ಬೆಳಗಾವಿ / ಬೆಂಗಳೂರು:-ಬೆಳಗಾವಿ, ವಿಜಯಪುರ, ಧಾರವಾಡ ಒಳಗೊಂಡಂತೆ ಉತ್ತರ ಕರ್ನಾಟಕದಲ್ಲಿ ಡಿಫೆನ್ಸ್ ಕಾರಿಡಾರ್ ನಿರ್ಮಾಣಕ್ಕೆ ಸರ್ಕಾರ ಪ್ರಯತ್ನ ನಡೆಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಭೂತ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ಹೇಳಿದರು.ಇಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ಸಮಯದಲ್ಲಿ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇಶದ ಏರೋಸ್ಪೇಸ್ ಹಾಗೂ ಡಿಫೆನ್ಸ್ ಕ್ಷೇತ್ರಕ್ಕೆ ನಮ್ಮ ರಾಜ್ಯ ಶೇ. 65 ರಷ್ಟು ಕೊಡುಗೆ ನೀಡುತ್ತಿದೆ. ನಮ್ಮ ರಾಜ್ಯವನ್ನು ಎಕೋ ಸ್ಪೇಸ್ ನಲ್ಲಿಯೂ ಮುಂಚೂಣಿ ರಾಜ್ಯವನ್ನಾಗಿ ಪರಿಗಣಿಸಲಾಗಿದೆ. ಬೆಳಗಾವಿ, ವಿಜಯಪುರ, ಧಾರವಾಡ ಒಳಗೊಂಡ ಪ್ರದೇಶದಲ್ಲಿ ಬಹುಮುಖ್ಯವಾದ ಡಿಫೆನ್ಸ್ ಕಾರಿಡಾರ್ ನಿರ್ಮಾಣಕ್ಕಾಗಿ ಮುಖ್ಯಮಂತ್ರಿಗಳು ಹಾಗೂ ನಾವು ನಿಯೋಗದೊಂದಿಗೆ ತೆರಳಿ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಡಿಫೆನ್ಸ್ ಕಾರಿಡಾರ್ ನಿರ್ಮಾಣಕ್ಕಾಗಿ ಬೇಡಿಕೆ ಸಲ್ಲಿಸಲಾಗಿದ್ದು, ಅವರೂ ಕೂಡ ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಈ ನಿಟ್ಟಿನಲ್ಲಿ ಸರ್ವ ಪಕ್ಷ ಶಾಸಕರುಗಳು ಬೆಂಬಲವಾಗಿ ನಿಂತು, ಈ ಯೋಜನೆ ಸಾಕಾರಗೊಳಿಸಬೇಕಿದೆ ಎಂದು ತಿಳಿಸಿದ ಸಮಯದಲ್ಲಿ ಉತ್ತರಿಸಿದ ಸಚಿವರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಏರೋಸ್ಪೇಸ್ ಪಾರ್ಕ್ ನಿರ್ಮಾಣ ಸಂಬಂಧಿಸಿದಂತೆ, 13 ಗ್ರಾಮಗಳಿಂದ 1,777 ಎಕರೆ ಭೂಮಿಯನ್ನು ಭೂಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆಯಿಂದ ಕೈಬಿಡಲು, ಕಳೆದ ಡಿ. 06 ರಂದು ಅಧಿಸೂಚನೆ ಹೊರಡಿಸಿದ್ದು, ಈ ಸಂಪೂರ್ಣ ಪ್ರದೇಶವನ್ನು ಹಸಿರು ವಲಯವನ್ನಾಗಿ ಮುಂದುವರೆಸುವ ಸಲುವಾಗಿ ವಿಶೇಷ ಕೃಷಿ ವಲಯ ಎಂದು ಘೋಷಿಸಲಾಗಿದೆ.