ಜಾಲಹಳ್ಳಿ ಅಂಡರ್‍ಪಾಸ್ ಸಮಸ್ಯೆಗೆ ಶೀಘ್ರ ಸಭೆ ನಡೆಸಿ ಪರಿಹಾರ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ

varthajala
0

 ಬೆಳಗಾವಿ / ಬೆಂಗಳೂರು: ಬೆಂಗಳೂರು ನಗರ ಪ್ರವೇಶಿಸುವ ಪ್ರಮುಖ ಹೆದ್ದಾರಿಯಲ್ಲಿ ಬರುವ ಜಾಲಹಳ್ಳಿ ಅಂಡರ್ ಪಾಸ್ ಕಾಮಗಾರಿ ಪ್ರಾರಂಭಿಸಲು ಇರುವ ಸಮಸ್ಯೆಯ ಕುರಿತು ಶೀಘ್ರದಲ್ಲಿಯೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಪರಿಹಾರ ಕಂಡುಕೊಳ್ಳಲಾಗುವುದು ಎಂದು ಬೆಂಗಳೂರು ನಗರ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು.ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮುನಿರಾಜು ಎಸ್. ಅವರ ಪ್ರಶ್ನೆಗೆ ಸದನದಲ್ಲಿ ಉತ್ತರಿಸಿದರು.

ಪೀಣ್ಯ ಕೈಗಾರಿಕೆ ಪ್ರದೇಶಕ್ಕೆ ನಿತ್ಯ ಸುಮಾರು 7 ಲಕ್ಷ ಜನ ಬಂದು ಹೋಗುತ್ತಾರೆ. ಅಲ್ಲದೆ ಬೆಂಗಳೂರು ನಗರಕ್ಕೆ ನಿತ್ಯವೂ ವಾಹನ ದಟ್ಟಣೆ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದರಿಂದಾಗಿ ಸಾರ್ವಜನಿಕರಿಗೆ, ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಇದೆ. ಇದಕ್ಕೆ ಸಂಪರ್ಕ ಕಲ್ಪಿಸಬಹುದಾದÀ ಜಾಲಹಳ್ಳಿ ಅಂಡರ್ ಪಾಸ್ ಅನ್ನು 57.22 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಕಳೆದ 2021 ರಲ್ಲಿ ಮೆ: ಪಿಜೆಬಿ ಇಂಜಿನಿಯರ್ಸ್ ಪ್ರೈ.ಲಿ. ರವರಿಗೆ ವಹಿಸಲಾಗಿದೆ. ಕಾಮಗಾರಿಗೆ ಅವಶ್ಯವಿರುವ ಸ್ಥಳದ ಭೂಸ್ವಾಧೀನಕ್ಕೆ 48 ಸ್ವತ್ತಿನ ಮಾಲೀಕರನ್ನು ಗುರುತಿಸಿ ಈಗಾಗಲೇ 22 ಸ್ವತ್ತಿನ ಮಾಲೀಕರಿಗೆ 85.70 ಕೋಟಿ ರೂ. ಪರಿಹಾರ ನೀಡಿದ್ದು, ಉಳಿದ 26 ಸ್ವತ್ತಿನ ಮಾಲೀಕರಿಗೆ ಭೂಸ್ವಾಧೀನ ಪರಿಹಾರ ನೀಡುವ ಕಾರ್ಯ ಬಾಕಿ ಇದೆ. ಭೂ ಮಾಲೀಕರೊಂದಿಗೆ ಮಾತುಕತೆ ನಡೆಸಿ, ಟಿ.ಡಿ.ಆರ್. ಕೊಟ್ಟು ಕಾಮಗಾರಿ ಪ್ರಾರಂಭಿಸಲು ಕೂಡ ಅವಕಾಶವಿದೆ. ಈ ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಲಾಗುವುದು, ಅಲ್ಲದೆ ಈ ಕುರಿತಂತೆ ಸಮಸ್ಯೆಯನ್ನು ಇತ್ಯರ್ಥಪಡಿಸಲು ಯತ್ನಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದರು.

Post a Comment

0Comments

Post a Comment (0)