ಬೆಳಗಾವಿ / ಬೆಂಗಳೂರು: ಆಯುಷ್ ಇಲಾಖೆಯಲ್ಲಿನ ವೈದ್ಯಾಧಿಕಾರಿಗಳ ಹುದ್ದೆಯಿಂದ ಹಿರಿಯ ವೈದ್ಯಾಧಿಕಾರಿಗಳ ಹುದ್ದೆಗೆ ಮುಂಬಡ್ತಿ ನೀಡುವುದಕ್ಕೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ಹೇಳಿದರು.ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಬಸವನಗುಡಿ ಶಾಸಕರಾದ ರವಿ ಸುಬ್ರಮಣ್ಯ ಎಲ್.ಎ. ಅವರ ಪ್ರಶ್ನೆಗೆ ಸದನದಲ್ಲಿ ಉತ್ತರಿಸಿದರು.
ಆಯುಷ್ ಇಲಾಖೆಯಲ್ಲಿ ವೈದ್ಯಾಧಿಕಾರಿಗಳ ಹುದ್ದೆಯಿಂದ ಹಿರಿಯ ವೈದ್ಯಾಧಿಕಾರಿಗಳ ಹುದ್ದೆಗೆ ಮುಂಬಡ್ತಿ ಮೂಲಕ ಒಟ್ಟು 95 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಇದರಲ್ಲಿ 65 ಆಯುರ್ವೇದ, 15-ಯುನಾನಿ, 12-ಹೋಮಿಯೋಪಥಿ ಹಾಗೂ ಪ್ರಕೃತಿ ಚಿಕಿತ್ಸೆ ಮತ್ತು ಯೋಗದ 03 ವೈದ್ಯರಿಗೆ ಮುಂಬಡ್ತಿ ನೀಡಬೇಕಿದೆ. ಇಲಾಖೆಯಲ್ಲಿ 116 ಹಿರಿಯ ವೈದ್ಯಾಧಿಕಾರಿಗಳ ಹುದ್ದೆಗಳು ಮಂಜೂರಾಗಿದ್ದು, ಕಳೆದ ಆರೇಳು ವರ್ಷ ಗಳಿಂದ ಹಿರಿಯ ವೈದ್ಯಾಧಿಕಾರಿಗಳ ವೃಂದದಲ್ಲಿ ಹುದ್ದೆಗಳು ಖಾಲಿ ಇವೆ. ವೈದ್ಯಾಧಿಕಾರಿಗಳಿಗೆ ಸ್ಥಾನಪನ್ನ ಬಡ್ತಿ ನೀಡುವುದಕ್ಕೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗಿದ್ದು, ಬಳಿಕ ಮುಂಬಡ್ತಿ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದರು.