ಬೆಂಗಳೂರು: ಬಾಂಗ್ಲಾದೇಶದ ಮೈಮನ್‌ಸಿಂಗ್ ಪ್ರದೇಶದಲ್ಲಿ ಹಿಂದೂ ದೀಪು ಚಂದ್ರ ದಾಸ್ ಅವರನ್ನು ಮತೀಯ ಗುಂಪೊಂದು ಮರಕ್ಕೆ ಕಟ್ಟಿಹಾಕಿ ಜೀವಂತವಾಗಿಯೇ ಬೆಂಕಿಗೆ ಆಹುತಿಗೊಳಿಸಿದೆ. ಜೊತೆಗೆ ಬಾಂಗ್ಲಾದೇಶದಲ್ಲಿ ಹಿಂದೂ ಸಮಾಜವನ್ನು ಗುರಿಯಾಗಿಸಿಕೊಂಡು ಅವರ ಮನೆಗಳು ಹಾಗೂ ಅಂಗಡಿಗಳನ್ನು ಸುಡಲಾಗುತ್ತಿದೆ. ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು ಈ ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿ, ಮಾನ್ಯ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಶ್ರೀ. ಅಮಿತ್ ಶಾ ಹಾಗೂ ಬಾಂಗ್ಲಾದೇಶದ ಹೈ ಕಮಿಷನರ್ ಅವರ ಹೆಸರಿನಲ್ಲಿ ಕ್ರಮಕ್ಕಾಗಿ ಬೆಂಗಳೂರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದೆ. ಈ ಸಂಧರ್ಭದಲ್ಲಿ ಶ್ರೀರಾಮ ಸೇನೆಯ ಕಾರ್ಯಾಧ್ಯಕ್ಷರಾದ ಶ್ರೀ.ಸುಂದ್ರೇಶ್ ನರ್ಗಲ್, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ, ಶ್ರೀರಾಮ ಸೇನೆ ನಗರ ಅಧ್ಯಕ್ಷರಾದ ಶ್ರೀ.ಮಂಜುನಾಥ, ದುರ್ಗಾ ಸೇನೆಯ ಸೌ. ಸರಸ್ವತಿ ಪ್ರವೀಣ, ಶ್ರೀ. ಮಲ್ಲಿಕಾರ್ಜುನ ರಾಜು, ವಕೀಲರಾದ ಶ್ರೀ. ಕೆ ಕೃಷ್ಣಸ್ವಾಮಿ ಮುಂತಾದವರು ಉಪಸ್ಥಿತಿ ಇದ್ದರು
ಮನವಿ ಪತ್ರದಲ್ಲಿ ನಿರಂತರ ನಡೆಯುತ್ತಿರುವ ಹಿಂದೂ ವಿರೋಧಿ ಹಿಂಸಾಚಾರವನ್ನು ತಡೆಯಲು ಭಾರತ ಸರ್ಕಾರವು ಬಾಂಗ್ಲಾದೇಶದ ಮೇಲೆ ಆರ್ಥಿಕ, ವ್ಯಾಪಾರಿಕ ಹಾಗೂ ರಾಜಕೀಯ ನಿರ್ಬಂಧಗಳನ್ನು ವಿಧಿಸಬೇಕೆಂದು ಬೇಡಿಕೆ ಇಡಲಾಗಿದೆ. ಜೊತೆಗೆ ಬಾಂಗ್ಲಾದೇಶದ ಉಗ್ರ ಹಾಗೂ ಮತೀಯ ಗುಂಪುಗಳ ವಿರುದ್ಧ ಕಠಿಣ ಮಿಲಿಟರಿ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆಯೂ ವ್ಯಕ್ತವಾಗಿದೆ.ಬಾಂಗ್ಲಾದೇಶದ ಪ್ರಮುಖ ಯುವ ನಾಯಕ ಶರೀಫ್ ಉಸ್ಮಾನ್ ಹಾದಿ ಅವರ ಮೇಲೆ ಢಾಕಾದಲ್ಲಿ ಗುಂಡಿನ ದಾಳಿ ನಡೆದಿದೆ. ಅವರ ಮರಣದ ನಂತರ ಹಿಂದೂ ಸಮಾಜದ ವಿರುದ್ಧ ಸಂಯೋಜಿತ ಹಿಂಸಾಚಾರ ಆರಂಭವಾಗಿದೆ. ಹಿಂದೂ ಮನೆಗಳು, ಅಂಗಡಿಗಳು ಮತ್ತು ದೇವಸ್ಥಾನಗಳನ್ನು ಗುರಿಯಾಗಿಸಲಾಗುತ್ತಿದೆ. ನೇರ ವಿಡಿಯೋಗಳು, ಸಾಕ್ಷ್ಯಗಳು ಹಾಗೂ ಅಂತರರಾಷ್ಟ್ರೀಯ ಮಾಧ್ಯಮಗಳು ಸತ್ಯವನ್ನು ಬಹಿರಂಗಪಡಿಸಿವೆ. ಆದರೂ ಬಾಂಗ್ಲಾದೇಶ ಸರ್ಕಾರ ಕ್ರಮ ಕೈಗೊಳ್ಳುವುದನ್ನು ತಪ್ಪಿಸುತ್ತಿದೆ. ಜನಗಣನೆಯ ಪ್ರಕಾರ ೧೯೪೧ರಲ್ಲಿ ೨೮% ಇದ್ದ ಹಿಂದೂ ಜನಸಂಖ್ಯೆ ಈಗ ಕೇವಲ ೭.೮% ಮಾತ್ರ ಉಳಿದಿದೆ. ಇದು ಹಿಂದೂ ನಿರ್ಮೂಲನೆಯ ಪ್ರಕ್ರಿಯೆಯಾಗಿದೆ.