ಬೆಂಗಳೂರು: ರಸ್ತೆ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಾರಿಗೆ ಇಲಾಖೆಯು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಫೆಬ್ರವರಿ 1, 2026 ರಂದು ಬೆಂಗಳೂರಿನಲ್ಲಿ ಬೃಹತ್ ‘5K ಸೇಫ್-ಎ-ಥಾನ್’ (Safe-A-Thon) ಆಯೋಜಿಸಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬುಧವಾರ ಶಾಂತಿ ನಗರದಲ್ಲಿರುವ ಸಾರಿಗೆ ಇಲಾಖೆ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವರು, “ನಮ್ಮ ರಸ್ತೆ - ನಮ್ಮ ಸುರಕ್ಷತೆ” ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುವ ಈ ಕಾರ್ಯಕ್ರಮವು ಸಾರ್ವಜನಿಕರ ಜೀವ ರಕ್ಷಣೆಯ ಉದ್ದೇಶ ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಕಳವಳಕಾರಿಯಾಗಿದ್ದು, ಅತಿವೇಗ, ಸಂಚಾರ ನಿಯಮಗಳ ಉಲ್ಲಂಘನೆ ಮತ್ತು ಅಜಾಗರೂಕತೆಯೇ ಇದಕ್ಕೆ ಮುಖ್ಯ ಕಾರಣಗಳಾಗಿವೆ. ಇವುಗಳನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಗುರಿಯಾಗಿದೆ ಎಂದರು.ರಸ್ತೆ ಸುರಕ್ಷತೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬರ ಕರ್ತವ್ಯ. ವಾಕಿಂಗ್, ಸೈಕ್ಲಿಂಗ್ ಅಥವಾ ಓಟದ ಮೂಲಕ ಈ ಅಭಿಯಾನದಲ್ಲಿ ಪಾಲ್ಗೊಂಡು ಸುರಕ್ಷಿತ ಸಂಚಾರದ ಬಗ್ಗೆ ಪ್ರತಿಜ್ಞೆ ಮಾಡೋಣ ಎಂದು ಸಚಿವರು ಕರೆ ನೀಡಿದರು.