಣಿಯ ನೋಡುವ
ಭಾಗ್ಯ ಕರುಣಿಸು ।। ಅ. ಪ ।।
ವೇಣುಗೋಪಾಲಾಚಾರ್ಯ
ಗಂಗಾಂಬೆರಂದು ।
ಗರಳಾಪುರಿಯೊಳ್ ಕಾಣದೆ
ಸಂತಾನ ದಂಪತಿನೊಂದು ।
ಸುಪ್ರಜ್ಞೇಂದ್ರರಾಜ್ಞದಿ ಜ್ಞಾನಿ
ಶ್ರೀ ಗುರುರಾಜರಲ್ಲಿ ಬಂದು ।।
ಕರ ಮುಗಿದು ನಿಂದು
ಸಾನುರಾಗದಿ ಸೇವೆಗೈಯ್ಯೆ ।
ಸ್ವಪ್ನ ಕಾಣುತ ಗಂಗಾಂಬೆ
ಗುರುವಿನಿಂ ಜಾನಕೀಶನ ।
ಪ್ರತಿಮೆ ಮುದ್ರಾದಿ ತಾನು
ಪೊಂದಿದ ವರದಿ ಜನಿಸಿದ ।। ಚರಣ ।।
ದುಷ್ಟ ಮುಖಾಬ್ಧಿಯ
ಪಥಶಿರ ಪೂರ್ಣಿಮದಿ ।
ರವಿವಾರ ದಿನದಿ
ಶಿಷ್ಟ ಶುಭ ಗ್ರಹಗಳು ಉಚ್ಛ ।
ಸ್ವಕ್ಷೇತ್ರದ ಆರಿದ್ರ
ಮಿಥುನದಿ ಇಷ್ಟೆಲ್ಲ ಯಿರೆ ।
ಶ್ರೀ ಗಂಗಾಂಬ ಗರ್ಭಾಂಬುಧಿ-
ಯಿಂದೆ ಬರಲು ಶಶಿತರದಿ ।।
ದುಷ್ಟ ವಾದಿಗಳ್ ಮುಖದಿ
ಕಮಲಗಳ್ ಥಟ್ಟನೇ ।
ಬಾಡುತ್ತಗೋಳಿಡೆ ಪಟ್ಟು
ಸಂತಸ ನಿನಗೆ ತಂದೆಯು ।
ಕೊಟ್ಟ ನಾಮವೇ
ಬೆಟ್ಟದೊಡಯಾಖ್ಯ ।। ಚರಣ ।।
" ವಿದ್ಯಾಭ್ಯಾಸ "
ವಿದ್ವಾನ್ ಸುಜ್ಞಾನೇಂದ್ರಾಚಾರ್ಯರಲ್ಲಿ ಪ್ರಾಥಮಿಕ ವಿದ್ಯೆಯನ್ನೂ - ವಿದ್ವಾನ್ ಶ್ರೀ ಕೃಷ್ಣಾಚಾರ್ಯರಲ್ಲಿ ಸಾಹಿತ್ಯ ಮತ್ತು ವೇದಗಳನ್ನೂ - ವಿದ್ವಾನ್ ಹುಲಿ ಹನುಮಂತಾಚಾರ್ಯರ ಮತ್ತು ವಿದ್ವಾನ್ ಎಲತ್ತೂರು ಕೃಷ್ಣಾಚಾರ್ಯರಲ್ಲಿ ನ್ಯಾಯ ಶಾಸ್ತ್ರವನ್ನೂ - ಶ್ರೀ ಸುಶೀಲೇಂದ್ರತೀರ್ಥರು ಮತ್ತು ಶ್ರೀ ಸುವ್ರತೀಂದ್ರತೀರ್ಥರಲ್ಲಿ
ವೇದಾಂತ ಶಾಸ್ತ್ರವನ್ನು ಅಧ್ಯಯನ ಮಾಡಿ ಶ್ರೇಷ್ಠ ಪಂಡಿತರಾಗಿ ಶ್ರೀಮಠದ ದಿವಾನರಾಗಿ ಸರ್ವರ ಗೌರವಾದರಗಳಿಗೆ ಪಾತ್ರರಾದರು.
" ಶ್ರೀ ಲಕುಮೀಶ " ರ ಕಣ್ಣಲ್ಲಿ ....
ದಿವಜರಿಗೆ ಗಾಯತ್ರೀ ಯಶ
ಶ್ರೀಮುಖವು ಎಂದರಿತು ಜನಕನು ।
ನಿಜ ಬಂಧು ಜನರೊಡನೆ
ಬ್ರಹ್ಮೊಪದೇಶವು ನಿನಗೀಯೆ ।
ಪೊಂದಿದೆ ಅಜಭಾವಿ
ಶಾಸ್ತ್ರ ಜ್ಞಾನ ಸಂಪದವು ।।
ಸುಶೀಲೇಂದ್ರ ಗುರುವು
ಸೃಜಿಸೆ ನಿನಗೆ ದಿವಾನ ಪದವ ।
ತ್ಯಜಿಸಿ ಸ್ವಾರ್ಥವ ಮಠದ
ಕೀರ್ತಿಯ ಧ್ವಜವನೇರಿಸಿ ।
ವೃತ ಸುನೇಮದಿ ಭಜಿಸಿ
ಗುರುಪದ ರಜದಿ ಮೆರೆವಾ ।। ಚರಣ ।।
" ಶ್ರೀ ಶ್ರೀನಿವಾಸಮೂರ್ತ್ಯಾಚಾರ್ಯರು ಶ್ರೀ ಸುಯಮೀಂದ್ರತೀರ್ಥರಾಗಿ ವಿರಾಜಿಸಿದ್ದು "
ಪಂಡಿತೋತ್ತಮರೂ, ವೈರಾಗ್ಯ ನಿಧಿಗಳೂ, ವಾಗ್ಮಿಗಳೂ ಆದ ವಿದ್ವಾನ್ ಶ್ರೀ ಶ್ರೀನಿವಾಸಮೂರ್ತ್ಯಾಚಾರ್ಯರಿಗೆ ಶ್ರೀಮದಾಚಾರ್ಯರ ಮೂಲ ಮಹಾ ಸಂಸ್ಥಾನದ ಸತ್ಸಂಪ್ರದಾಯದಂತೆ ಶ್ರೀ ಸುವ್ರತೀಂದ್ರತೀರ್ಥರು ತುರ್ಯಾಶ್ರಮ ಕೊಟ್ಟು " ಸುಯಮೀಂದ್ರತೀರ್ಥ " ಯೆಂದು ನಾಮಕರಣ ಮಾಡಿ - ತಮ್ಮ ಅಮೃತಮಯವಾದ ಹಸ್ತಗಳಿಂದ " ದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ ಕುಳ್ಳಿರಿಸಿ ಪಟ್ಟಾಭಿಷೇಕ " ಮಾಡಿದರು.
" ಶ್ರೀ ಲಕುಮೀಶ " ರ ಕಣ್ಣಲ್ಲಿ ....
ಶ್ರೀಮುಖಾಬ್ಜ ರವಿ ಮೂಲ-
ರಾಮನ ಧ್ಯಾನ ಮಾಡಿ ।
ಸುವ್ರತೀಂದ್ರ ಯತಿವರ
ಶ್ರೀಮುಖದಿ ಸಂಸ್ಥಾನ ।
ಕವಿ ಜನರ ಬರ ಮಾಡಿ
ವೇದಾಂತ ರಾಜ್ಯದಿ ।
ಶ್ರೀ ಮಹಾ ಪಟ್ಟಾಭಿಷೇಕವೆ
ನಿನಗೆ ಹೂಡಿ ।।
ಜಯರವವು ಮಾಡ್ದೆ
ಶ್ರೀಮುಖದಿ ವೈಶಾಖ ಮಾಸದಿ ।
ಆ ಮಹಾಶರ ದಿವಸಮಂದದಿ
ಧಾಮ ಮಂತ್ರ ।
ಪುರೀಶನಿದಿರೋಳ್
ನೀಮದಿಂದಲಿ ನಾಮಗೊಂಡ ।।
" ಶ್ರೀ ಅಭಿನವ ಪ್ರಾಣೇಶ ದಾಸ " ರ ನುಡಿಯಲ್ಲಿ ....
ಮುನಿ ಮಧ್ವಾರ್ಯರ ಘನತರ
ಪೀಠದಲ್ಲಿ ರಾರಾಜಿಪರಲ್ಲಿ ।
ಕನಕಾಂಬಕ ವೈರಿಯ ಸುತೆ
ತೀರದಲಿ ಇಪ್ಪರು ಮುದದಲ್ಲಿ ।
ಜನಕಜಾ ಪತಿ ಮೂಲರಾಮ
ಪದವ ವಿಭವದಲರ್ಚಿಸುವ ।
ಮುನಿ ರಾಘವೇಂದ್ರರ ಪದಕಂಜ
ಭೃಂಗ ನತಜನ ದಯಾಪಾಂಗ ।।
ಗುರು ಸುವ್ರತೀಂದ್ರರ ಕರ
ಸರಸಿಜ ಜಾತಾ ಜಗದೊಳಗೆ ಪ್ರಖ್ಯಾತ ।
ಪರಮೋದಾರ್ಯದಿ ಕವಿಜನ
ಮೆರೆಸಿದನ ಧರೆಸುರ ಪಾಲಕರನ ।
ಕರಜಾಸನ ಮಣಿ ತುಳಸಿ
ಸುಸರ ಭೂಷ ಕಾಷಾಯ ವಾಸಾ ।
ಹರಿಮತ ಸಿಂಧವ ಮೆರೆಸುತ
ಸಂಚರಿಪ ಜನರುದ್ಧರಿಪ ।।
" ಶ್ರೀ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠ "
ಸದ್ವಿದ್ಯಾ ಪ್ರಸಾರಕ್ಕಾಗಿ ಶ್ರೀ ಸುಶೀಲೇಂದ್ರತೀರ್ಥರು ಸ್ಥಾಪಿಸಿದ್ದ ಸಂಸ್ಕೃತ ಪಾಠಶಾಲೆಯನ್ನು " ಶ್ರೀ ಗುರುಸಾರ್ವಭೌಮ ಸಂಸ್ಕೃತ ಪಾಠಶಾಲೆ " ಯನ್ನಾಗಿ ಮಾರ್ಪಾಡಿಸಿ, ವೇದ - ವೇದಾಂತ - ನ್ಯಾಯ - ಮೀಮಾಂಸಾ - ವ್ಯಾಕರಣ - ಧರ್ಮಶಾಸ್ತ್ರ - ಸಾಹಿತ್ಯ ಶಾಸ್ತ್ರಗಳ ವ್ಯಾಸಂಗ ಮಾಡುವ ನೂರಾರು ವಿದ್ಯಾರ್ಥಿಗಳಿಗೆ ಸಕಲ ಸೌಕರ್ಯಗಳನ್ನು ಏರ್ಪಡಿಸಿ ಕೊಟ್ಟು ಆಧ್ಯಾತ್ಮ ಪ್ರಗತಿಗೆ ಕಾರಣರಾದರು.
" ವಿದ್ಯಾ ಪಕ್ಷಪಾತಿಗಳು "
ಶ್ರೀ ರಾಯರ ಆರಾಧನಾ ಕಾಲದಲ್ಲಿ " ಶ್ರೀಮತ್ಸಮೀರ ಸಮಯ ಸಂವರ್ಧಿನೀ ವಿದ್ವತ್ಸಭೆ " ಯನ್ನು ಏರ್ಪಡಿಸಿ ನಾಡಿನ ತ್ರಿಮತಸ್ಥ ಪಂಡಿತ ಶ್ರೇಷ್ಠರೂ, ವಿದ್ಯಾರ್ಥಿಗಳೂ, ಕವಿಗಳೂ, ಸಾಹಿತಿಗಳೂ, ಕಲೆಗಾರರಿಗೆ ಉದಾರ ಸಂಭಾವನಾ ಪ್ರದಾನ ಮಾಡಿ ಸಂತೋಷ ಪಡಿಸಿ, ಪ್ರಕಾಂಡ ಪಂಡಿತರನ್ನು ಗುರುತಿಸಿ ಅವರಿಗೆ ಸುವರ್ಣ ಪದಕ ಸಹಿತ ಹಾರ, ಜರಿ ಶಾಲು ಜೋಡಿ, ಸಂಭಾವನೆಗಳೊಡನೆ ವಿವಿಧ ವಿದ್ಯಾ ಪ್ರಶಸ್ತಿಗಳನ್ನಿತ್ತು ಗೌರವಿಸುತ್ತಿದ್ದರು.
ಆ ವಿದ್ವತ್ಸಭೆಯಲ್ಲಿ ವಿವಿಧ ಶಾಸ್ತ್ರಗಳ ಮೇಲೆ ವಾಕ್ಯಾರ್ಥ, ವಿಚಾರ ಗೋಷ್ಠಿ, ವಿದ್ಯಾರ್ಥಿಗಳ ಪರೀಕ್ಷೆಗಳೂ, ಶ್ರೀ ಹರಿದಾಸ ಸಾಹಿತ್ಯ ಸಮ್ಮೇಳನ ಜರುಗುತ್ತಿದ್ದು ಹತ್ತಾರು ಸಹಸ್ರ ಜನರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಹರಿ ವಾಯು ಗುರುಗಳ ಪರಮಾನುಗ್ರಹಕ್ಕೆ ಪಾತ್ರರಾಗುತ್ತಿದ್ದರು.
" ಶ್ರೀ ಮಂತ್ರಾಲಯಾ೦ಬಿಕೆಗೆ ಸುಂದರ ಮಂದಿರ "
ಶ್ರೀ ಸುಯಮೀಂದ್ರತೀರ್ಥರು ಶ್ರೀ ಪ್ರಹ್ಲಾದರಾಜರ ಕುಲ ದೇವತೆಯಾದ ಸಾಕ್ಷಾತ್ ದುರ್ಗಾ ಸ್ವರೂಪಿಣಿಯಾದ ಶ್ರೀ ಮಂತ್ರಾಲಯಾ೦ಬಿಕೆಗೆ ಸುಂದರವಾದ ಮಂದಿರವನ್ನು ನಿರ್ಮಿಸಿ ಪ್ರತಿದಿನ ಪೂಜಾರಾಧನೆ, ಮಂಗಳವಾರ - ಶುಕ್ರವಾರ ವಿಶೇಷ ಉತ್ಸವ, ಪ್ರತಿನಿತ್ಯ ಸೇವಿಸುವವರ ಅನುಕೂಲಕ್ಕಾಗಿ ಕುಂಕುಮಾರ್ಚನೆ ಮತ್ತು ಪುಷ್ಪಾರ್ಚನೆ ಮಾಡಿದರು.
" ಶ್ರೀರಾಯರಿಗೆ ಬೆಳ್ಳಿ ಮತ್ತು ಬಂಗಾರದ ಆಭರಣಗಲ ಸಮರ್ಪಣೆ "
" ಶ್ರೀ ಲಕುಮೀಶ " ರ ಕಣ್ಣಲ್ಲಿ ....
ಬೆಳ್ಳಿ ರಥವ ಮಾಡಿ ಮುದದಿಂದ
ಇವರು ಶ್ರೀ ಪರಿಮಳಾರ್ಯಾದಿ ।
ಉಳ್ಳ ವೃಂದಾವನಕ್ಕೆ
ಕವಚಾದಿಗಳು ಗೈದರು ।
ಯೋಗೀಂದ್ರ ಸ್ಥಾಪಿತ
ಮಲ್ಲ ಶ್ರೀ ಮಾರುತಿಗೆ ।।
ರಜಾಂಗಿ ಹಾಕಿದರು
ಗುರುಸಾರ್ವಭೌಮರ ।
ವಳ್ಳೆ ನಾಮದ ಪಾಠ-
ಶಾಲೆಯೊಳ್ ಎಲ್ಲ ಭೂಸುರ ।
ಚೆಲ್ವ ಲಕುಮೀಶ ನಿಲಿಸಿದ ।।
ಶ್ರೀ ಸುಯಮೀಂದ್ರತೀರ್ಥರು ಶ್ರೀ ರಾಯರ ಮೂಲ ವೃಂದಾವನಕ್ಕೆ ಬಂಗಾರದ ತೆನೆ; ರತ್ನಮಯ ಪಂಚೆ; ಶ್ರೀ ಪ್ರಹ್ಲಾದರಾಜರ ಉತ್ಸವ ಮೂರ್ತಿಗೆ ಬಂಗಾರದ ಕವಚ; ಪಂಚೆ, ಕಿರೀಟ, ಕರ್ಣಕುಂಡಲಗಳು, ಹಸ್ತ, ಪಾದಗಳು, ನವರತ್ನಮಯ " ಶ್ರೀ ಗುರುಸಾರ್ವಭೌಮ ಮುಡಿ " ವಿವಿಧ ಆಭರಣಗಳನ್ನೂ, ಶ್ರೀ ಯೋಗೀಂದ್ರತೀರ್ಥರಿಂದ ಶ್ರೀ ರಾಯರ ಮೂಲ ವೃಂದಾವನದ ಮುಂದೆ ಪ್ರತಿಷ್ಠಾಪಿಸಿದ ಶ್ರೀ ಮಾರುತಿಗೆ ಬೆಳ್ಳಿ ಕವಚವನ್ನೂ; ಸುಂದರವಾದ ರಜತ ರಥವನ್ನೂ ನಿರ್ಮಾಣ ಮಾಡಿಸಿ ಶ್ರೀ ರಾಯರ ಉತ್ಸವಕ್ಕಾಗಿ ರಜತ ಪೀಠ ಪ್ರಭಾವಳೀ, ವಿಶಾಲವಾದ ಛತ್ರ - ಚಾಮರಗಳೂ, ಆನೆ - ಕುದುರೆ - ಸಿಂಹ ಮೊದಲಾದ ವಾಹನಗಳನ್ನು ಮಾಡಿಸಿ ಶ್ರೀ ಗುರುಸಾರ್ವಭೌಮರಿಗೆ ಅರ್ಪಿಸಿದರು.
ಶ್ರೀ ಸುಯಮೀಂದ್ರತೀರ್ಥರು ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಸತ್ಪರಂಪರೆಯಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮುಖ್ಯ ಪೀಠದಲ್ಲಿ ವಿರಾಜಮಾನರಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರಿಗೆ ಮಾಡಿದ ಸೇವೆಯು ಅಸಾಧಾರಣವಾದುದು.
ಶ್ರೀ ಮೂಲರಾಮ - ಶ್ರೀ ದಿಗ್ವಿಜಯ - ಶ್ರೀ ಜಯರಾಮದೇವರಿಗೆ ಚಿಕ್ಕ ಬಂಗಾರದ ಮಂಟಪ. ರಾತ್ರಿ ನಡೆಯುವ ತೊಟ್ಟಿಲ ಪೂಜೆಗೆ ದೊಡ್ಡ ಬಂಗಾರದ ತೊಟ್ಟಿಲು ಶ್ರೀ ಮೂಲರಾಮ - ಶ್ರೀ ದಿಗ್ವಿಜಯ - ಶ್ರೀ ಜಯರಾಮದೇವರಿಗೆ ಬಂಗಾರದ ಪೀಠ ಬಂಗಾರದ ತಟ್ಟೆ ಬಂಗಾರದ ಹಲಗಾರತಿಗಳು ಬಂಗಾರದ ಆರತಿ ತಟ್ಟೆ ಬಂಗಾರದ ಬಟ್ಟಲುಗಳು ನವರತ್ನ ಮಂಟಪ ರತ್ನ ಕಚಿತ 12 ಸುವರ್ಣ ಕಮಲಗಳಲ್ಲಿ ಕೆತ್ತಿಸಿದ ಶ್ರೀ ರಾಯರು ರಚಿಸಿದ ಶ್ರೀ ರಾಮಚಾರಿತ್ರ್ಯ ಮಂಜರೀ ಮಾಲೆ, ಮುಕ್ತಾ ಹಾರಗಳನ್ನು ಶ್ರೀ ಸುಯಮೀಂದ್ರತೀರ್ಥರು ಹೊಸದಾಗಿ ಮಾಡಿಸಿ ಅರ್ಪಿಸಿದರು.
ವಿಶೇಷ ವಿಚಾರ :
( ಶ್ರೀ ಮಠದ ಇತಿಹಾಸವನ್ನು ನನ್ನ ಹತ್ತಿರ ನನ್ನ ತಂದೆಯವರು ಹೇಳುವಾಗ ಈ ಮೇಲ್ಕಂಡ ವಿವರಗಳನ್ನು - ಪ್ರಾತಃಸ್ಮರಣೀಯ ಪರಮಪೂಜ್ಯ ಶ್ರೀ ಹಾವೇರಿ ಗುಂಡಾಚಾರ್ಯರು ) ಕೊಟ್ಟಿದ್ದಾರೆ.
ನನ್ನ ತಂದೆಯವರಿಗೆ ಚಿಕ್ಕವರಿದ್ದಾಗಲೇ ( ಸುಮಾರು 2 ವರ್ಷ ಇದ್ದಾಗಲೇ ) ಮಾತೃ ವಿಯೋಗ ಆದಾಗ ಶ್ರೀ ಶ್ರೀಗಳವರು ಶ್ರೀ ಮೂಲರಾಮನಿಗೆ ಅಭಿಷೇಕ ಮಾಡಿದ ಹಾಲನ್ನು ಕೊಟ್ಟು ಬೆಳಿಸಿದ ಮಾತೃವಾತ್ಸಲ್ಯದ ಕರುಣಾಮಯಿ ಶ್ರೀ ಸುಯಮೀಂದ್ರತೀರ್ಥರು.
ಶ್ರೀ ಹರಿ ವಾಯು ಶ್ರೀ ರಾಯರ, ಶ್ರೀ ವಿಜಯರಾಯರ ಮತ್ತು ಶ್ರೀ ಸುಯಮೀಂದ್ರತೀರ್ಥರ ಪರಮಾನುಗ್ರಹದಿಂದ ಸುಮಾರು 78 ವರ್ಷಗಳ ಕಾಲ ಸೇವೆಯನ್ನು ಮಾಡಿದ್ದಾರೆ )
" ಶ್ರೀ ಸುಯಮೀಂದ್ರತೀರ್ಥರು ಮತ್ತು ಶ್ರೀ ವಿದ್ಯಾಪ್ರಸನ್ನತೀರ್ಥರ ಸ್ನೇಹ ಸಂಬಂಧ "
ಶ್ರೀಮದಾಚಾರ್ಯರ ಮೂಲ ಮಹಾ ಸಂಸ್ಥಾನವೆಂದು ಪ್ರಖ್ಯಾತವಾಗಿದ್ದ ಶ್ರೀಮದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಾಮ್ರಾಜ್ಯಾಧೀಶರಾದ ಶ್ರೀಮಟ್ಟೀಕಾಕೃತ್ಪಾದರ ಪೂರ್ವಾಶ್ರಮ ಸೋದರಳಿಯಂದಿರೂ; ಶ್ರೀ ಮಜ್ಜಯತೀರ್ಥರ ಆಶ್ರಮ ಶಿಷ್ಯರೂ, ಉತ್ತರಾಧಿಕಾರಿಗಳೂ ರಾಗ ಶ್ರೀ ವಿದ್ಯಾಧಿರಾಜ ತೀರ್ಥರ ಕಾಲದಲ್ಲಿ ಎರಡು ಮಹಾ ಸಂಸ್ಥಾನಗಳಾಗಿ ವಿಭಾಗವಾಗಿ ಶ್ರೀ ರಾಜೇಂದ್ರತೀರ್ಥ ಮಹಾ ಸಂಸ್ಥಾನ ( ಶ್ರೀ ವ್ಯಾಸರಾಜ ಮಠ ) ಮತ್ತು ಶ್ರೀ ಕವೀಂದ್ರತೀರ್ಥ ಮಹಾ ಸಂಸ್ಥಾನ ( ಶ್ರೀ ರಾಯರ ಮಠ ) ಗಳೆಂದು ಜಗದ್ವಿಖ್ಯಾತವಾದ ಸಾಕ್ಷಾತ್ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನಗಳಲ್ಲೊಂದಾದ ಶ್ರೀ ರಾಜೇಂದ್ರತೀರ್ಥರ ಪರಿಶುದ್ಧವಾದ ಪೀಳಿಗೆಯಲ್ಲಿ ಬಂದ ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಪರಮ ಪವಿತ್ರವಾದ ವಿದ್ಯಾ ಸಂಹಾಸನದಲ್ಲಿ ವಿರಾಜಿಸಿದ; ಶ್ರೀ ರಾಘವೇಂದ್ರಸ್ವಾಮಿಗಳವರ ಪರಮ ಪವಿತ್ರವಾದ ವಿದ್ಯಾ ಸಿಂಹಾಸನದಲ್ಲಿ ವಿರಾಜಮಾನರಾದ ಪ್ರಾತಃ ಸ್ಮರಣೀಯ ಪರಮ ಪೂಜ್ಯ ಶ್ರೀ ಸುಯಮೀಂದ್ರತೀರ್ಥರ ಪರಮ ಮಿತ್ರರೂ; ಪರಲೋಕ ಬಂಧುಗಳಾದವರು ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ವಿದ್ಯಾ ಪ್ರಸನ್ನತೀರ್ಥರು!
" ನೂತನ ಗುರುಗಳು "
ಪಂಡಿತರಾದ ಶ್ರೀ ವೆಂಕಟರಾಘವೇಂದ್ರಾಚಾರ್ಯರಿಗೆ ಶ್ರೀ ಸುಯಮೀಂದ್ರತೀರ್ಥರು ತುರ್ಯಾಶ್ರಮ ನೀಡಿ " ಸುಜಯೀಂದ್ರತೀರ್ಥ " ಯೆಂದು ನಾಮಕರಣ ಮಾಡಿ ತಮ್ಮ ಅಮೃತಮಯವಾದ ಹಸ್ತಗಳಿಂದ " ದ್ವೈತ ವೇದಾಂತ ದಿಗ್ವಿಜಯ ವಿದ್ಯಾ ಸಿಂಹಾಸನದಲ್ಲಿ ಕುಳ್ಳಿರಿಸಿ ಪಟ್ಟಾಭಿಷೇಕ " ಮಾಡಿದರು.
" ಅವತಾರ ಸಮಾಪ್ತಿ "
ಸಾಕ್ಷಾತ್ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಸತ್ಪರಂಪರೆಯಾದ ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮಹಾ ಮುಖ್ಯ ಪೀಠವನ್ನು ಕ್ರಿ ಶ 1933 - 1967 ಅಂದರೆ 33 ವರ್ಷಗಳ ಕಾಲ ವಿಚಕ್ಷಣತೆಯಿಂದ ಪರಿಪಾಲಿಸಿ; ಆದರ್ಶ ಪೀಠಾಧಿಪತಿಗಳೂ; ಜ್ಞಾನ ಭಕ್ತಿ ವೈರಾಗ್ಯ ಪೂರ್ಣರಾದ ತಪಸ್ವಿಗಳೆಂದೂ, ಸೌಶೀಲ್ಯಾದಿ ಸದ್ಗುಣ ಸಂಪದ್ಭರಿತರೆಂದೂ ಸರ್ವರಿಂದಲೂ ಸ್ತುತ್ಯರಾಗಿ; ಶ್ರೀ ಹರಿ ವಾಯು ಗುರುಗಳ ಪರಮಾನುಗ್ರಕ್ಕೆ ಪಾತ್ರರಾಗಿ ಪುಷ್ಯ ಶುದ್ಧ ದ್ವಿತೀಯಾ ಶ್ರೀ ಕ್ಷೇತ್ರ ಮಂತ್ರಾಲಯಪುರಾಧೀಶರ ಪರಮ ಪವಿತ್ರವಾದ ಸನ್ನಿಧಾನದಲ್ಲಿ ಬೃಂದಾವನಸ್ಥರಾದರು.
" ಶ್ರೀ ಅಭಿನವ ಪ್ರಾಣೇಶದಾಸರ " ಕಣ್ಣಲ್ಲಿ...
ರಾಗ : ಬಾಗೇಶ್ರೀ ತಾಳ : ಝಂಪೆ
ತೆರಳಿದರು ತೆರಳಿದರು
ಹರಿಯ ಪುರಕೆ ।
ವರ ಸುವ್ರತಿಗಳಾದ
ಸುಯಮೀಂದ್ರ ಗುರುವರರು ।। ಪಲ್ಲವಿ ।।
ಗುರು ರಾಘವೇಂದ್ರ
ರಾಯರ ದಿವ್ಯ ಪೀಠದಲಿ ।
ವರುಷ ವೇದಾಂತ
ಸಾಮ್ರಾಟರೆನಿಸಿ ।
ಮರುತ ಮತ ಸಿಂಧುವನು
ಧರೆಯೊಳೆಲ್ಲವ ಮೆರೆಸಿ ।
ಶರಣ ಜನ ಮಂದಾರ
ನೆನಿಸಿ ಶೋಭಿಸಿದವರು ।। ಚರಣ ।।
ಪ್ರಾಣ ಮತ ಶರಧಿಗೆ
ಯಾಮೀರರೆಂದೆನಿಪ ।
ಜ್ಞಾನಿ ವರ್ಯರು
ಹರಿಯ ಕರೆಯಾಲಿಸೀ ।
ಧೇನಿಸುತ ಗುರು ಚರಣ
ರಾಜ ನಗರವ ತ್ಯಜಿಸಿ ।
ಸಾನುರಾಗದಿ ಮಂತ್ರ
ಮಂದಿರಕೆ ಬಂದವರು ।। ಚರಣ ।।
ಪರಿಭವಾಬ್ಧಿದ ಪುಷ್ಯ
ಗುರುವಾರ ಸೀತ ದ್ವಿತೀಯಾ ।
ಪರಿಮಳಾಚಾರ್ಯರ
ಚರಣ ಸನ್ನಿಧಿಯಲ್ಲಿ ।
ಶರ ಧನುರ್ಧಾರಿ
ಶ್ರೀ ಮೂಲರಾಮನ ತುತಿಸಿ ।
ಶರಜಾಧವಭಿನವ
ಪ್ರಾಣೇಶವಿಠ್ಠಲೆನುತ ।। ಚರಣ ।।
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ


