ಕೋಳಿ ಸಾಕಾಣಿಕೆ ಕ್ಷೇತ್ರದ ಕಂಪನಿಗಳ ಶೋಷಣೆಯಿಂದ ರೈತರನ್ನು ರಕ್ಷಿಸಲು ಇಂದಿನ ಕೋಳಿ ಸಾಕಾಣಿಕಾ ವೆಚ್ಚ ಪರಿಗಣಿಸಿ ಕೋಳಿ ಸಾಕಾಣಿಕೆ ದರವನ್ನು ಹೆಚ್ಚಿಸಲು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರ ರೈತರ ಕ್ಷೇಮಾಭಿವೃದ್ಧಿ ಸಂಘ ಕರ್ನಾಟಕ ರಾಜ್ಯ ಸಮಿತಿ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತದೆ. ತಮಿಳುನಾಡು ರಾಜ್ಯದಲ್ಲಿ ಕೋಳಿ ಸಾಕಾಣಿಕೆದಾರ ರೈತರ ಪ್ರತಿಭಟನೆಗೆ ಸ್ಪಂದಿಸಿರುವ ತಮಿಳುನಾಡು ವಿಧಾನ ಸಭೆ ಸಾಕಾಣಿಕೆ ದರ ಹೆಚ್ಚಿಸುವುದಾಗಿ ನಿರ್ಣಯ ಅಂಗೀಕರಿಸಿದ್ದು , ಕಂಪನಿ ಶೋಷಣೆ ವಿರುದ್ದ ನಿರ್ಣಾಯಕ ಗೆಲುವು ಸಾಧಿಸಿದ ತಮಿಳುನಾಡು ಕೋಳಿ ಸಾಕಾಣಿಕೆದಾರರನ್ನು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರ ರೈತರ ಕ್ಷೇಮಾಭಿವೃದ್ಧಿ ಸಂಘ ಕರ್ನಾಟಕ ರಾಜ್ಯ ಸಮಿತಿ ಹೃತ್ಪೂವರ್ಕವಾಗಿ ಅಭಿನಂದಿಸುತ್ತದೆ.
ಈ ಹಿಂದೆ ಅಂದರೆ 2021 ರಲ್ಲಿ ಕೋಳಿ ಸಾಕಾಣಿಕೆ ದರವನ್ನು ಪರಿಷ್ಕರಿಸಿದ್ದ ಕರ್ನಾಟಕ ರಾಜ್ಯ ಸರ್ಕಾರವು ಆರು ವರ್ಷಗಳು ಕಳೆದರೂ ಸಾಕಾಣಿಕೆ ವೆಚ್ಚ ಪರಿಷ್ಕರಿಸಬೇಕು ಎಂಬ ಕೋಳಿ ಸಾಕಾಣಿಕೆ ರೈತರ ಹಕ್ಕೋತ್ತಾಯಗಳನ್ನು ನಿರ್ಲಕ್ಷಿಸುತ್ತಾ ಬಂದಿದೆ. ಕೋಳಿ ಸಾಕಾಣಿಕೆದಾರ ರೈತರ ತೀವ್ರ ಪ್ರತಿಭಟನೆ ಮತ್ತು ಒತ್ತಡ ಹೆಚ್ಚಾದ ನಂತರವಷ್ಟೇ ಜನವರಿ 31 ರಂದು ಕಂಪನಿ ಪ್ರತಿನಿಧಿಗಳು ಹಾಗೂ ಕೋಳಿ ಸಾಕಾಣಿಕೆ ರೈತ ಮುಖಂಡರ ಸಭೆಯನ್ನು ಪಶುಸಂಗೋಪನೆ ಆಯುಕ್ತರು ತಮ್ಮ ಕಛೇರಿಯಲ್ಲಿ ಕರೆದಿದ್ದಾರೆ. ಈ ಸಭೆಯಲ್ಲಿ ಯಾವುದೇ ನೆಪ ಹೇಳದೇ ಕೋಳಿ ಸಾಕಾಣಿಕೆ ವೆಚ್ಚವನ್ನು ವೈಜ್ಞಾನಿಕವಾಗಿ ಲೆಕ್ಕಹಾಕಿ ಎಂ.ಎಸ್ ಸ್ವಾಮಿನಾಥನ್ ಆಯೋಗದ ಶಿಪಾರಸ್ಸಿನಂತೆ ಶೇ 50 ರ ಲಾಭಾಂಶ ಸೇರಿಸಿ ಕೋಳಿ ಸಾಕಾಣಿಕೆ ದರ ನಿಗದಿ ಮಾಡಬೇಕು. ಕಂಪನಿಗಳಿಂದ ರೈತರಿಗೆ ಆಗುತ್ತಿರುವ ಕಿರುಕುಳ, ದೌರ್ಜನ್ಯದ ವಿರುದ್ಧ ರಕ್ಷಣೆ ನೀಡಬೇಕು , ಕೋಳಿ ಸಾಕಾಣಿಕೆಯನ್ನು ಕೃಷಿ ಎಂದು ಪರಿಗಣಿಸಲು ಕರ್ನಾಟಕ ರಾಜ್ಯ ಭೂ ಕಂದಾಯ ಕಾಯ್ದೆ 1964 ರ 95(1) D ಗೆ ಸೂಕ್ತ ತಿದ್ದುಪಡಿ ಮಾಡಬೇಕು, ಸಹಸ್ರಾರು ಕೋಟಿ ರೂಗಳ ಕುಕ್ಕಟ ಉದ್ದಿಮೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಹಾಗೂ ಸೂಕ್ತ ರೀತಿಯಲ್ಲಿ ನಿಯಂತ್ರಿಸಲು ಅನುಕೂಲವಾಗುವಂತೆ ಈಗಾಗಲೇ ಸಿದ್ದಪಡಿಸಿರುವ ಕರ್ನಾಟಕ ಕುಕ್ಕಟ ಅಭಿವೃದ್ಧಿ ಹಾಗೂ ನಿಯಂತ್ರಣ ಮಸೂದೆ 2022 ಅನ್ನು ಜಾರಿಗೆ ತರಲು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರ ರೈತರ ಕ್ಷೇಮಾಭಿವೃದ್ಧಿ ಸಂಘ ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ. ರೇಷ್ಮೆ ಸಾಕಾಣಿಕೆ ರೈತರಿಗೆ ರೇಷ್ಮೆ ಸಾಕಾಣಿಕೆ ಮನೆ ನಿರ್ಮಾಣಕ್ಕೆ ಸಹಾಯಧನ ನೀಡುವ ಮಾದರಿಯಲ್ಲಿ ಹಾಗೂ ಹೈನುಗಾರಿಕೆ ರೈತರಿಗೆ ನೀಡುತ್ತಿರುವ ಸಹಾಯಧನದ ಮಾದರಿಯಲ್ಲಿ ಕೋಳಿ ಸಾಕಾಣಿಕೆದಾರ ರೈತರಿಗೂ ಸೌಲಭ್ಯಗಳು ಹಾಗೂ ಸಹಾಯಧನ ಸಿಗುವಂತೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು. ಕೆಎಂಎಫ್ ಮಾದರಿಯಲ್ಲಿ ಕೋಳಿ ಮಾಂಸ ಹಾಗೂ ಮೊಟ್ಟೆ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಿ ಕೋಳಿ ಸಾಕಾಣಿಕೆ ರೈತರನ್ನು ರಕ್ಷಿಸಬೇಕು ಎಂದು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರ ರೈತರ ಕ್ಷೇಮಾಭಿವೃದ್ಧಿ ಸಂಘ ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸುತ್ತದೆ.