ಬೆಂಗಳೂರು: ಕರುಳಿನ ಅತ್ಯಂತ ಸಂಕೀರ್ಣ ಸಮಸ್ಯೆಗೆ ಒಳಗಾಗಿದ್ದ ನವಜಾತ ಶಿಶುವನ್ನು ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ರಕ್ಷಿಸಿರುವ ಘಟನೆ ನಗರದ ವಾಸವಿ ಆಸ್ಪತ್ರೆಯಲ್ಲಿ ನಡೆದಿದೆ.ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಐಟಿಪಿ ಸಮಸ್ಯೆಯಿಂದಾಗಿ ಪ್ಲೇಟ್‌ಲೆಟ್ ಸಂಖ್ಯೆ ಕಡಿಮೆಯಿದ್ದುದರಿಂದ ಸಿಸೇರಿಯನ್‌ಗೆ ಒಳಪಡಿಸಲಾಯಿತು. ಜನಿಸಿದ ಮಗು ಆರಂಭದಲ್ಲಿ ಆರೋಗ್ಯವಾಗಿದ್ದರೂ, ತಾಯಿ ಮೊದಲ ಬಾರಿ ಹಾಲುಣಿಸಿದಾಗ ಮಗು ತೀವ್ರವಾದ ಹಸಿರು ಬಣ್ಣದ ವಾಂತಿ (Bilious vomiting) ಮಾಡಿಕೊಂಡಿತು. ಇದೊಂದು ಕರುಳಿನ ಸಮಸ್ಯೆ ಎಂದು ಅರಿತು ತಕ್ಷಣವೇ ಎನ್‌ಐಸಿಯು ಗೆ ದಾಖಲಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಿದೆವು ಎಂದು ಮಕ್ಕಳ ತಜ್ಞರಾದ ಡಾ. ಅಶೋಕ್ ಎಂ.ವಿ ಹೇಳಿದರು.
ಮಕ್ಕಳ ಶಸ್ತ್ರಚಿಕಿತ್ಸಕರಾದ ಡಾ. ಶ್ರೀಧರ್ ಮೂರ್ತಿ ಅವರು ಮಗುವಿಗೆ ಶಸ್ತ್ರಚಿಕಿತ್ಸೆ ಕೈಗೊಂಡರು. ಈ ವೇಳೆ ಮಗುವಿಗೆ 'ಇಲಿಯೊ-ಜೆಜುನಲ್ ಅಟ್ರೆಸಿಯಾ' (Ileo-jejunal atresia) ಎಂಬ ಅಪರೂಪದ ಕರುಳಿನ ಸಮಸ್ಯೆ ಇರುವುದು ಕಂಡುಬಂದಿತು. ಅಲ್ಲದೆ ಹೊಟ್ಟೆಯೊಳಗೆ ಕರುಳುಗಳು ಅಂಟಿಕೊಂಡಿದ್ದವು (Adhesions) ಮತ್ತು ಕೆಲವು ಕಡೆ ಕರುಳು ತೂತಾಗಿತ್ತು. ಇದೊಂದು ಅತ್ಯಂತ ಅಪರೂಪದ ಪ್ರಕರಣ. ಒಂದು ವೇಳೆ ಶಸ್ತ್ರಚಿಕಿತ್ಸೆ ವಿಳಂಬವಾಗಿದ್ದರೆ ಕರುಳು ಕೊಳೆತು ಹೋಗುವ ಸಾಧ್ಯತೆಯಿತ್ತು, ಅದರಿಂದ ಪ್ರಾಣಾಪಾಯ ಕೂಡ ಇತ್ತು ಎಂದು ಡಾ. ಅಶೋಕ್ ತಿಳಿಸಿದರು.
ಶಸ್ತ್ರಚಿಕಿತ್ಸೆಯ ನಂತರವೂ ಅಗಾಧ ಸವಾಲುಗಳಿದ್ದು, ಮಗುವಿಗೆ ವೆಂಟಿಲೇಟರ್ ಬೆಂಬಲ ಮತ್ತು ಪ್ಲೇಟ್‌ಲೆಟ್ ವರ್ಗಾವಣೆ ಮಾಡುವ ಅಗತ್ಯವಿತ್ತು. ಮಗುವಿಗೆ ಕಾಮಾಲೆ ರೋಗ ಕೂಡ ಕಾಣಿಸಿಕೊಂಡಿತು, ಆದರೂ ಸಹ ವೈದ್ಯರ ನಿರಂತರ ಕಾಳಜಿಯಿಂದಾಗಿ ಮಗು ಕ್ರಮೇಣ ಚೇತರಿಸಿಕೊಂಡಿತು. ತದನಂತರ ಹಂತ ಹಂತವಾಗಿ ಮಗುವಿಗೆ ಹಾಲುಣಿಸಲು ಸಲಹೆ ನೀಡಿದೆವು. ಈಗ ಮಗು ಸಂಪೂರ್ಣ ಆರೋಗ್ಯವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ತಜ್ಞರು ವಿವರಿಸಿದರು.
ಗರ್ಭಾವಸ್ಥೆಯಲ್ಲೇ ಇಂತಹ ಸಮಸ್ಯೆಗಳನ್ನು ಪತ್ತೆಹಚ್ಚುವುದರಿಂದ ಮಗುವಿನ ಪ್ರಾಣ ಉಳಿಸಲು ಸಾಧ್ಯ ಎನ್ನುತ್ತಾರೆ ಮಕ್ಕಳ ತಜ್ಞರಾದ ಡಾ. ಅಶೋಕ್ ಎಂ.ವಿ.