ಗ್ರಾಮ ಸಭೆಗೆ ಹಾಜರಾಗದ ಅಬಕಾರಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ -ಸಚಿವ ಆರ್.ಬಿ.ತಿಮ್ಮಾಪುರ

varthajala
0

 ಬೆಳಗಾವಿ / ಬೆಂಗಳೂರು: ಗ್ರಾಮ ಸಭೆಗಳಲ್ಲಿ ಕಳ್ಳಭಟ್ಟಿ ಮತ್ತು ನಕಲಿ ಮದ್ಯ ಸೇವನೆಯಿಂದಾಗುವ ದುಷ್ಪರಿಣಾಮಗಳು ಮತ್ತು ಅನಾಹುತಗಳ ಬಗ್ಗೆ ಅರಿವು ಹಾಗೂ ಅಕ್ರಮ ಮದ್ಯ ಮಾರಾಟ ತಡೆಯಲು ಜನ ಜಾಗೃತಿ ಮೂಡಿಸಲಾಗುತ್ತಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಗ್ರಾಮಸಭೆಗಳಿಗೆ ಹಾಜರಾಗದ ಕುರಿತು ದೂರು ಕೇಳಿಬಂದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಅಬಕಾರಿ ಸಚಿವರಾದ ಆರ್.ಬಿ.ತಿಮ್ಮಾಪುರ ಹೇಳಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಮಂಗಳವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಹರಿಹರ ಶಾಸಕರಾದ ಹರೀಶ್.ಬಿ.ಪಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.
ಗ್ರಾಮ ಸಭೆಗಳಲ್ಲಿ ಸ್ಥಳೀಯ ಸರ್ಕಾರೇತರ ಸಂಸ್ಥೆ ಹಾಗೂ ಸ್ತ್ರೀ ಶಕ್ತಿ ಸಂಸ್ಥೆಗಳನ್ನು ತೊಡಗಿಸಿಕೊಂಡು ನಕಲಿ ಮತ್ತು ಅನಧಿಕೃತ ಮದ್ಯದ ಅಕ್ರಮಗಳು ನಡೆಯದಂತೆ ಕ್ರಮ ವಹಿಸಲಾಗುತ್ತಿದೆ. ಅಬಕಾರಿ ಕಾಯ್ದೆ ಹಾಗೂ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ. ರಾಜ್ಯಾದ್ಯಂತ 2023-24 ರಿಂದ 2025-26ನೇ ಸಾಲಿನವರೆಗೆ 1,84,570 ಅಬಕಾರಿ ದಾಳಿಗಳನ್ನು ನಡೆಸಲಾಗಿದೆ. ಒಟ್ಟು 1,01,147 ಪ್ರಕರಣಗಳನ್ನು ದಾಖಲಿಸಲಾಗಿದೆ. 1,09,017 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. 13,66,059 ಲೀಟರ್ ಮದ್ಯ ಹಾಗೂ 27,19,858 ಲೀಟರ್ ಬಿಯರ್ ವಶಪಡಿಸಿಕೊಳ್ಳಲಾಗಿದೆ.
ಹರಿಹರ ವಿಧಾನ ಸಭಾಕ್ಷೇತ್ರ ವ್ಯಾಪ್ತಿಯಲ್ಲಿ 2023-24ನೇ ಸಾಲಿನಲ್ಲಿ ಹಾಗೂ 2025-26ರ ಸಾಲಿನ ಅಕ್ಟೋಬರ್ ಮಾಹೆಯವರೆಗೆ ಒಟ್ಟು 430 ಅಬಕಾರಿ ದಾಳಿಗಳನ್ನು ನಡೆಸಲಾಗಿದೆ. 409 ಆರೋಪಿಗಳನ್ನು ಸರೆ ಹಿಡಿಯಲಾಗಿದೆ. ಜಮೀನು ದೊರಕದ 38 ಪ್ರಕರಣ ಹಾಗೂ ಕಲಂ-15ಎ ಅಡಿ 377 ಪ್ರಕರಣಗಳನ್ನು ದಾಖಲಿಸಲಾಗಿದೆ. ದಾಳಿಯಲ್ಲಿ 24,174 ಲೀಟರ್ ಮದ್ಯ ಹಾಗೂ 22 ಲೀಟರ್ ಬಿಯರ್ ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ತಿಳಿಸಿದರು.

Post a Comment

0Comments

Post a Comment (0)