ಬೆಂಗಳೂರು : ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ ಹಾಗೂ ತಂತ್ರಜ್ಞರ ಒಕ್ಕೂಟದ ಆವರಣದಲ್ಲಿ ಇಂದು ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಸರ್ವ ಸದಸ್ಯರ ಸಭೆ ನಡೆಯಿತು. ಸಭೆಗೆ ಒಕ್ಕೂಟದ ಅಧ್ಯಕ್ಷರಾದ ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸೋಮಶೇಖರ್ ಅವರು, ಪದ್ಮಿನಿ ನಂದ ಅವರ ನೇತೃತ್ವದ ಚಲನಚಿತ್ರ ಪೋಷಕ ಕಲಾವಿದರ ಸಂಘದ ಸದಸ್ಯರಿಗೆ ಒಕ್ಕೂಟದ ಗೌರವ ಸದಸ್ಯತ್ವ ನೀಡುವ ವಿಷಯವನ್ನು ಒಕ್ಕೂಟದ ಸಭೆಯಲ್ಲಿ ಅಂಗೀಕರಿಸಲಾಗಿದೆ ಎಂದು ಪ್ರಕಟಿಸಿದರು.
ಇದರೊಂದಿಗೆ ಪೋಷಕ ಕಲಾವಿದರ ಸಂಘಕ್ಕೆ ಅಧಿಕೃತ ಮಾನ್ಯತೆ ದೊರೆತಿದೆ ಎಂದರು. ಪೋಷಕ ಕಲಾವಿದರ ಸಂಘದ ಅಧ್ಯಕ್ಷೆ ಪದ್ಮಿನಿ ನಂದ, ಕಾರ್ಯದರ್ಶಿ ಮೂಗ್ ಸುರೇಶ್ ಹಾಗೂ ಪದಾಧಿಕಾರಿಗಳ ದೀರ್ಘಕಾಲದ ಹೋರಾಟದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಸಭೆಯಲ್ಲಿ ಪೋಷಕ ಕಲಾವಿದರ ಸಂಘದ ಗೌರವಧ್ಯಕ್ಷ ರವಿಶಂಕರ್, ಹಿರಿಯ ಕಲಾವಿದರಾದ ಮಾಲತಿ ಸುಧೀರ್, ರಥಸಪ್ತಮಿ ಅರವಿಂದ್, ಮೈಸೂರ್ ರಮಾನಂದ, ಮಿತ್ರ, ಅಪೂರ್ವ, ಕವಿತಾ ಶೆಟ್ಟಿ, ಉಮಾ ಹೆಬ್ಬಾರ್, ಪ್ರೀತಿ ಸೇರಿದಂತೆ ಅನೇಕ ಪೋಷಕ ಕಲಾವಿದರು ಉಪಸ್ಥಿತರಿದ್ದರು.