ವಿವೇಕದೀಪ್ತಿ- ದಕ್ಷಿಣಾಸ್ಯದರ್ಶಿನೀ ಸಮಾವೇಶಕ್ಕೆ ಜ. 29 ರಂದು ಇಸ್ರೋ ಮಾಜಿ ಮುಖ್ಯಸ್ಥ ಡಾ|| ಎಸ್. ಸೋಮನಾಥ್ ಚಾಲನೆ ಜ. 31 ರಂದು ಶೃಂಗೇರಿ ಶ್ರೀಗಳಿಂದ ಆಶೀರ್ಚನ

varthajala
0

 ಬೆಂಗಳೂರು: ಆಧುನಿಕ ವಿಜ್ಞಾನವನ್ನು ಆಧರಿಸಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ತಂತ್ರಜ್ಞಾನ ಮುಂತಾದ ಪ್ರಯೋಗಗಳ ಮೂಲಕ ದಕ್ಷಿಣಾಮೂರ್ತಿ ಅಷ್ಟಕದಲ್ಲಿ ತಿಳಿಸಿದ ವಿಚಾರಗಳನ್ನು ಯುವ ಸಮೂಹಕ್ಕೆ ಮನಮುಟ್ಟುವಂತೆ ಪ್ರಸ್ತುತಪಡಿಸುವ ನಿಟ್ಟಿನಲ್ಲಿ ವೇದಾಂತ ಭಾರತಿ ಹಾಗೂ ಪರಮ್ ಫೌಂಡೇಶನ್ ನಿಂದ ಬೆಂಗಳೂರು ಅರಮನೆ ಮೈದಾನದಲ್ಲಿ ಜ.29 ರಿಂದ ಫೆ. 1ರ ವರೆಗೆ ರಾಷ್ಟ್ರಮಟ್ಟದ ಬೃಹತ್ “ವಿವೇಕ ದೀಪ್ತಿ” ಸಮಾವೇಶ ಆಯೋಜಿಸಲಾಗಿದೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ವೇದಾಂತ ಭಾರತಿ ಟ್ರಸ್ಟಿ ಹಾಗೂ ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಎಸ್.ಎಸ್. ನಾಗಾನಂದ, ಈ ದಕ್ಷಿಣಾಮೂರ್ತಿ ಅಷ್ಟಕದ ತತ್ತ್ವವನ್ನು ವಿದ್ಯಾರ್ಥಿಗಳಿಗೆ ಹಾಗೂ ಇಂದಿನ ಯುವಸಮುದಾಯಕ್ಕೆ ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ ಅರಮನೆ ಮೈದಾನ ತ್ರಿಪುರವಾಸಿನಿಯಲ್ಲಿ ‘ದಕ್ಷಿಣಾಸ್ಯದರ್ಶಿನೀ’ ಎನ್ನುವ ಪ್ರದರ್ಶನ ಏರ್ಪಡಿಸಲಾಗಿದೆ.  ಭಾರತೀಯ ಜ್ಞಾನ ಪರಂಪರೆಯನ್ನು ಆಧುನಿಕ ವಿಜ್ಞಾನದೊಂದಿಗೆ ಬೆಸೆಯುವ ವಿಶಿಷ್ಟ ಪ್ರಯತ್ನ ಇದಾಗಿದೆ. ಈ ಎಲ್ಲ ಪ್ರಯೋಗಗಳನ್ನು ಮುಖ್ಯವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಪ್ರಸ್ತುತಪಡಿಸಲಿದ್ದಾರೆ ಎಂದರು.

ಇದಕ್ಕೆ ಪೂರಕವಾಗಿ ವೇದಾಂತವನ್ನು ಅಭ್ಯಾಸ ಮಾಡಿದ ಸಂಸ್ಕೃತ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು, ವಿದ್ವಾಂಸರು ಆಯಾ ಪ್ರಯೋಗಕ್ಕೆ ಸಂಬಂಧಿಸಿದಂತೆ ಆಧ್ಯಾತ್ಮಿಕ ಅಂಶಗಳ ವಿವರಣೆ ನೀಡಲಿದ್ದಾರೆ. ಬೇರೆ ಬೇರೆ ಕಾಲೇಜು ಹಾಗೂ ಸಂಸ್ಥೆಗಳಿಂದ 50ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳು ಅನಾವರಣಗೊಳ್ಳಲಿವೆ. ಪ್ರತಿದಿನ ಬೆಳಿಗ್ಗೆ 10ಗಂಟೆಯಿಂದ ಸಂಜೆ 7.30ರವರೆಗೆ ಶಾಲಾಕಾಲೇಜಿನ ವಿದ್ಯಾರ್ಥಿಗಳು, ಯುವ ಸಮೂಹ  ಹಾಗೂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಜ. 31 ರಂದು  ಅರಮನೆ ಮೈದಾನ ಕೃಷ್ಣವಿಹಾರದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು, ಶೃಂಗೇರಿ ಶಾರದಾಪೀಠದ ಜಗದ್ಗುರು ವಿಧುಶೇಖರಭಾರತೀ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ ಎಂದರು.
ಜ.29 ರಂದು ಇಸ್ರೋ ಮಾಜಿ ಅಧ್ಯಕ್ಷ ಹಾಗೂ ಚಾಣಕ್ಯ ವಿ.ವಿ.ಯ ಕುಲಪತಿ ಡಾ|| ಎಸ್. ಸೋಮನಾಥ್ ದಕ್ಷಿಣಾಸ್ಯದರ್ಶಿನಿಯ ಉದ್ಘಾಟನೆ ನೆರವೇರಿಸಲಿದ್ದಾರೆ. ಪ್ರಸಿದ್ಧ ಇತಿಹಾಸ ತಜ್ಞ ಡಾ|| ವಿಕ್ರಮ್ ಸಂಪತ್ ಭಾಗವಹಿಸಲಿದ್ದಾರೆ. ಫೆ.1 ರ ಸಮಾರೋಪ ಸಮಾರಂಭದಲ್ಲಿ ಡಾ|| ಎಸ್. ಸೋಮನಾಥ್ ಹಾಗೂ ಡಿ.ಆರ್.ಡಿ.ಓ. ಮಾಜಿ ನಿರ್ದೇಶಕರಾದ ಪ್ರದ್ಮಶ್ರೀ ಪುರಸ್ಕೃತ ಪ್ರಹ್ಲಾದ್ ರಾವ್ ಭಾಗವಹಿಸಲಿದ್ದಾರೆ. ಅತ್ಯುತ್ತಮ ಪ್ರದರ್ಶನಕ್ಕೆ ಬಹುಮಾನ ನೀಡಿ ಗೌರವಿಸಲಾಗುವುದು ಎಂದರು.
ಪ್ರದರ್ಶನ ದರ್ಶಿನಿ ಮುಖ್ಯಸ್ಥ ಹಾಗೂ ಕೃತಕ ಬುದ್ದಿಮತ್ತೆ ತಂತ್ರಜ್ಞ ಡಾ. ಅಶೂತೋಶ್ ಸಿಂಹ ಮಾತನಾಡಿ, ಈ ನವೀನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೇದಾಂತದ 'ಮಾಯೆ', 'ಚೈತನ್ಯ'ದಂತಹ ದಾರ್ಶನಿಕ ವಿಚಾರಗಳನ್ನು ದೃಷ್ಟಿ, ಭ್ರಮೆ ಅಥವಾ ನರವಿಜ್ಞಾನದಂತಹ ಆಧುನಿಕ ತಂತ್ರಜ್ಞಾನದೊಂದಿಗೆ ಜೋಡಿಸಿ, ಸಂವಾದಾತ್ಮಕ ಪ್ರದರ್ಶಿಕೆಗಳನ್ನು ಸಿದ್ಧಪಡಿಸಲಿದ್ದಾರೆ ಎಂದರು.
ಟ್ರಸ್ಟಿ ಗೋಪಾಲ ಕೃಷ್ಣ ಮಾತನಾಡಿ. ದಕ್ಷಿಣಾಮೂರ್ತಿ ಅಷ್ಟಕದಲ್ಲಿ ತಿಳಿಸಿರುವ ಸಾರ್ವಕಾಲಿಕ ವಿಚಾರಗಳನ್ನು ಆಧರಿಸಿ ಯುವಜನಾಂಗದ ಅಂತಃಕರಣದಲ್ಲಿ ಸತ್ಯಾಸತ್ಯತೆಯ ವಿವೇಚನೆಯನ್ನು ಮೂಡಿಸಿ, ಜೀವನವನ್ನು ಸುಗಮವಾಗಿ ಸಾಗಿಸುವ ಮಾರ್ಗವನ್ನು ತೋರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಅತ್ಯಂತ ಮಹತ್ವದ್ದಾಗಿದೆ ಎಂದರು.
ಟ್ರಸ್ಟಿ ಎಚ್.ಎಲ್.ಎನ್ ಸಿಂಹ ಮಾತನಾಡಿ, ದಕ್ಷಿಣಾಮೂರ್ತಿ ಅಷ್ಟಕದ ಪಠಣ ಹಾಗೂ ಚಿಂತನೆಯು ಯುವಮನಸ್ಸುಗಳಲ್ಲಿ ಮೂಡುವ ಗೊಂದಲಗಳನ್ನು ನಿವಾರಿಸಿ, ವಿವೇಕವನ್ನು ಜಾಗೃತಗೊಳಿಸಿ, ವ್ಯಕ್ತಿತ್ವವನ್ನು ಉನ್ನತಗೊಳಿಸಿ, ಸದುದ್ದೇಶ ಸಮರಸಗಳಿಂದ ಕೂಡುವಂತೆ ಮಾಡುತ್ತದೆ ಎಂದರು.

Post a Comment

0Comments

Post a Comment (0)