ಮಂತ್ರಾಲಯಂ : ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಡಿಸೆಂಬರ್ ಒಂಬತ್ತರಂದು ಬೆಂಗಳೂರಿನ ಸಪ್ತಸ್ವರ ಕಲಾ ಕೇಂದ್ರದ ಡಾ|| ರಾಜಲಕ್ಷ್ಮಿ ಸುಧೀಂದ್ರ ಹಾಗೂ ಸುನೀತಾ ಭೂಮಿಕೆಯ ಗುರು ಭೂಮಿಕಾ ಕೌಂಡಿನ್ಯ ಇವರಲ್ಲಿ ಸಂಗೀತಾಭ್ಯಾಸ ಮಾಡುತ್ತಿರುವ ಕು|| ಬಿ. ಸಂಗೀತ ಅವರಿಂದ ನಾದನಮನ ಕಾರ್ಯಕ್ರಮ ಜರುಗಿತು.
ಈ ಭಕ್ತಿಗಾನ ಕಾರ್ಯಕ್ರಮದಲ್ಲಿ "ಶರಣು ಸಿದ್ದಿ ವಿನಾಯಕ" ಎಂಬ ಗಣೇಶನ ಕೃತಿಯೊಂದಿಗೆ ತನ್ನ ಗಾಯನ ಸೇವೆಯನ್ನು ಆರಂಭಿಸಿದ ಸಂಗೀತಾ, ಶ್ರೀ ರಾಘವೇಂದ್ರ ಸ್ವಾಮಿಗಳನ್ನು ಕುರಿತ "ಚಂದ್ರಗುಣಸಾಂದ್ರ", "ಎದ್ದು ಬರುತ್ತಾರೆ ನೋಡೆ", "ಭೋ ಯತಿ ವರದೇಂದ್ರ" ಕೃತಿಗಳ ನಂತರ ಶ್ರೀ ರುದ್ರ ದೇವರ, ಶ್ರೀ ಪ್ರಾಣದೇವರ ಮತ್ತು ಶ್ರೀ ಲಕ್ಷ್ಮೀದೇವಿಯ ಹಾಡುಗಳು ಹಾಡಿದ ನಂತರ ಭಗವಂತನ ಕುರಿತ ಹಲವಾರು ದಾಸರ ಪದಗಳು ಮತ್ತು ಶ್ರೀ ತ್ಯಾಗರಾಜರ ಕೀರ್ತನೆಗಳನ್ನು ಪ್ರಸ್ತುತ ಪಡಿಸಿದರು. ಇವರ ಗಾಯನಕ್ಕೆ ಮೃದಂಗ ವಾದನದಲ್ಲಿ ವಿದ್ವಾನ್ ಶ್ರೀ ಬಾಲಸುಬ್ರಹ್ಮಣ್ಯಂ ಮತ್ತು ಹಾರ್ಮೋನಿಯಂ ವಾದನದಲ್ಲಿ ಶ್ರೀ ವಿಜಯ್ ಮೋಹನ್ ಸಾಥ್ ನೀಡಿದರು. ನಂತರ ಕಾರ್ಯಕ್ರಮದ ಸಂಚಾಲಕರಾದ ಶ್ರೀ ಪದ್ಮನಾಭಾಚಾರ್ಯ ಅವರು ಕಲಾವಿದರಿಗೆ ಪ್ರಶಸ್ತಿ ಪತ್ರ ಹಾಗೂ ಪ್ರಸಾದ-ಮಂತ್ರಾಕ್ಷತೆಯನ್ನು ನೀಡಿ ಹಾರೈಸಿದರು.
