ನಾಗರಿಕ - ಕೇಂದ್ರಿತ ಎಐ (AI) ನೀಲನಕ್ಷೆ ಅನಾವರಣ: ಪ್ರಿ ಸಮಿಟ್ ವರ್ಕಿಂಗ್ ಗ್ರೂಪ್ ಸಭೆಯಲ್ಲಿ ಮಹತ್ವದ ಘೋಷಣೆ

VK NEWS
0

ಕರ್ನಾಟಕ ಸರ್ಕಾರದಿಂದ ನಾಗರಿಕ - ಕೇಂದ್ರಿತ ಎಐ (AI) ನೀಲನಕ್ಷೆ ಅನಾವರಣ: ಪ್ರಿ ಸಮಿಟ್ ವರ್ಕಿಂಗ್ ಗ್ರೂಪ್ ಸಭೆಯಲ್ಲಿ ಮಹತ್ವದ ಘೋಷಣೆ

ದತ್ತಾಂಶಗಳ ಏಕೀಕರಣಕ್ಕೆ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ಕರೆ; ಕರ್ನಾಟಕ ಎಐ ಸೆಲ್ ನಿಂದ (KAIC) ಆಡಳಿತಾತ್ಮಕ ಪರಿಹಾರಗಳ ಪ್ರದರ್ಶನ.

ಬೆಂಗಳೂರು : ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ), ಇಂದು ಬೆಂಗಳೂರಿನ ಐಐಎಸ್‌ಸಿಯ ಎ.ವಿ. ರಾಮರಾವ್ ಆಡಿಟೋರಿಯಂನಲ್ಲಿ 'ಎಐ ಇಂಪ್ಯಾಕ್ಟ್ ಪ್ರಿ-ಸೃಮಿಟ್ ವರ್ಕಿಂಗ್ ಗ್ರೂಪ್' (AI Impact Pre-Summit Working Group) ಸಭೆಯನ್ನು ಆಯೋಜಿಸಿತ್ತು. ರಾಜ್ಯದ ಆಡಳಿತದಲ್ಲಿ ಕೃತಕ ಬುದ್ಧಿಮತ್ತೆಯ (AI) ಮಾರ್ಗಸೂಚಿಯನ್ನು ರೂಪಿಸಲು ಹಿರಿಯ ಸರ್ಕಾರಿ ಅಧಿಕಾರಿಗಳು, ಉದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವವರು, ಸಂಶೋಧಕರು ಮತ್ತು ಶೈಕ್ಷಣಿಕ ತಜ್ಞರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಪಾಲ್ಗೊಂಡ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನೀಶ್ ಅವರು, ಜಾಗತಿಕ ಮಟ್ಟದಲ್ಲಿ ಕರ್ನಾಟಕವು ಎಐ ಪ್ರತಿಭೆಗಳ ಪ್ರಮುಖ ತಾಣವಾಗಿರುವುದನ್ನು ಒತ್ತಿ ಹೇಳಿದರು. ಜಾಗತಿಕ ಬೇಡಿಕೆಯನ್ನು ಪೂರೈಸಲು ಮತ್ತು ಭವಿಷ್ಯಕ್ಕೆ ಸಿದ್ಧವಿರುವ ಮಾನವ ಸಂಪನ್ಮೂಲವನ್ನು ರೂಪಿಸಲು, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ಪ್ರಾಥಮಿಕ ಶಿಕ್ಷಣ ಹಂತದಲ್ಲೇ ಎಐ ಪಠ್ಯಕ್ರಮವನ್ನು ಅಳವಡಿಸುವ ಆಶಯವನ್ನು ಅವರು ವ್ಯಕ್ತಪಡಿಸಿದರು.

ದತ್ತಾಂಶಗಳ ಏಕೀಕರಣ: ‘ಡೇಟಾ ಲೇಕ್’ (Data Lake) ಉಪಕ್ರಮ

ತಮ್ಮ ಭಾಷಣದಲ್ಲಿ ಮುಖ್ಯ ಕಾರ್ಯದರ್ಶಿಗಳು, ಪ್ರತ್ಯೇಕವಾಗಿರುವ ದತ್ತಾಂಶ ನಿರ್ವಹಣೆಯಿಂದ (Silos) ಪರಸ್ಪರ ಕಾರ್ಯನಿರ್ವಹಿಸಬಲ್ಲ ‘ಡೇಟಾ ಲೇಕ್’ ವ್ಯವಸ್ಥೆಗೆ ರಾಜ್ಯವು ಬದಲಾಗುತ್ತಿರುವ ಬಗ್ಗೆ ತಿಳಿಸಿದರು. "ಪ್ರಸ್ತುತ ರೈತರು, ವಿದ್ಯಾರ್ಥಿಗಳು, ಭೂಮಿ ಮತ್ತು ಬೆಳೆಗಳಿಗೆ ಸಂಬಂಧಿಸಿದ ದತ್ತಾಂಶಗಳು ಪ್ರತ್ಯೇಕವಾಗಿವೆ, ಇದರಿಂದ ಅವುಗಳ ಮೌಲ್ಯ ಸೀಮಿತವಾಗಿದೆ," ಎಂದು ಅವರು ಹೇಳಿದರು.

ಕೃಷಿ ಕ್ಷೇತ್ರದಲ್ಲಿ ಈ ಹೊಸ ವಿಧಾನದ ಯಶಸ್ಸನ್ನು ಉಲ್ಲೇಖಿಸಿದ ಅವರು, "ಬೆಳೆ ಆರೋಗ್ಯ ಮತ್ತು ಮಣ್ಣಿನ ಪೋಷಕಾಂಶಗಳ ದತ್ತಾಂಶವನ್ನು ಒಗ್ಗೂಡಿಸುವ ಮೂಲಕ, 6,000 ಗ್ರಾಮ ಪಂಚಾಯಿತಿಗಳ ಪೈಕಿ ಕೇವಲ 300ಕ್ಕೆ ಮಾತ್ರ ನಿರ್ದಿಷ್ಟ ಪೋಷಕಾಂಶಗಳ ಅಗತ್ಯವಿದೆ ಎಂದು ನಾವು ಕಂಡುಕೊಂಡಿದ್ದೇವೆ. ಈ ನಿಖರತೆಯಿಂದ ರಸಗೊಬ್ಬರಗಳ ಸಮರ್ಪಕ ಹಂಚಿಕೆ ಸಾಧ್ಯವಾಗಿದ್ದು, ತ್ಯಾಜ್ಯ ತಡೆಗಟ್ಟಲು ಮತ್ತು ಸಂಪನ್ಮೂಲಗಳ ಸದ್ಬಳಕೆಗೆ ಸಹಕಾರಿಯಾಗಿದೆ," ಎಂದು ವಿವರಿಸಿದರು.

ನಾಗರಿಕರ ಸಬಲೀಕರಣ

ಸರ್ಕಾರಿ ಯೋಜನೆಗಳ ಸಂಕೀರ್ಣತೆ ಮತ್ತು ಅರ್ಹತಾ ಮಾನದಂಡಗಳನ್ನು ಸರಳಗೊಳಿಸುವ ನಿಟ್ಟಿನಲ್ಲಿ, ನಾಗರಿಕರು ತಮ್ಮ ಆಡುಭಾಷೆಯಲ್ಲೇ ಸರ್ಕಾರಿ ವೆಬ್‌ಸೈಟ್‌ಗಳೊಂದಿಗೆ ಸಂವಹನ ನಡೆಸಲು ಅನುವು ಮಾಡಿಕೊಡುವ 'ಧ್ವನಿ ಆಧಾರಿತ ಎಐ' (Voice-Enabled AI) ವ್ಯವಸ್ಥೆಯ ಬಗ್ಗೆ ಅವರು ಮಾತನಾಡಿದರು. ಗೌಪ್ಯತೆ ಮತ್ತು ರಾಜ್ಯದ ನಿಯಮಗಳಿಗೆ ಬದ್ಧವಾಗಿ ಡಿಜಿಟಲ್ ಕಂದರವನ್ನು ನಿವಾರಿಸುವುದು ಇದರ ಉದ್ದೇಶವಾಗಿದೆ. ಇದೇ ವೇಳೆ, ಆರೋಗ್ಯ ಕ್ಷೇತ್ರದಲ್ಲಿ ಹೃದಯಾಘಾತದ ಕಾರಣಗಳನ್ನು ಪತ್ತೆಹಚ್ಚಲು ಮತ್ತು ವೈದ್ಯರಿಗೆ ನೆರವಾಗಲು 'ಪ್ರಿಡಿಕ್ಟಿವ್ ಅನಾಲಿಟಿಕ್ಸ್' (Predictive Analytics) ಬಳಕೆಯ ಮಹತ್ವವನ್ನೂ ಅವರು ತಿಳಿಸಿದರು.

ಎಐ ಅನುಷ್ಠಾನ: 4-ಹೆಲಿಕ್ಸ್ ಮಾದರಿ

ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಇ-ಆಡಳಿತ) ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪಂಕಜ್ ಕುಮಾರ್ ಪಾಂಡೆ (ಐಎಎಸ್), ಎಐ ಅನುಷ್ಠಾನಕ್ಕಾಗಿ "ಬೆಂಗಳೂರು ಡಿವಿಡೆಂಡ್" ಹೆಸರಿನ 4-ಹೆಲಿಕ್ಸ್ ಚೌಕಟ್ಟನ್ನು ಪರಿಚಯಿಸಿದರು. ಇದು ವ್ಯಾಪ್ತಿ , ಪ್ರತಿಭೆ , ಜನಸಂಖ್ಯಾಶಾಸ್ತ್ರ ಮತ್ತು ಇಚ್ಛಾಶಕ್ತಿ ಅಂಶಗಳನ್ನು ಒಳಗೊಂಡಿದೆ.

ಹಣಕಾಸು ಇಲಾಖೆಯು 35 ಲಕ್ಷ ನೀರಾವರಿ ಪಂಪ್‌ಸೆಟ್‌ಗಳಿಗೆ ನೀಡುತ್ತಿರುವ 20,000 ಕೋಟಿ ರೂ.ಗಳ ಸಹಾಯಧನದ ಉದಾಹರಣೆಯನ್ನು ನೀಡಿದ ಅವರು, "ಎಐ ಬಳಸುವ ಮೂಲಕ ಬೆಳೆಗಳ ದತ್ತಾಂಶ ಮತ್ತು ನೀರಿನ ಅಗತ್ಯತೆಯನ್ನು ಮ್ಯಾಪ್ ಮಾಡಿದರೆ, ನೀರಿನ ಬಳಕೆಯನ್ನು ಅತ್ಯುತ್ತಮವಾಗಿಸಬಹುದು. ಇದು ಮಣ್ಣಿನ ಸವೆತವನ್ನು ತಗ್ಗಿಸುವುದಲ್ಲದೆ, ಸಹಾಯಧನದ ಹೊರೆಯನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಸಹಾಯಕವಾಗಲಿದೆ," ಎಂದು ವಿವರಿಸಿದರು.

ಕರ್ನಾಟಕ ಎಐ ಸೆಲ್ (KAIC):  ನಾವಿನ್ಯತೆ 

ಸಲಹೆ, ಪರಿಹಾರ ಅಭಿವೃದ್ಧಿ, ಸಹಭಾಗಿತ್ವ ಮತ್ತು ಸಾಮರ್ಥ್ಯ ಸಂಘಟನೆ ಎಂಬ ನಾಲ್ಕು ಸ್ತಂಭಗಳ ಮೇಲೆ ನಿರ್ಮಿತವಾಗಿದೆ ಎಂದು ಕರ್ನಾಟಕ ಎಐ ಸೆಲ್ ನ ಸ್ಥಾಪನೆಯ ಬಗ್ಗೆ ಶ್ರೀಯುತ ಪಂಕಜಕುಮಾರ್ ಪಾಂಡೆ ಅವರು ವಿವರಿಸಿದರು. ಆಡಳಿತಾತ್ಮಕ ಸುಧಾರಣೆಗಳಲ್ಲಿ ಕ್ರಾಂತಿ ಮೂಡಿಸುತ್ತಿರುವ ಪ್ರಮುಖ ಎಐ ಪ್ರಾಡಕ್ಟ್ ಗಳನ್ನು ಅವರು ಪಟ್ಟಿ ಮಾಡಿದರು:

ಕರ್ತವ್ಯ (Kartavya): 1.5 ಲಕ್ಷಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ ಎಐ ಆಧಾರಿತ ಹಾಜರಾತಿ ನಿರ್ವಹಣಾ ವ್ಯವಸ್ಥೆ.

ಮಜಲ್ ಪ್ರಿಂಟ್ (Muzzle Print): ರೈತರಿಗೆ ಪ್ರಯೋಜನಗಳ ಸಮರ್ಪಕ ವಿತರಣೆ ಖಾತ್ರಿಪಡಿಸಲು ಜಾನುವಾರುಗಳಿಗೆ ಬಳಸುವ ವಿಶಿಷ್ಟ ಬಯೋಮೆಟ್ರಿಕ್ ಮೂಲಕ ಗುರುತಿಸುವಿಕೆ (ಮೂಗು ಮುದ್ರೆ).

ನಿರಂತರ- ವಿದ್ಯಾರ್ಥಿ ಹಾಜರಾತಿ ನಿರ್ವಹಣಾ ವ್ಯವಸ್ಥೆ: 50 ಲಕ್ಷಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿಗಾಗಿ ಎಐ ಆಧಾರಿತ ಹಾಜರಾತಿ ನಿರ್ವಹಣಾ ವ್ಯವಸ್ಥೆ. 

ಸಾರಾಂಶ (Saaramsha): ಸರ್ಕಾರಿ ಆದೇಶಗಳು, ಅಧಿಸೂಚನೆಗಳು ಮತ್ತು ಸುತ್ತೋಲೆಗಳನ್ನು ತ್ವರಿತವಾಗಿ ಅರ್ಥೈಸಿಕೊಳ್ಳಲು ಸಾರಾಂಶ ನೀಡುವ ಎಐ ಸಾಧನ (ಪ್ರಾಯೋಗಿಕ ಹಂತದಲ್ಲಿದೆ).

ಇಂಧನ ವಲಯದ ಭವಿಷ್ಯ

ಇಂಧನ ಸಚಿವಾಲಯದ (ಭಾರತ ಸರ್ಕಾರ) ಜಂಟಿ ಕಾರ್ಯದರ್ಶಿ ಶ್ರೀ ಶಶಾಂಕ್ ಮಿಶ್ರಾ (ಐಎಎಸ್) ಅವರು ಇಂಡಿಯಾ ಎನರ್ಜಿ ಸ್ಟಾಕ್ ಮತ್ತು ಯುನಿಫೈಡ್ ಎನರ್ಜಿ ಇಂಟರ್ಫೇಸ್ (UEI) ಕುರಿತು ಮಾತನಾಡಿದರು. ಇಂಧನ ವಲಯದಲ್ಲಿ ಪೀಯರ್-ಟು-ಪೀಯರ್ ಟ್ರೇಡಿಂಗ್ ವೇದಿಕೆಯು ತರಲಿರುವ ಬದಲಾವಣೆಗಳನ್ನು ವಿವರಿಸಿದ ಅವರು, ಇನೋವೇಷನ್ಸ್, ರೆಸಿಲಿಯೆನ್ಸ್  ಮತ್ತು ಎಫಿಶಿಯನ್ಸಿ ಮೇಲೆ ವರ್ಕಿಂಗ್ ಗ್ರೂಪ್ ಕೇಂದ್ರೀಕರಿಸಿದೆ ಹಾಗೂ ಸಾಮಾಜಿಕ ಪ್ರಯೋಜನಗಳನ್ನು ನೀಡುವ ಎಐ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುತ್ತಿದೆ ಎಂದು ಅವರು ಹೇಳಿದರು. 

ರಾಷ್ಟ್ರೀಯ ದೃಷ್ಟಿಕೋನ: ದೆಹಲಿಯತ್ತ ಪಯಣ

ಸಭೆಯ ಮುಕ್ತಾಯದ ಹಂತದಲ್ಲಿ, ಮೀಟಿ (MeitY) ಹಿರಿಯ ವಿಜ್ಞಾನಿ ಶ್ರೀ ಅಭಿಷೇಕ್ ಅಗರ್ವಾಲ್ ಅವರು ಫೆಬ್ರವರಿ 19-20, 2026 ರಂದು ನವದೆಹಲಿಯಲ್ಲಿ ನಡೆಯಲಿರುವ 'ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್ ನ ರಾಷ್ಟ್ರೀಯ ದೃಷ್ಟಿಕೋನವನ್ನು ಮಂಡಿಸಿದರು. ಇದು "3 ಸೂತ್ರಗಳು" (ಜನ, ಗ್ರಹ ಮತ್ತು ಪ್ರಗತಿ) ಮತ್ತು "7 ಚಕ್ರಗಳು" ಎಂಬ ವಿಷಯಾಧಾರಿತ ಗುಂಪುಗಳ ಮೂಲಕ ಕಾರ್ಯನಿರ್ವಹಿಸಲಿದೆ ಎಂದು ಅವರು ತಿಳಿಸಿದರು.

ಸಹಯೋಗಕ್ಕೆ ಕರೆ

ಸಾಮಾಜಿಕ ಒಳಿತಿಗಾಗಿ ನಾಗರಿಕ ಕೇಂದ್ರಿತ ಎಐ ಅಪ್ಲಿಕೇಶನ್‌ಗಳನ್ನು ರೂಪಿಸಲು ಜಿಸಿಸಿಗಳು (GCCs), ಐಟಿ ಸಂಸ್ಥೆಗಳು ಮತ್ತು ಸ್ಟಾರ್ಟ್‌ಅಪ್‌ಗಳು ಕೈಜೋಡಿಸುವಂತೆ ಕರ್ನಾಟಕ ಸರ್ಕಾರ ಆಹ್ವಾನಿಸಿದೆ. "ಇದು ಕರ್ನಾಟಕ ಸೇವೆ ಸಲ್ಲಿಸುವ ಮತ್ತು ಜಗತ್ತಿನಾದ್ಯಂತ ಬೆಳಕು ಚೆಲ್ಲುವ ಸಮಯ," ಎಂದು ಮುಖ್ಯ ಕಾರ್ಯದರ್ಶಿಗಳು ತಿಳಿಸಿದರು.

Post a Comment

0Comments

Post a Comment (0)