ಬೆಂಗಳೂರು, ಜನವರಿ 2026: ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ – ಕರ್ನಾಟಕ ರಾಜ್ಯ ಘಟಕದ ವತಿಯಿಂದ ವಿಪ್ರ ಸಮಾಜದ ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ–ರಾಜಕೀಯ ಚಿಂತನೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವಾಕಾಂಕ್ಷೆಯೊಂದಿಗೆ “ವಿಪ್ರೋತ್ಸವ – 2026” ಎಂಬ ಭವ್ಯ ಹಾಗೂ ಅರ್ಥಪೂರ್ಣ ಕಾರ್ಯಕ್ರಮವನ್ನು ದಿನಾಂಕ 04 ಜನವರಿ 2026 (ಭಾನುವಾರ) ರಂದು ಗಾಯನ ಸಮಾಜ ಆಡಿಟೋರಿಯಂ, ಬೆಂಗಳೂರು ಯಲ್ಲಿ ಆಯೋಜಿಸಲಾಗಿದೆ ಎಂದು ಸಂಘಟನೆಯ ರಾಜ್ಯ ಅಧ್ಯಕ್ಷರಾದ ಶ್ರೀ ಜಿ.ಆರ್. ಪ್ರದೀಪ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮವು ಮಧ್ಯಾಹ್ನ 3.00 ಗಂಟೆಗೆ ವಿಪ್ರ ಭಜನಾ ಮಂಡಳಿಯಿಂದ ಭಕ್ತಿಸಾರದೊಂದಿಗೆ ಆರಂಭಗೊಳ್ಳಲಿದ್ದು, 4.00 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಹಾಗೂ ಸಂಜೆ 5.00 ಗಂಟೆಗೆ ಸನ್ಮಾನ ಸಮಾರಂಭ ಮತ್ತು “ಭಾರ್ಗವ ಭೂಷಣ” ಪ್ರಶಸ್ತಿ ಪ್ರದಾನ ನಡೆಯಲಿದೆ.
ಈ ಸಮಾರಂಭದ ದಿವ್ಯ ಸನ್ನಿಧ್ಯವನ್ನು ಶ್ರೀ ಶ್ರೀ ಅರ್ಜುನ ಅವಧೂತ ಗುರುಜಿ, ಮೈಸೂರು ಅವರು ವಹಿಸಲಿದ್ದು, ಅವರ ಆಶೀರ್ವಚನವು ಸಮಾಜಕ್ಕೆ ಆತ್ಮಬಲ ಹಾಗೂ ಧಾರ್ಮಿಕ ಮಾರ್ಗದರ್ಶನವನ್ನು ನೀಡಲಿದೆ.
ಕಾರ್ಯಕ್ರಮವನ್ನು ಶ್ರೀ ಆರ್.ವಿ. ದೇಶಪಾಂಡೆ, ಮಾಜಿ ಸಚಿವರು ಹಾಗೂ ಶಾಸಕರು ಮತ್ತು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು (ಹಳಿಯಾಳ) ಅವರು ಉದ್ಘಾಟಿಸಲಿದ್ದು, ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಗೋವಿಂದ ಕುಲಕರ್ಣಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀ ಸಿ.ಕೆ. ರಾಮಮೂರ್ತಿ – ಶಾಸಕರು, ಜಯನಗರ, ಶ್ರೀ ವಿಶ್ವಾಸ್ ವೈದ್ಯ – ಶಾಸಕರು, ಸವದತ್ತಿ, ಶ್ರೀ ಅಸಗೋಡು ಜಯಸಿಂಹ – ಅಧ್ಯಕ್ಷರು, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಭಾಗವಹಿಸಿ, ಸಮಾಜದ ಇಂದಿನ ಸವಾಲುಗಳು ಹಾಗೂ ಭವಿಷ್ಯದ ದಿಕ್ಕುಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.
ಇದಲ್ಲದೆ, ಸಂಘಟನೆಯ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಮುಖರಾದ ಶ್ರೀ ಗಿರೀಶ್ ನೀಲಗುಂದ್ (ರಾಷ್ಟ್ರೀಯ ಕಾರ್ಯದರ್ಶಿ) ಹಾಗೂ ಶ್ರೀ ತ್ರಿವಿಕ್ರಮ್ ಜೋಶಿ (ಅಧ್ಯಕ್ಷರು – ಬ್ರಹ್ಮೋದ್ಯೋಗ) ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿಪ್ರ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಗಣ್ಯರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಈ ಸಂದರ್ಭದಲ್ಲಿ *“ಭಾರ್ಗವ ಭೂಷಣ ಪ್ರಶಸ್ತಿ”*ಯನ್ನು ಶ್ರೀ ಶ್ರೀನಾಥ್, ಶ್ರೀಮತಿ ಆಶಾ ದಿನೇಶ್, ಶ್ರೀ ವಿಶ್ವೇಶ್ವರ ಭಟ್, ಅರಳಿಮಲ್ಲಿಗೆ ಪಾರ್ಥಸಾರಥಿ ಹಾಗೂ ಶ್ರೀ ಜಿ. ಶ್ರೀನಿವಾಸ ರಾವ್ ಅವರಿಗೆ ಪ್ರದಾನಿಸಲಾಗುವುದು ಎಂದು ಶ್ರೀ ಜಿ.ಆರ್. ಪ್ರದೀಪ್ ಅವರು ತಿಳಿಸಿದ್ದಾರೆ.
ವಿಪ್ರೋತ್ಸವ – 2026 ಕೇವಲ ಸಾಂಸ್ಕೃತಿಕ ಉತ್ಸವವಲ್ಲ; ಇದು ವಿಪ್ರ ಸಮಾಜದ ಧಾರ್ಮಿಕ ಶ್ರದ್ಧೆ, ಶೈಕ್ಷಣಿಕ ಪ್ರಗತಿ, ಆರ್ಥಿಕ ಸ್ವಾವಲಂಬನೆ ಹಾಗೂ ಸಾಮಾಜಿಕ–ರಾಜಕೀಯ ಚಿಂತನೆಗಳಿಗೆ ಸ್ಪಷ್ಟ ದಿಕ್ಕು ನೀಡುವ ಮಹತ್ವದ ವೇದಿಕೆಯಾಗಿದ್ದು, ವಿಶೇಷವಾಗಿ ಯುವಜನತೆಗೆ ನಾಯಕತ್ವ ಮತ್ತು ಸೇವಾ ಮನೋಭಾವವನ್ನು ಬೆಳೆಸುವ ಪ್ರೇರಣೆಯಾಗಿ ಪರಿಣಮಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಸಮಸ್ತ ಬ್ರಾಹ್ಮಣ ಬಾಂಧವರು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಮಹತ್ವದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟನೆಯ ರಾಜ್ಯ ಅಧ್ಯಕ್ಷರಾದ ಶ್ರೀ ಜಿ.ಆರ್. ಪ್ರದೀಪ್, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶ್ರೀ ವಿಶ್ವನಾಥ್ ಜೋಶಿ, ಹಾಗೂ ಯುವ ರಾಜ್ಯ ಅಧ್ಯಕ್ಷರಾದ ಕಾರ್ತಿಕ್ ಸೋಮಯಾಜಿ ಅವರು ಮನವಿ ಮಾಡಿದ್ದಾರೆ.