ಸ್ಪರ್ಧಾರ್ಥಿಗಳು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು - ನಿತೇಶ್ ಪಾಟೀಲ್

varthajala
0

 ಮೈಸೂರು / ಬೆಂಗಳೂರು: ಸ್ಪರ್ಧಾರ್ಥಿಗಳು ಕಲಿಕಾ ಶ್ರದ್ದೆಯನ್ನು ಮೈಗೂಡಿಸಿಕೊಂಡು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಹೀಗೆ ಕಲಿಕಾ ತರಬೇತಿಯು ಸಹ ನಿರಂತರವಾಗಿರಬೇಕು ಎಂದು ಮೈಸೂರು ಕಂದಾಯ ವಿಭಾಗದ ಪ್ರಾದೇಶಿಕ ಆಯುಕ್ತರಾದ ನಿತೇಶ್ ಪಾಟೀಲ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಇಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬ್ಯಾಂಕಿಂಗ್ ಮತ್ತು ಕೇಂದ್ರ ಸರ್ಕಾರದ ಹುದ್ದೆಗಳ ನೇಮಕಾತಿ ಪರೀಕ್ಷೆಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ‘ಮುಕ್ತಭಂಡಾರʼ ಅಧ್ಯಯನ ಪುಸ್ತಕವನ್ನು ಬಿಡುಗಡೆ ಮಾಡಿ ಶುಭ ಹಾರೈಸಿ ಮಾತನಾಡಿದರು.ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹುದ್ದೆ ಪಡೆದಾಗ ಮಾತ್ರ ಅದು ಸಮಾರೋಪ ಆಗುವುದು. 50 ದಿನದ ಈ ತರಬೇತಿ ಶಿಬಿರ ನಿಮಗೆ ತುಂಬಾ ಉಪಯುಕ್ತವಾಗುತ್ತದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಸಿಗುವ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಪರೀಕ್ಷೆಗೆ ಸಿದ್ಧರಾಗಿ ಎಂದು ಹೇಳಿದರು.

ನೇಮಕಾತಿಗಳು ಪ್ರಾರಂಭವಾದಾಗ ಲಕ್ಷ ಲಕ್ಷ ಜನ ನೋಂದಾಣಿಯಾಗುತ್ತಾರೆ. ಆದರೆ ಆಯ್ಕೆ ಆಗುವುದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಕೆಲವರು ಪರೀಕ್ಷೆ ಭಯದಿಂದಲೆ ದೂರ ಉಳಿದರೆ. ಇನ್ನಷ್ಟು ಜನ ಕೇವಲ ನೋಂದಣಿಗಾಗಿ ಅಪ್ಲೈ ಮಾಡುತ್ತಾರೆ. ಹೀಗಾಗಿ ತುಂಬಾ ಗಂಭೀರವಾಗಿ ಕುಳಿತು ಓದಿದವರಿಗೆ ಮಾತ್ರ ಸರ್ಕಾರಿ ಕೆಲಸ ಸಿಗುವುದು ಎಂದರು.
ಯುಪಿಎಸ್‍ಸಿ, ಕೆಪಿಎಸ್‍ಸಿ ನಡೆಸುವ ನೇಮಕಾತಿಯ ಎಲ್ಲಾ ಪರೀಕ್ಷೆಗಳನ್ನು ಎದುರಿಸಿ. ಯಾವುದೂ ದೊಡ್ಡದು, ಚಿಕ್ಕದು ಎಂದು ವಿಂಗಡಿಸಿಕೊಳ್ಳಬೇಡಿ, ಪಿಡಿಓ ಪರೀಕ್ಷೆ ಸಹ ಬರೆಯಿರಿ. ಎಷ್ಟು ಪರೀಕ್ಷೆ ಬರೆಯುತ್ತೀರಿ ಅಷ್ಟು ಚುರುಕಾಗುತ್ತೀರಿ. ನಿಮ್ಮ ಗುರಿ ತಲುಪಲು ಸಹ ಇದು ಸಹಕಾರಿಯಾಗಲಿದೆ. ನಾನು ಯುಪಿಎಸ್ಸಿ ಓದುವಾಗ ಸಣ್ಣ ಸಣ್ಣ ಪರೀಕ್ಷೆಗಳನ್ನು ಬರೆದಿದ್ದೆ ಎಂದು ವಿವರಿಸಿದರು.
ಬ್ಯಾಂಕಿಂಗ್ ಪರೀಕ್ಷೆಗಳನ್ನು ಬರೆಯುವಾಗ ಮಾಕ್ ಪರೀಕ್ಷೆಗಳನ್ನು ಹೆಚ್ಚೆಚ್ಚು ತೆಗೆದುಕೊಳ್ಳಿ. ಅದು ನಿಮಗೆ ಸಮಯ ಹಾಗೂ ನಿಮ್ಮ ತಪ್ಪುಗಳ ಅರಿವನ್ನು ಸರಿಪಡಿಸುತ್ತ ಹೋಗುತ್ತದೆ. ಓದುವ ಪ್ರತಿಯೊಂದನ್ನು ನೋಟ್ಸ್ ಮಾಡಿಕೊಳ್ಳಬೇಕು. ಜೊತೆಗೆ ಮುಖ್ಯವಾದುದನ್ನು ಮಾರ್ಕ್ ಮಾಡಿ ಇಟ್ಟುಕೊಳ್ಳಬೇಕು.
 
ಪರೀಕ್ಷೆ ಹತ್ತಿರ ಬಂದಂತೆ ಅವುಗಳೆಲ್ಲಾ ಪುನರಾವರ್ತಿಸಬೇಕು. ಮಾನಸಿಕ ಸಿದ್ಧತೆ, ಕಠಿಣ ಪರಿಶ್ರಮ ಹಾಗೂ ತಿಳಿದುಕೊಂಡದನ್ನು ಅಭಿವ್ಯಕ್ತಿಸುವ ರೀತಿ ನಿಮ್ಮನ್ನು ಯಶಸ್ಸಿನ ಶಿಖರದತ್ತ ಕೊಂಡೊಯ್ಯುತ್ತವೆ ಎಂದು ಸಲಹೆ ನೀಡಿದರು.  
ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅವರು ಮಾತನಾಡಿ, ಕಲಿಕೆ ಎಂಬುದು ದಿನನಿತ್ಯದ ಪಯಣ. ಅದು ಒಂದು ದಿನದಲ್ಲಿ ಮುಗಿಯುವುದಿಲ್ಲ. ಹೀಗಾಗಿ ನಿಮ್ಮ ಕಲಿಕೆ ನಿರಂತರವಾಗಿರಲಿ ಎಂದರು. ನೀವು ನಮ್ಮ ವಿಶ್ವವಿದ್ಯಾಲಯಕ್ಕೆ ಬರುವಾಗ ಹೇಗೆ ಇದ್ದಿರಿ, ಈವಾಗ ಇಲ್ಲಿ ಏನನ್ನು ಕಲಿತಿದ್ದಿರಿ ಎಂಬುದನ್ನು ನೀವೆ ಮನದಟ್ಟು ಮಾಡಿಕೊಳ್ಳಬೇಕು. ನಿಮಗೆ ಗುರಿ ಇರಬೇಕು. ಗುರಿ ಇಟ್ಟುಕೊಂಡು ಮುಂದೆ ಸಾಗಿ ಎಂದು ಹೇಳಿದರು.
ಸಮಾರಂಭದಲ್ಲಿ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯ ನಾರಾಯಣಗೌಡ, ಸಿದ್ದೇಶ್ ಹೊನ್ನೂರ್, ಬಿ.ಗಣೇಶ್ ಕೆ.ಜಿ.ಕೊಪ್ಪಲ್, ಡಾ. ಈ ಶಿವಪ್ರಸಾದ್, ಡಾ. ನವೀನ್ ಕುಮಾರ್, ಡಾ. ಬೀರಪ್ಪ, ಚಲನಚಿತ್ರ ನಿರ್ದೇಶಕ ಬಿ.ಸಿದ್ದೇಗೌಡ, ರಂಗ ಕಲಾವಿದ ಎಸ್.ಡಿ. ದಯಾನಂದ್ ಇತರರು ಇದ್ದರು.

Post a Comment

0Comments

Post a Comment (0)