ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಕ್ರಮ – ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ.ಎಂ

varthajala
0

 ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮದಿಂದ ಸರ್ಕಾರ ನೀಡುತ್ತಿರುವ ಯೋಜನೆಗಳನ್ನು ಮಧ್ಯವರ್ತಿಗಳ ಹಾವಳಿಯಿಲ್ಲದೇ ಸಮುದಾಯದ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಕ್ರಮ ವಹಿಸಲಾಗುವುದು ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಮಪ್ಪ ಎಂ. ಅವರು ತಿಳಿಸಿದರು.ಇಂದು ಬೆಂಗಳೂರಿನ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭೋವಿ ಅಭಿವೃದ್ಧಿ ನಿಗಮದ ಅಧಿಕಾರ ವಹಿಸಿಕೊಂಡು ಕೆಲವು ದಿನಗಳು ಕಳೆದಿದ್ದು, ಈ ದಿನಗಳಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ನಿಗಮದ ಕಾರ್ಯವೈಖರಿಗಳ ಬಗ್ಗೆ ಪರಿಶೀಲಿಸಲಾಗಿದೆ. ರಾಜ್ಯದ ಎಲ್ಲಾ 224 ಶಾಸಕರುಗಳಿಗೆ ಪತ್ರ ಬರೆದು ಫಲಾನುಭವಿಗಳನ್ನು ಶೀಘ್ರವಾಗಿ ಆಯ್ಕೆ ಮಾಡಿ ಕಳುಹಿಸಲು ತಿಳಿಸಲಾಗಿದೆÉ ಎಂದರು.

ಭೋವಿ, ವಡ್ಡರ, ಸಮುದಾಯದ ಏಳಿಗೆಗಾಗಿ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳನ್ನು ಬಡವರು, ಕೂಲಿಕಾರ್ಮಿಕರಿಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಮಹಿಳಾ ಸಬಲೀಕರಣಕ್ಕಾಗಿ ಭೂ ಒಡೆತನ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಸಮುದಾಯದ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ನೀಡಲಾಗುವುದು. 2025-26 ನೇ ಸಾಲಿನಲ್ಲಿ  169 ಫಲಾನುಭವಿಗಳು ಭೂ ಒಡೆತನ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಸರ್ಕಾರದಿಂದ ಮಂಜೂರು ಮಾಡಿದ ಭೂಮಿಯನ್ನು ಶಾಶ್ವತವಾಗಿ ಪರಭಾರೆ ಮಾಡುವಂತಿಲ್ಲ ಎಂದು ತಿಳಿಸಿದರು.
ಮೈಕ್ರೋ ಕ್ರೆಡಿಟ್ ಯೋಜನೆಯಡಿ ಸಮುದಾಯದ ಕನಿಷ್ಟ 10 ಮಹಿಳಾ ಸದಸ್ಯರಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ ಆದಾಯ ಗಳಿಸುವ ಉತ್ಪಾದನಾ ಚಟುವಟಿಕೆಗಳಿಗೆ ನಿಗಮದಿಂದ ನೇರವಾಗಿ 5.00 ಲಕ್ಷ ರೂ. ಆರ್ಥಿಕ ಸಹಾಯ ಮತ್ತು ಸಾಲಸೌಲಭ್ಯ ನೀಡಲಾಗುವುದು. ಇದರಲ್ಲಿ ರೂ. 2.50 ಲಕ್ಷಗಳ ಸಹಾಯಧನ ಮತ್ತು ರೂ.2.50 ಲಕ್ಷ ರೂ. ಸಾಲವಾಗಿರುತ್ತದೆ. ಸಾಲದ ಮೊತ್ತವನ್ನು 36 ಸಮಕಂತುಗಳಲ್ಲಿ ಶೇಕಡ 4% ರ ಬಡ್ಡಿ ದರದಲ್ಲಿ ಮರುಪಾವತಿ ಮಾಡಬೇಕಾಗಿರುತ್ತದೆ.

ಬ್ಯಾಂಕ್ ಸಹಯೋಗದಲ್ಲಿ ಉದ್ಯಮಶೀಲತೆ ಯೋಜನೆಯಡಿ ಭೋವಿ ಸಮುದಾಯದ ನಿರುದ್ಯೋಗ ಯುವಕ – ಯುವತಿಯರಿಗೆ ಆರ್ಥಿಕ ಅಭಿವೃದ್ಧಿ ಹೊಂದುವ ಸಲುವಾಗಿ, ಸಣ್ಣ ಕೈಗಾರಿಕೆ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋಗ ಘಟಕಗಳನ್ನು ಆಯೋಜಿಸಲು ಮತ್ತು ಸರಕು ಸಾಗಾಣಿಕೆ ಮತ್ತು ಪ್ರವಾಸಿ ವಾಹನ ಖರೀದಿಸಲು ಸೌಲಭ್ಯ ಕಲ್ಪಿಸಲಾಗುವುದು.
ಸ್ವಾವಲಂಭಿ ಸಾರಥಿ ಯೋಜನೆಯಡಿ ಸರಕು ವಾಹನ ಟ್ಯಾಕ್ಸಿ ಖರೀದಿಲು ಶೇಕಡ 75 ರಷ್ಟು ಸಹಾಯಧನ ನೀಡಲಾಗುವುದು. ಈ ಯೋಜನೆಯ ದುರುಪಯೋಗ ತಪ್ಪಿಸಲು ಸೌಲಭ್ಯ ಪಡೆದ ಫಲಾನುಭವಿಗಳ ವಾಹನಗಳ ಮೇಲೆ, ನಿಗಮದ ಲೋಗೋ ಮತ್ತು ಸ್ಟಿಕರ್ ಅಂಟಿಸಲಾಗುವುದು ಹಾಗೂ ಫಲಾನುಭವಿಗಳಿಗೆ 3 ತಿಂಗಳಿಗೊಮ್ಮೆ ಕಛೇರಿಗೆ ಹಾಜರಾಗುವಂತೆ ತಿಳಿಸಿ ವಾಹನಗಳನ್ನು ಪರಿಶೀಲಿಸಿ ಪೋಟೋಗಳನ್ನು ಅಪ್‍ಲೋಡ್ ಮಾಡುವಂತೆ ಜಿಲ್ಲಾ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ.

ಗಂಗಾ ಕಲ್ಯಾಣ ಯೋಜನೆಯಡಿ ಸಣ್ಣ ಮತ್ತು ಅತಿ ಸಣ್ಣ ರೈತರು ಹೊಂದಿರುವ ಕನಿಷ್ಟ 1.20 ಎಕರೆಯಿಂದ ಗರಿಷ್ಠ 5 ಎಕರೆ ಖುಷ್ಕಿ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಸಿ, ಪಂಪ್ ಸೆಟ್ ಅಳವಡಿಸಿ ವಿದ್ಯುದ್ದೀಕರಣಗೊಳಿಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಕೋಲಾರ ಜಿಲ್ಲೆಗಳ ಪ್ರತಿ ಫಲಾನುಭವಿಗಳಿಗೆ ಘಟಕ ವೆಚ್ಚ 4.75 ಲಕ್ಷ ರೂ. ಗಳನ್ನು ಹಾಗೂ ಇತರೆ ಜಿಲ್ಲೆಗಳನ್ನು 3.75 ಲಕ್ಷ ಗಳನ್ನು ರೂ.ಗಳನ್ನು ಒದಗಿಸಲಾಗುವುದು. ಈ ಯೋಜನೆಯಡಿ ಉತ್ತಮ ಗುಣಮಟ್ಟದ ಮೋಟಾರು, ಪಂಪ್ ಸೆಟ್‍ಗಳು ಇತರೆ ಉಪಕರಣಗಳನ್ನು ಸಮರ್ಪಕವಾಗಿ ಪೂರೈಸದಿದ್ದರೆ ಅಂತಹ ಪೂರೈಕೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ತಿಳಿಸಿದರು.
ಭೋವಿ ಸಮುದಾಯದವರು ಅನ್ಯ ಸಮುದಾಯದವರಿಂದ ದೌರ್ಜನ್ಯಕ್ಕೆ ಒಳಪಟ್ಟು ಅಂಗವೈಕಲ್ಯಕ್ಕೆ ತುತ್ತಾಗಿರುವಂತಹ ಹಾಗೂ ಆಕಸ್ಮಿಕ ಮರಣ ಹೊಂದಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಗಮದಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಅಭಿವೃದ್ಧಿ ಯೋಜನೆಗಳಡಿ ಸೌಲಭ್ಯ ಒದಗಿಸಲಾಗುವುದು.
ಭೋವಿ, ವಡ್ಡರ, ಸಮುದಾಯದಲ್ಲಿ ಅವಿದ್ಯಾಂತರು ಹೆಚ್ಚಾಗಿದ್ದು, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲು ಕ್ರಮವಹಿಸಲಾಗುತ್ತಿದೆ. ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಸಮುದಾಯದ 18 ರಿಂದ 50 ವರ್ಷದೊಳಗಿನ  ವಯೋಮಾನದವರಿಗೆ ಜನವರಿ 10 ಮತ್ತು 11 ರಂದು ಎರಡು ದಿನಗಳ ಕಾರ್ಯಾಗಾರವನ್ನು ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

2025-26 ನೇ ಸಾಲಿನಲ್ಲಿ ಸರ್ಕಾರ 93.75 ಕೋಟಿ ರೂ. ಅನುದಾನ ಒದಗಿಸಿದ್ದು, ಇದರಲ್ಲಿ 68.81 ಕೋಟಿ ರೂ. ಬಳಕೆಯಾಗಿದೆ. ಉಳಿದ ಅನುದಾನವನ್ನು ಈ ವರ್ಷದ ಅಂತ್ಯದೊಳಗೆ ಯೋಜನೆಗಳಿಗೆ ವಿನಿಯೋಗಿಸಲಾಗುವುದು. ಈ ವರ್ಷದ ಆಯವ್ಯಯದಲ್ಲಿ 300 ಕೋಟಿ ರೂ.ಗಳ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.  
ಜಿಲ್ಲಾ ವ್ಯವಸ್ಥಾಪಕರಿಗೆ ಆಯಾ ಜಿಲ್ಲೆಯಿಂದ ಆಯ್ಕೆಯಾದ ಫಲಾನುಭವಿಗಳನ್ನು ಪಟ್ಟಿಯನ್ನು ಅತಿ ಶೀಘ್ರವಾಗಿ ಸಲ್ಲಿಸಲು ಸೂಚಿಸಲಾಗಿದೆ. ಇಲ್ಲದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

Post a Comment

0Comments

Post a Comment (0)